ನವಂಬರ್ 25ರಂದು ದಕ್ಷಿಣ ಕನ್ನಡದಲ್ಲಿ ಬೃಹತ್ ರಕ್ತದಾನ ಅಭಿಯಾನ; 14 ರಕ್ತನಿಧಿ ಕೇಂದ್ರಗಳಲ್ಲಿ ಶಿಬಿರ – ಡಾ. ಎಚ್.ಆರ್. ತಿಮ್ಮಯ್ಯ
ಮಂಗಳೂರು: ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ಯಾವುದೇ ಜೀವ ಅಪಾಯಕ್ಕೆ ಸಿಲುಕಬಾರದು ಎಂಬ ಮಾನವೀಯ ಆಶಯದೊಂದಿಗೆ ನವೆಂಬರ್ 25ರಂದು ರಾಜ್ಯಾದ್ಯಂತ ಬೃಹತ್ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಕ್ತನಿಧಿ ಕೇಂದ್ರಗಳ ವ್ಯಾಪ್ತಿಯಲ್ಲಿಯೂ ಬೃಹತ್ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಅವರು ತಿಳಿಸಿದ್ದಾರೆ.


ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರ ಸೂಚನೆಯಂತೆ ಕರ್ನಾಟಕ ರಾಜ್ಯ ರಕ್ತನಿಧಿ ಪರಿಷತ್ತು ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಈ ಅಭಿಯಾನ ನಡೆಯಲಿದೆ. ಜಿಲ್ಲೆಯ 14 ರಕ್ತನಿಧಿ ಕೇಂದ್ರಗಳ ಮೂಲಕ ವಿವಿಧ ಸ್ಥಳಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ತಿಮ್ಮಯ್ಯ ಅವರು, ರಕ್ತಕ್ಕೆ ಪರ್ಯಾಯವಾಗಿ ಮತ್ತೊಂದು ವಸ್ತುವಿಲ್ಲ. ಕೃತಕವಾಗಿ ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ಆದ್ದರಿಂದ ಸ್ವಯಂಪ್ರೇರಿತ ರಕ್ತದಾನವೇ ರಕ್ತದ ಅಗತ್ಯವಿರುವ ರೋಗಿಗಳ ಜೀವ ಉಳಿಸುವ ಪ್ರಮುಖ ಮಾರ್ಗವಾಗಿದೆ ಎಂದು ತಿಳಿಸಿದರು.

ಒಬ್ಬ ವ್ಯಕ್ತಿ ನೀಡುವ ಒಂದು ಯೂನಿಟ್ ರಕ್ತವನ್ನು ಸಂಸ್ಕರಿಸಿ ಅದರ ವಿವಿಧ ಘಟಕಗಳ ಮೂಲಕ ನಾಲ್ವರು ರೋಗಿಗಳಿಗೆ ನೆರವಾಗಬಹುದು. ಹೀಗಾಗಿ ಒಬ್ಬರ ರಕ್ತದಾನ ನಾಲ್ಕು ಜೀವಗಳಿಗೆ ಆಶಾಕಿರಣವಾಗಬಲ್ಲದು. ರಕ್ತದಾನವು ಕೇವಲ ದಾನವಲ್ಲ, ಮತ್ತೊಬ್ಬರ ಬದುಕಿಗೆ ಹೊಸ ಭರವಸೆ ನೀಡುವ ಅಮೂಲ್ಯ ಸೇವೆಯಾಗಿದೆ ಎಂದು ಅವರು ವಿವರಿಸಿದರು.
18 ವರ್ಷ ಮೇಲ್ಪಟ್ಟ ಹಾಗೂ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆರೋಗ್ಯವಂತರು ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡಲು ಮುಂದೆ ಬರುವವರು ಸ್ವಯಂಪ್ರೇರಣೆಯಿಂದ ಶಿಬಿರಗಳಲ್ಲಿ ಭಾಗವಹಿಸಿ, ಜೀವ ಉಳಿಸುವ ಈ ಮಹತ್ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

‘ಮಾನವೀಯತೆಯೊಂದೇ ಹನಿ, ರಕ್ತ ನೀಡಿ ಜೀವ ಉಳಿಸಿ’ ಎಂಬ ಆಶಯದೊಂದಿಗೆ ನಡೆಯಲಿರುವ ಈ ಅಭಿಯಾನದಲ್ಲಿ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಯುವಜನರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆರೋಗ್ಯ ಇಲಾಖೆ ಕರೆ ನೀಡಿದೆ.
ರಕ್ತದಾನದ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಕರ್ನಾಟಕ ರಾಜ್ಯ ರಕ್ತನಿಧಿ ಪರಿಷತ್ತಿನ ಅಧಿಕೃತ ವೆಬ್‌ಸೈಟ್ www.blood.kar.nic.in ಸಂಪರ್ಕಿಸಬಹುದು ಎಂದು ಇಂದು ನವಂಬರ್ 20ರಂದು ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ತಿಳಿಸಿದರು.



