ಇತಿಹಾಸ ಪ್ರಸಿದ್ಧ ಅಜಿಲಮೊಗರು ಉರೂಸ್ಗೆ ಸಜ್ಜು
ಭಕ್ತರ ಅನುಕೂಲಕ್ಕೆ ಸೌಹಾರ್ದ ಸೇತುವೆಯಲ್ಲಿ ಪಾದಯಾತ್ರೆಗೆ ಅವಕಾಶ

ಮಾಣಿ: ಹಝ್ರತ್ ಬಾಬಾ ಫಕ್ರುದ್ದೀನ್ ಔಲಿಯಾ (ರ) ಅವರ ಸ್ಮರಣಾರ್ಥ ಆಚರಿಸಿಕೊಂಡು ಬರುವ ಇತಿಹಾಸ ಪ್ರಸಿದ್ಧ ಅಜಿಲಮೊಗರು ಮಾಲಿದಾ ಉರೂಸ್ ಸಮಾರಂಭವು ಇದೇ ನವೆಂಬರ್ 21ರಿಂದ 25ರವರೆಗೆ ನಡೆಯಲಿದೆ.
ಈ ಬಾರಿಯ ಉರೂಸ್ಗೆ ವಿಶೇಷ ಆಕರ್ಷಣೆಯಾಗಿ ಕಡೇಶಿವಾಲಯ ಮತ್ತು ಅಜಿಲಮೊಗರು ಸಂಪರ್ಕಿಸುವ ಬಹುವರ್ಷಗಳ ಕನಸಿನ ಸೌಹಾರ್ದ ಸೇತುವೆ ಭಕ್ತರ ಸಂಚಾರಕ್ಕೆ ಸಿದ್ಧಗೊಂಡಿದೆ. ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದರೂ, ವಾಹನ ಸಂಚಾರಕ್ಕೆ ಇನ್ನೂ ಅವಕಾಶ ಕಲ್ಪಿಸಲಾಗಿಲ್ಲ. ಆದರೆ ಉರೂಸ್ಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಈ ಬಾರಿ ಸೇತುವೆಯ ಮೇಲೆ ನಡೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ.

ಗಡಿಯಾರ ಮೂಲಕ ಕಡೇಶಿವಾಲಯ ಮಾರ್ಗವಾಗಿ ಬರುವ ಭಕ್ತರು ಸೇತುವೆಯ ಈ ಭಾಗದಲ್ಲಿ ಸ್ವಯಂಸೇವಕರು ಸೂಚಿಸುವ ನಿರ್ದಿಷ್ಟ ಸ್ಥಳದಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ಅಲ್ಲಿಂದ ಸೇತುವೆಯ ಮೇಲೆ ನಡೆದುಕೊಂಡು ಅಜಿಲಮೊಗರು ಉರೂಸ್ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು ಎಂದು ಇಝ್ಝತ್ ಗಯ್ಸ್, ಪಟೇಲ್ ಸ್ವಯಂಸೇವಕರು ಹಾಗೂ ಕಡೇಶಿವಾಲಯ ಸಮಿತಿ ತಿಳಿಸಿದೆ.

ಬಹುವರ್ಷಗಳ ನಿರೀಕ್ಷೆಯ ಸೌಹಾರ್ದ ಸೇತುವೆಯ ಮೇಲೆ ನಡೆದುಕೊಂಡು ಉರೂಸ್ಗೆ ತೆರಳುವ ಅವಕಾಶ ಈ ಬಾರಿ ಭಕ್ತರಿಗೆ ವಿಶೇಷ ಅನುಭವವಾಗಲಿದೆ. ಉರೂಸ್ ಸಂದರ್ಭದಲ್ಲಿ ಭಕ್ತರು ಸ್ವಯಂಸೇವಕರ ಸೂಚನೆಗಳನ್ನು ಪಾಲಿಸಿ, ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಸಹಕರಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.



