April 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ 5ನೇ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ

ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ – ಡಾ. ಮೋಹನ್ ಆಳ್ವ

ಮಂಗಳೂರು, ದಶಂಬರ್ 5 : ಸಮಾಜ ಕಟ್ಟುವಲ್ಲಿ ಪಾತ್ರ ಮುಖ್ಯ. ಮಾಧ್ಯಮ ಜೀವನದ ಅವಿಭಾಜ್ಯ ಅಂಗವಾಗಿದೆ, ಶಿಕ್ಷಣ, ಮಾಹಿತಿ ವಿತರಣೆ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿದೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ತಿಳಿಸಿದ್ದಾರೆ. ಅವರು ನಗರದ ಕುದ್ಮುಲ್ ರಂಗರಾವ್ ಪುರಭವನದ ದಿ. ಮನೋಹರ ಪ್ರಸಾದ್ ವೇದಿಕೆ, ದಿ. ಭುವನೇಂದ್ರ ಪುದುವೆಟ್ಟು ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ 5ನೇ ಜಿಲ್ಲಾ ಸಮ್ಮೇಳನವನ್ನು ದಶಂಬರ್ 5ರಂದು ಗುರುವಾರ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮಾಧ್ಯಮಗಳು ಸಮಾಜದ ದುರ್ಬಲರಿಗೆ ಅಶಕ್ತರಿಗೆ ಶಕ್ತಿ ನೀಡಿದೆ. ಮಾಧ್ಯಮದ ಅತೀರಂಜಿತ ಸುದ್ದಿ, ಸತ್ಯ ನೈತಿಕತೆಯ ಮರೆತ ಸುಳ್ಳು ಸುದ್ದಿ, ಸಾಮಾಜಿಕ ಮಾಧ್ಯಮಗಳಲ್ಲಿ ಸಮಾಜದ ನೈತಿಕತೆಯನ್ನು ಅಪಹಾಸ್ಯ ಮಾಡುವಂತಿದೆ. ಮಾಧ್ಯಮಗಳ ಸಂಶೋಧನೆ, ಆಳವಾದ ಚಿಂತನೆಯ ಮೂಲಕ ಸಮಾಜವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟುವ ಅಗತ್ಯವಿದೆ ಎಂದರು.


ಯುವ ಜನರಲ್ಲಿ ಓದುವ ಹವ್ಯಾಸ ಕುಂಠಿತವಾಗಬಾರದು – ಶಿವ ಸುಬ್ರಹ್ಮಣ್ಯ
   ಸಮ್ಮೇಳನದ ಸರ್ವಾಧ್ಯಕ್ಷ ಶಿವಸುಬ್ರಹ್ಮಣ್ಯ ನಾತನಾಡುತ್ತಾ, ಇತ್ತೀಚಿನ ಡಿಜಿಟಲ್ ಕ್ರಾಂತಿಯಿಂದ ಪತ್ರಕರ್ತರು ನಲುಗಿದ್ದಾರೆ. ಈ ಕ್ರಾಂತಿ, ಆತಂಕವನ್ನು ಸೃಷ್ಟಿಸಿದೆ. ತಾನು ಆರಂಭದಲ್ಲಿ ಮುಂಗಾರು ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಬಳಿಕ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ ಬಳಿಕ ಕಂಪೆನಿ ಕಲ್ಚರ್ ಗೆ ಬಗ್ಗಿಕೊಳ್ಳದೆ ವೃತ್ತಿಪರ ಮಾಧ್ಯಮ ಕ್ಷೇತ್ರದಿಂದ ನಿರ್ಗಮಿಸಿದೆ. ಪತ್ರಿಕಾಲಯದ ಕೆಟ್ಟ ನಡವಳಿಕೆ ನನ್ನನ್ನು ದುರ್ಬಲ ಗೊಳಿಸಿದೆ. ಪತ್ರಕರ್ತರ ಗ್ರಾಮ ವಾಸ್ತವ್ಯದ ಮೂಲಕ  ಸರಕಾರ ಮಾಡದ ಕೆಲಸ ಪತ್ರಕರ್ತರು ಮಾಡುತ್ತಿರುವುದು ಶ್ಲಾಘನೀಯ. ಪತ್ರಿಕೋದ್ಯಮ ಒಂದು ಅದ್ಭುತ ಲೋಕ‌. ಆದರೆ ನಾನು ಪತ್ರಿಕೋದ್ಯಮದ ಕಲುಷಿತ ವಾತಾವರಣವನ್ನು ಸಂವೇದನೆ ಕಳೆದು ಕೊಂಡಿರುವುದನ್ನು, ಗುಂಪುಗಾರಿಕೆಯನ್ನು ಹಣದ ಹಪಹಪಿಕೆಯ ಪತ್ರಕರ್ತರನ್ನು ಕಂಡಿದ್ದೇನೆ. ಪತ್ರಕರ್ತರನ್ನು ವ್ಯವಸ್ಥಿತವಾಗಿ ಮುಗಿಸುವ ವ್ಯವಸ್ಥೆಯಿಂದ ಬೇಸತ್ತು ದೂರ ಉಳಿದಿದ್ದೇನೆ. ಕನ್ನಡ ಪತ್ರಿಕೋದ್ಯಮದ ಅವನತಿಗೆ ಪತ್ರಿಕೆ ನಡೆಸುವವರ ಕೆಲವೊಂದು ಧೋರಣೆಗಳು ಕಾರಣ, ಡಿಜಿಟಲ್ ತಂತ್ರಕ್ಕೆ ಹೆದರಬೇಕಾಗಿಲ್ಲ. ಯುವ ಜನರಲ್ಲಿ ಪತ್ರಿಕೆ ಓದುವ ಅಭ್ಯಾಸ ಕುಂಠಿತವಾಗಿದೆ. ಹೀಗಾಗಬಾರದು. ಪತ್ರಿಕೋದ್ಯಮಕ್ಕೆ ವಿಶ್ವಾಸಾರ್ಹತೆಯ ಕೊರತೆ ಇದೆ. ಪತ್ರಿಕೋದ್ಯಮ, ಪತ್ರಕರ್ತರು ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳದೆ ಇದ್ದರೆ ಅಪಾಯವಿದೆ. ಯುವ ಪತ್ರಕರ್ತರು ಬದ್ಧತೆಯೊಂದಿಗೆ, ಜಾತೀಯತೆಗೆ ಒಳಗಾಗದೆ, ಗುಂಪುಗಾರಿಕೆಗೆ ಒಳಗಾಗ ಬೇಡಿ. ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಮುಂದುವರಿಯಿರಿ ಎಂದು ಕರೆ ನೀಡಿದರು. ಪತ್ರಕರ್ತರ ಗ್ರಾಮ ವಾಸ್ತವ್ಯ ಒಂದು ಉತ್ತಮ ಕಾರ್ಯಕ್ರಮ ಇಂತಹ ಕೆಲಸ ಇನ್ನಷ್ಟು ನಡೆಯಬೇಕಾಗಿದೆ ಎಂದರು.


ಎಂ.ಆರ್.ಪಿ.ಎಲ್. ನ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಹಸಿರೇ ಉಸಿರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಸಮಾಜದ ಒಳಿತಿಗಾಗಿ, ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಪತ್ರಕರ್ತರ ಮಹತ್ವದ ಪಾತ್ರವಿದೆ. ಪತ್ರಕರ್ತರು ಸಮಾಜದ ಕಣ್ಣು ಕಿವಿಗಳಂತೆ ಇರುವವರು. ಸಮಾಜ, ಮಾಧ್ಯಮದ ತಪ್ಪುಗಳನ್ನು ಸರಿಪಡಿಸಲು ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ ಎಂದರು.


ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡುತ್ತಾ, ಪತ್ರಕರ್ತರು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ವಾತಾವರಣ ನಿರ್ಮಾಣ ಮಾಡುವಂತಾಗಬೇಕು ಎಂದರು. ದಕ್ಷಿಣ ಕನ್ನಡ ಸಹಕಾರಿ  ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಾಧಕರನ್ನು ಸನ್ಮಾನಿಸಿ ಮಾತನಾಡುತ್ತಾ, ಹಿಂದೆ ಮಾಹಿತಿಗಾಗಿ ಪತ್ರಿಕೆಯನ್ನು ಕಾದು ಕುಳಿತು ಓದುತ್ತಿದ್ದರು. ಆದರೆ ಮೂರು ದಶಕಗಳ ಬಳಿಕ ಸುದ್ದಿ ಮನೆಯಲ್ಲಿ ಬದಲಾವಣೆಯಾಗಿದೆ. ತಂತ್ರಜ್ಞಾನದಲ್ಲಿಯೂ ಬದಲಾವಣೆಯಾಗಿದೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರಿನಿಂದ ಆರಂಭ ವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಪತ್ರಿಕೆಗಳ ಸಂಖ್ಯೆ ಕಡಿಮೆ ಇದ್ದರು ಸಮಾಜದಲ್ಲಿ ಪರಿಣಾಮ ಕಾರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಈಗ ಪತ್ರಿಕೆಯ ಸ್ವರೂಪ ಬದಲಾಗಿದೆ. ಪತ್ರಿಕೆಗೆ ಇರುವ ಶಕ್ತಿಯಿಂದ ನೊಂದವರ ಧ್ವನಿಯಾಗಲು, ಸಮಸ್ಯೆ ಪರಿಹರಿಸಲು ಸಾಧ್ಯ. ನಮ್ಮ ಸುತ್ತಮುತ್ತಲಿನ ಹಲವು ಸಣ್ಣ ಪುಟ್ಟ ಸಮಸ್ಯೆಗಳಿಗೆ ಸ್ಪಂದಿಸಬಹುದಾಗಿದೆ. ಪತ್ರಕರ್ತರು ಸಾಮಾಜಿಕವಾಗಿ ಸ್ಪಂದನೆಯೊಂದಿಗೆ ಮಾನವೀಯತೆಯೊಂದಿಗೆ ಸೂಕ್ಷ್ಮ ಸಂವೇದನೆಯೊಂದಿಗೆ ಕಾರ್ಯ ನಿರ್ವಹಿಸ ಬೇಕಾಗುತ್ತದೆ. ಮಾಧ್ಯಮ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಬೇಕಾಗಿದೆ ಎಂದರು.


ಸಮಾರಂಭದ ವೇದಿಕೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಪತ್ರಕರ್ತ ದಿ. ವೀರೇಶ್ ಸ್ಮರಣಾರ್ಥ ಛಾಯಾಚಿತ್ರ ಪ್ರದರ್ಶನ, ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮನಪಾ ಉಪ ಆಯುಕ್ತ ಚಂದ್ರಶೇಖರ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ  ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಕಾರ್ಯದರ್ಶಿ ಆರಿಫ್ ಪಡುಬಿದ್ರೆ  ಮೊದಲಾದವರು ಉಪಸ್ಥಿತರಿದ್ದರು.


ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಇರಾ, ದಿನೇಶ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆರ್.ಸಿ. ಭಟ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕುತ್ಲೂರು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಹರಿಹರ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.

 

You may also like

News

ಧರ್ಮಸ್ಥಳದಲ್ಲಿ 54ನೇ ವರ್ಷದ ಸಾಮೂಹಿಕ ವಿವಾಹ – 106 ಜೋಡಿಗಳ ದಾಂಪತ್ಯ ಆರಂಭ

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಏಪ್ರಿಲ್ 29ರಂದು ಬುಧವಾರ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ
News

Saint Theresa’s School Mangaluru Records 22nd Consecutive Year of 100% Success in ICSE Class X Exams 2025–26

Principal Sr Lourdes  and faculty congratulate students on their success MANGALURU: In a resounding celebration of intellectual brilliance and disciplined

You cannot copy content of this page