May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳ ಪಿ.ಎಲ್.ಡಿ. ಬ್ಯಾಂಕ್ ಸಾಧನೆ ಶೂನ್ಯ – ಮಾಜಿ ಅಧ್ಯಕ್ಷ ಸುದರ್ಶನ್ ಜೈನ್

ಬಂಟ್ವಾಳ : ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃಷಿ ಸಾಲಗಳ ಬಡ್ಡಿ ಮನ್ನಾ ಘೋಷಣೆಯ 74 ಲಕ್ಷ ರೂಪಾಯಿ ಬಂದಿದ್ದು, ಇದರ ಪ್ರಯೋಜನ ಪಡೆಯುವ ಉದ್ದೇಶದಿಂದ ರೈತರು ಬಾಕಿ ಸಾಲದ 104 ಲಕ್ಷ ರೂಪಾಯಿ ಅಸಲು ಪಾವತಿಸಿ ಒಟ್ಟು 178 ಲಕ್ಷ ರೂಪಾಯಿ ಜಮೆಯಾದ ಕಾರಣ 2023-24ನೇ ಸಾಲಿನಲ್ಲಿ 1.05 ಕೋಟಿ ರೂಪಾಯಿ ಲಾಭ ಪಡೆದು 11 ಶೇಕಡಾ ಲಾಭಾಂಶ ನೀಡಲು ಸಾಧ್ಯವಾಗಿದೆ ಎಂದು ಬಂಟ್ವಾಳ ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಹಕಾರಿ ಘಟಕದ ಸಂಚಾಲಕ ಸುದರ್ಶನ್ ಜೈನ್ ಹೇಳಿದ್ದಾರೆ.

ಬಿ.ಸಿ. ರೋಡ್ ಹೋಟೆಲ್ ರಂಗೋಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತಿಹಾಸದಲ್ಲೇ 11 ಶೇಕಡಾ ಲಾಭಾಂಶ ವಿತರಣೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಸುಳ್ಳು ಹೇಳುತ್ತಿದ್ದು, ಅವರು ರಾಜ್ಯ ಸರಕಾರದ ಬಡ್ಡಿ ಮನ್ನಾದ ಕುರಿತು ಪ್ರಸ್ತಾಪವನ್ನೇ ಮಾಡಿಲ್ಲ. ಬ್ಯಾಂಕಿನ ಕಟ್ಟಡವು ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿಯ ಸಾಧನೆಯಾಗಿದ್ದು, ಹೀಗಾಗಿ ವಾರ್ಷಿಕ 30 ಲಕ್ಷ ರೂಪಾಯಿ ಬಾಡಿಗೆ ಬರುತ್ತಿದೆ. ಇದು ಕೂಡ ಹೆಚ್ಚಿನ ಲಾಭಕ್ಕೆ ಕಾರಣವಾಗಿದೆ.

ಈಗಿನ ಆಡಳಿತ ಮಂಡಳಿಯು ಕಾಂಗ್ರೆಸ್ ಬೆಂಬಲಿತ ರೈತರನ್ನು ಟಾರ್ಗೆಟ್ ಮಾಡಿ ಸಾಲ ವಸೂಲಿಯ ಪ್ರಕರಣ ದಾಖಲಿಸುತ್ತಿದ್ದು, ಜತೆಗೆ ಸಾಲ ಹಂಚಿಕೆಯಲ್ಲೂ ತಾರತಮ್ಯ ಮಾಡುತ್ತಿದೆ. ಬ್ಯಾಂಕಿನ ವ್ಯವಸ್ಥಾಪಕರಿಗೆ ಸುಳ್ಯಕ್ಕೆ ವರ್ಗಾವಣೆಯಾಗಿದ್ದರೂ, ಆಡಳಿತ ಮಂಡಳಿ ರಾಜ್ಯ ಬ್ಯಾಂಕಿನ ವಿರುದ್ಧ ತೀರ್ಮಾನ ಮಾಡಿ ಅವರ ತಾಳಕ್ಕೆ ತಕ್ಕ ಕುಣಿಯಲು ಇಲ್ಲೇ ಉಳಿಸಿಕೊಂಡಿದೆ. ಇದರ ಕುರಿತು ದೂರು ಸಲ್ಲಿಸಿದ ಕಲಂ 64ರಡಿ ವಿಚಾರಣೆಗೆ ಎ.ಆರ್. ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಶಾಸಕರ ಒತ್ತಡದಿಂದ ಈ ತನಿಖೆಯ ಮೂರು ತಿಂಗಳ ಅವಧಿ ಮುಗಿದರೂ ಇನ್ನೂ ಸಮಯಾವಕಾಶ ಕೇಳುತ್ತಿದ್ದಾರೆ ಎಂದು ಆರೋಪಿಸಿದರು. ನಿರ್ದೇಶಕ ಸ್ಥಾನ ಅನರ್ಹತೆಯ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಕುರಿತು ಯಾವುದೇ ಆದೇಶ ಪತ್ರ ನನಗೆ ಬಂದಿಲ್ಲ. ನಾನು ಸಾಲದ ಮರುಪಾವತಿ ಮಾಡಿದ್ದು, ಅವರೇ ದೃಢಪತ್ರ ನೀಡಿದ್ದಾರೆ ಎಂದರು.

ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್, ಇದರ ಮಹಾಸಭೆ ಜರಗಿದ್ದು ಬ್ಯಾಂಕಿನ ಕೃಷಿಕ ಸದಸ್ಯರುಗಳಿಗೆ ತಪ್ಪು ಮಾಹಿತಿಗಳನ್ನು ನೀಡುವ ಮುಖಾಂತರ ದ್ರೋಹ ಬಗೆಯಲಾಗಿದೆ ಎಂದು ಆರೋಪಿಸಿದರು.

ಈ ಬ್ಯಾಂಕಿನ ಆಡಳಿತ ಮಂಡಳಿಯ ಹಲವು ಸದಸ್ಯರು 2020ರಲ್ಲಿ ಆಯ್ಕೆಯಾಗಿದ್ದು ಚುನಾವಣೆಯಲ್ಲಿ ಬಹಳಷ್ಟೂ ಸದಸ್ಯರಲ್ಲದವರು, ಮತದಾನ ಇಲ್ಲದವರು, ಸತ್ತವರು ಮತದಾನ ಮಾಡಿದ್ದರಿಂದ ಆಯ್ಕೆಯಾಗಿರುವುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ಆಡಳಿತ ಮಂಡಳಿಗೆ ತಡೆಯಾಜ್ಞೆ ನೀಡಿದ್ದರೂ, ಕರ್ನಾಟಕ ರಾಜ್ಯ ಸಹಕಾರಿ ಕಾಯ್ದೆ ತಿದ್ದುಪಡಿ ಮಸೂದೆ 2024ರ ಬ್ಯಾಂಕ್ ಸಹಕಾರಿ ಸಂಘಗಳ ಮಹಾ ಸಭೆಗಳಿಗೆ ಹಾಜರಾಗದವರಿಗೂ ಮತದಾನದ ಹಕ್ಕನ್ನು ನೀಡುವ ಮಸೂದೆ ಮಂಡನೆ ಚರ್ಚೆಯಲ್ಲೂ ಸರ್ಕಾರದ ಮೇಲ್ಮನೆ ಸದಸ್ಯರ ಸಮಿತಿಯ ಸಭೆಯಲ್ಲೂ ಇತಿಹಾಸ ಎಂಬಂತೆ ಬಂಟ್ವಾಳದ ಪಿ.ಎಲ್.ಡಿ. ಬ್ಯಾಂಕಿನ ಚುನಾವಣೆಯ ಮತದಾನದ ಗೋಲ್ಮಾಲ್ ನ ಉದಾಹರಣೆಯನ್ನು ಉಲ್ಲೇಖಿಸಿರುವುದು ಬ್ಯಾಂಕಿಗೆ ಕಪ್ಪು ಚುಕ್ಕೆಯಾಗಿದೆ. ಕಳೆದೆರಡು ವರ್ಷದಲ್ಲಿ ಹಲವಾರು ಸಹಕಾರಿ ಸಂಘಗಳ ಕಾಯ್ದೆಗಳ ವಿರೋಧವಾಗಿ ಹಾಗೂ ರಾಜ್ಯ ಬ್ಯಾಂಕಿನ ಆದೇಶಗಳ ವಿರುದ್ದವಾಗಿ ಈ ಆಡಳಿತ ಮಂಡಳಿ ಕಾರ್ಯಾಚರಿಸುತ್ತಿರುವುದು ಬ್ಯಾಂಕಿನ ಸದಸ್ಯರುಗಳಿಗೆ ಬಹಳ ಬೇಸರ ತಂದಿದೆ. ಅಲ್ಲದೆ, ಈ ಬ್ಯಾಂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಾಲ ಹಂಚಿಕೆ ಹಾಗೂ ಸಾಲ ವಸೂಲಾತಿಯಲ್ಲಿ ಸಹಕಾರಿ ಕಾಯ್ದೆ 64ರಡಿ ತನಿಖೆ ನಡೆಯುತ್ತಿದೆ ಎಂದರು.

   ಸುದ್ದಿಗೋಷ್ಠಿಯಲ್ಲಿ ಮಾಜಿ ನಿದೇರ್ಶಕ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಶಿವಪ್ಪ ಪೂಜಾರಿ ಹಟದಡ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಸುದೀಪ್‌ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಪ್ರಮುಖರಾದ ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಮಧುಸೂಧನ್ ಶೆಣೈ ಮತ್ತು ಮಹಮ್ಮದ್ ನಂದಾವರ ಉಪಸ್ಥಿತರಿದ್ದರು.

You may also like

News

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ MLC ಐವನ್ ಡಿಸೋಜ

ಕರಾವಳಿ ಕರ್ನಾಟಕದ ಜನರ ದಶಕಗಳ ಬೇಡಿಕೆಯಾಗಿರುವ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ, ಹೋರಾಟ ಸಮಿತಿಯ ಸಂಚಾಲಕ ಹಾಗೂ ಶಾಸಕ MLC
News

ICYM BORIMAR ಸಂಘಟನೆಯಲ್ಲಿ ‘ಕುಟುಂಬ ರಾಜಕಾರಣ’?: ಯಾರಿಗೂ ತಿಳಿಸದೇ ಒಳಗಿಂದೊಳಗೆ ಚುನಾವಣೆ ನಡೆಸಿದ ಸಚೇತಕ! ಭುಗಿಲೆದ್ದ ಆಕ್ರೋಶ

ಮಂಗಳೂರು ಧರ್ಮಾಧ್ಯಕ್ಷರಿಗೆ ಲಿಖಿತ ದೂರು ನೀಡಿದ ಚರ್ಚ್ ಹಿಂದಿನ ಪಾಲನಾ ಸಮಿತಿ ಕ್ರೈಸ್ತ ಯುವಜನರ ಪ್ರತಿಷ್ಠಿತ ಸಂಘಟನೆಯಾದ ICYM ಬೊರಿಮಾರ್ (BORIMAR) ಘಟಕದಲ್ಲಿ ಸಚೇತಕನು (ANIMATOR) ಧರ್ಮಕ್ಷೇತ್ರದ

You cannot copy content of this page