August 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಮತ್ತು ಒತ್ತಾಯ  

ಮಂಗಳೂರು :  ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಮಂಗಳೂರು ಪೊಲೀಸ್ ಆಯುಕ್ತರಿಗೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ವತಿಯಿಂದ ಕೇಂದ್ರೀಯ ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್ ಮತ್ತು ಪ್ರಧಾನ ಕಾರ್ಯದರ್ಶಿ ಆಲ್ವಿನ್ ಪ್ರಶಾಂತ್ ಮೊಂತೇರೊ ಜಂಟಿ ಮನವಿಯನ್ನು DCP ಮತ್ತು ACP ಮುಖಾಂತರ ಸಲ್ಲಿಸಿದರು.

    ಆಲ್ವಿನ್ ಡಿಸೋಜ ಪಾನೀರ್ ಇವರ ಮೇಲೆ ದುಷ್ಕರ್ಮಿಗಳು ನಡೆಸಿದ ಮಾರಣಾಂತಿಕ ಹಲ್ಲೆ ನಡೆಸಿದ ಕುರಿತು ಘಟನೆ ಬಗ್ಗೆ ಮಾಹಿತಿಯನ್ನು ಮನವಿಯಲ್ಲಿ ನೀಡಿದ್ದು, ಅದರಂತೆ ದಿನಾಂಕ 05-10-2024 ನೇ ಶನಿವಾರ ಅಪರಾಹ್ನ 03:00 ಗಂಟೆಗೆ ಅಡ್ಯಾರ್ ಸೇತುವೆಯ ಬಳಿ ಪತ್ರಕರ್ತೆಯೊಬ್ಬರೊಂದಿಗೆ ಪಾವೂರು ಉಳಿಯ ಪ್ರದೇಶದಲ್ಲಿ ಸ್ಥಳ ವೀಕ್ಷಣೆ ನಡೆಸುವ ಸಲುವಾಗಿ ಕಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜರವರು ತೆರಳಿದ್ದರು. ತನ್ನ ವಾಹನದ ಬಳಿ ನಿಂತಿರುವಾಗ ಸುಮಾರು 20 ಮಂದಿಯ ತಂಡವು ಅವರನ್ನು ಹತ್ಯೆಗೈಯುವ ಉದ್ದೇಶದಿಂದ, ಎಕಾಏಕಿ ಅವ್ಯಾಚ್ಯ ಪದಗಳನ್ನು ಉಪಯೋಗಿಸಿ, ‘ನಮ್ಮ ಹೊಟ್ಟೆಗೆ ನೀನು ಹೊಡೆಯುತ್ತಾ ಇದ್ದಿ. ಮರಳು ತೆಗೆಯುವ ಬಗ್ಗೆ ಪ್ರತಿಭಟನೆ ನಡೆಸುತ್ತಾ ಇದ್ದಿ. ನಿನ್ನಿಂದಾಗಿ ನಮ್ಮ ದೋಣಿಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿರುತ್ತಾರೆ. ನಿನ್ನನ್ನು ಜೀವಂತವಾಗಿ ಬದುಕಲು ಬಿಡುವುದಿಲ್ಲ. ನೀನು ಬೈಕಿನಲ್ಲಿ ಒಬ್ಬನೇ ಹೋಗುತ್ತಿರುವಾಗ ನಿನ್ನನ್ನು ಟಿಪ್ಪರ್‌ನ ಅಡಿಗೆ ಹಾಕಿ ಸಾಯಿಸುತ್ತೇವೆ. ನಿನ್ನ ಮನೆಗೆ ಹೊಕ್ಕಿ ನಿನ್ನನ್ನು ಕೊಲೆ ಮಾಡುತ್ತೇವೆ. ಇವತ್ತೇ ನಿನ್ನನ್ನು ಸಾಯಿಸುತ್ತೇವೆ.’ ಎಂದು ಹೇಳಿ ಹೊಂಡಕ್ಕೆ ದೂಡಿ ಹಾಕಿರುತ್ತಾರೆ. ಹೊಂಡದ ಪಕ್ಕದಲ್ಲಿರುವ ಬಂಡೆ ಕಲ್ಲಿನ ಮೇಲೆ ಬಿದ್ದು ಅವರ ಭುಜದ ಮೂಳೆ ತಪ್ಪಿರುತ್ತದೆ. ಸೊಂಟಕ್ಕೆ ತುಳಿದಿರುದರಿಂದ ಪಕ್ಕೆಲುಬುಗಳಿಗೆ ಪೆಟ್ಟಾಗಿರುತ್ತದೆ. ಹಲ್ಲೆ ನಡೆಸಿದ ಸಂದರ್ಭದಲ್ಲಿ ತಲೆಗೆ ಹಾಗೂ ಮೂಗಿಗೆ ಪೆಟ್ಟಾಗಿದೆ. ಬಲ ಕೈಯ ಕಿರು ಬೆರಳು ಮುರಿದಿರುತ್ತದೆ. ಆ ಸಂದರ್ಭದಲ್ಲಿ ಪತ್ರಕರ್ತೆಯು ಶಬ್ದ ಕೇಳಿ ತನ್ನೊಂದಿಗಿದ್ದ ಛಾಯಾಗ್ರಾಹಕರೊಂದಿಗೆ ಹತ್ತಿರ ಬಂದದ್ದನ್ನು ನೋಡಿ ಅಲ್ಲಿಂದ ದುಷ್ಕರ್ಮಿಗಳು ಕಾಲ್ಕಿತ್ತಿರುತ್ತಾರೆ.

   ಅಲ್ಲಿಂದ 50 ಮೀಟರ್ ದೂರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖಾ ಅಧಿಕಾರಿಗಳು ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ವಾಮಂಜೂರು ಇದರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅವರ ಬಳಿ ಈ ವಿಷಯ ತಿಳಿಸಿದಾಗ ಯಾವುದೇ ಪ್ರತಿಕ್ರಿಯೆಯನ್ನು ನೀಡಿರುವುದಿಲ್ಲ. ಈ ಸಂದರ್ಭದಲ್ಲಿ ಅಸ್ವಸ್ಥರಾದ ಆಲ್ವಿನ್ ಡಿಸೋಜರನ್ನು ಮಾಧ್ಯಮದವರು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ಈ ಕುರಿತು ಪತ್ರಕರ್ತೆಯು ಅಲ್ಲಿ ನಡೆದ ಘಟನೆಯ ಬಗ್ಗೆ ಸಂಪೂರ್ಣ ವೀಡಿಯೋ ಚಿತ್ರೀಕರಣವನ್ನು ಮಾಡಿರುತ್ತಾರೆ.  ತದ ನಂತರ ಸರಿ ಸುಮಾರು 6:00 ಗಂಟೆಗೆ ಎ.ಸಿ.ಪಿ.ಯವರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಕುರಿತು ತಿಳಿದುಕೊಂಡಿರುತ್ತಾರೆ. ರಾತ್ರಿ 8:00 ಗಂಟೆಗೆ ವಾಮಂಜೂರು ಗ್ರಾಮಾಂತರ ಪೋಲಿಸ್ ಠಾಣೆಯ   ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಕಥೊಲಿಕ್ ಸಭಾ ಅಧ್ಯಕ್ಷರ ಹೇಳಿಕೆಯನ್ನು ಪಡೆದುಕೊಂಡಿರುತ್ತಾರೆ.

ಪಾವೂರು ಉಳಿಯ, ರಾಣಿಪುರ, ಉಳ್ಳಾಲ ಹೊಯ್ಗೆ, 62ನೇ ತೋಕೂರು, ಕೆಂಜಾರು ಈ ಪ್ರದೇಶಗಳ ದ್ವೀಪಗಳನ್ನು ಉಳಿಸುವ ಉದ್ದೇಶದಿಂದ ಸಪ್ಟಂಬರ್ 27ರಂದು ನಡೆಸಿದ ಬೃಹತ್ ಪ್ರತಿಭಟನೆಯ ಪ್ರತಿಫಲವಾಗಿ ಶಾಂತಿ ಪ್ರಿಯರಾದ ನಮಗೆ ಸಿಕ್ಕ ಕಾಣಿಕೆಯಂತಾಗಿದೆ.  ಈ ಪ್ರಕೃತಿಯನ್ನು ನಾಶಗೊಳಿಸುವವರ ವಿರುದ್ದ ನಮ್ಮ ಮೇಲೆ ಇನ್ನೆಷ್ಟು ಹಲ್ಲೆ ನಡೆಸಿದರೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ. ಹಾಗೂ ಆಲ್ವಿನ್ ಡಿಸೋಜರವರ ಮೇಲೆ ನಡೆಸಿರುವಂತಹ ಮಾರಣಾಂತಿಕ ಹಲ್ಲೆಯು ನಮ್ಮೆಲ್ಲರಿಗೂ ಅತೀವ ನೋವು ತಂದಿದೆ ಮತ್ತು ನಮ್ಮನ್ನು ಭಯಭೀತರನ್ನಾಗಿಸಿದೆ. ಆದುದರಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು.

    ಈ ಸಂದರ್ಭ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ, ನಿಕಟಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೊ, ಪೆಜಾರ್ ವಲಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ದಕ್ಷಿಣ ವಲಯ ಅಧ್ಯಕ್ಷ ಡೊಲ್ಫಿ ಡಿಸೋಜ ಮತ್ತು ನವೀನ್ ಡಿಸೋಜ ರಾಣಿಪುರ ಮೊದಲಾದವರು  ಉಪಸ್ಥಿತರಿದ್ದರು.

You may also like

News

ಮೊಬೈಲ್‌ಗಾಗಿ ಜಗಳ ತಂಗಿಯ ಕೊಲೆ – ಸಹೋದರ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾನಿಗೆ 5 ವರ್ಷ ಜೈಲು!

ಮೊಬೈಲ್ ವಿಚಾರವಾಗಿ ನಡೆದ ಜಗಳದ ವೇಳೆ ಸ್ವಂತ ತಂಗಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ.
News

ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ಧರ್ಮಸ್ಥಳದಲ್ಲಿ 28ನೇ ಭಜನಾ ಕಮ್ಮಟ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಮಂಗಳವಾರ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಭಜನಾ ಕಮ್ಮಟದ

You cannot copy content of this page