ಸಂತ ಫಿಲೋಮಿನಾ ಕಾಲೇಜಿನಲ್ಲಿ ಐಒಟಿ ಮಾದರಿಗಳ ಪ್ರದರ್ಶನ ಕಾರ್ಯಕ್ರಮ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ, ಪಿನ್ಯಾಕಲ್ ಐಟಿ ಕ್ಲಬ್ ಹಾಗೂ ಐಐಸಿಗಳ ಸಂಯುಕ್ತ ಆಶ್ರಯದಲ್ಲಿ ಐಒಟಿ ಮಾದರಿಗಳ ಪ್ರದರ್ಶನವನ್ನು ಆಯೋಜಿಸಲಾಯಿತು. ಉದ್ಘಾಟನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ “ಸಾಧಿಸುವ ಛಲ ಹಾಗೂ ಒಳ್ಳೆಯ ಮನಸ್ಸಿದ್ದಲ್ಲಿ ಯಾವುದೇ ಕಾರ್ಯವೂ ಕಷ್ಟವೆಂದೆನಿಸುವುದಿಲ್ಲ.
ಯಾವುದೇ ಪರಿಸ್ಥಿತಿಯ ಬಗ್ಗೆ ದೂರು ನೀಡಬೇಡಿ ಬದಲಿಗೆ ಪೂರಕವಾಗಿ ಯೋಚನೆ ಮಾಡಲು ಪ್ರಾರಂಭಿಸಿರಿ. ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿದರೆ ನೀವು ಸಮಸ್ಯೆಯನ್ನು ಅವಕಾಶವಾಗಿ ಪರಿವರ್ತಿಸಬಹುದು. ನವೀನ ಕಲ್ಪನೆಯು ಯಾರೊಬ್ಬರ ಆಸ್ತಿಯಲ್ಲ. 8 ವರ್ಷಗಳ ಬಾಲಕನಿಂದ ಪ್ರಾರಂಭಿಸಿ 80 ವಸಂತಗಳನ್ನು ಕಳೆದ ವಯೋವೃದ್ಧರವರೆಗೆ ಪ್ರತಿಯೋರ್ವ ವ್ಯಕ್ತಿಗೂ ನವೀನ ಕಲ್ಪನೆಯನ್ನು ಮಾಡುವ ಅವಕಾಶಗಳಿವೆ. ಹಾಸ್ಟೆಲ್ ಕೋಣೆಯಲ್ಲಿ ವಿಭಿನ್ನ ಕೌಶಲ್ಯಗಳನ್ನು ಹೊಂದಿರುವ ಸಮಾನ ಮನಸ್ಕ ಜನರ ಗುಂಪು ಒಟ್ಟಿಗೆ ಕುಳಿತು ರಚನಾತ್ಮಕವಾಗಿ ಚಿಂತಿಸಿದಲ್ಲಿ ನಮ್ಮನ್ನು ಕಾಡುತ್ತಿರುವ ಸಣ್ಣಪುಟ್ಟ ಸಮಸ್ಯೆಗಳಿಗೆ ವಿನೂತನ ರೀತಿಯ ಪರಿಹಾರ ಕಂಡುಕೊಂಡ ಹಲವಾರು ನಿದರ್ಶನಗಳು ನಮ್ಮ ಮುಂದೆ ಇವೆ. ವಿದ್ಯಾರ್ಥಿಗಳಿಗೆ ನಾವು ಕಾಲೇಜಿನಲ್ಲಿ ಅನುಕೂಲಕರ ಕಲಿಕಾ ವಾತಾವರಣವನ್ನು ಸೃಷ್ಟಿಸುತ್ತೇವೆ. ಇಲ್ಲಿ ಗಳಿಸಿದ ಜ್ಞಾನವನ್ನು ರಚನಾತ್ಮಕ ಚಟುವಟಿಕೆಗಳಿಗೆ ಬಳಸಿದರೆ ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನು ಕಂಡುಕೊಳ್ಳಬಹುದು. ಇಲ್ಲದಿದ್ದರೆ ಅವರು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ವಿದ್ಯಾರ್ಥಿಗಳು ಈ ಜ್ಞಾನವನ್ನು ಈ ರೀತಿಯ ಸೃಜನಶೀಲ ಮತ್ತು ರಚನಾತ್ಮಕ ಚಟುವಟಿಕೆಗಳಿಗೆ ಬಳಸಬೇಕು. ಅವರು ಪಠ್ಯಕ್ರಮವನ್ನು ಮೀರಿ ಹೆಚ್ಚುವರಿ ಜ್ಞಾನವನ್ನು ನೀಡುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಬಾರದು. ಈ ತರಗತಿಯ ಪುಟ್ಟ ಕೋಣೆಯೊಳಗೆ ಹುಟ್ಟಿಕೊಂಡ ಕಲ್ಪನೆಯು ಮುಂದೆ ಉದ್ಯಮವಾಗಿ ರೂಪುಗಳ್ಳುವ ಅವಕಾಶಗಳಿವೆ” ಎಂದು ಹೇಳಿದರು. ಐಒಟಿ ಮಾದರಿಗಳ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಆಯೋಜಿಸಿದುದಕ್ಕಾಗಿ ಸಂಘಟಕರನ್ನು ಪ್ರಶಂಶಿಸಿದರು.
ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಹದಿನೈದಕ್ಕೂ ಹೆಚ್ಚಿನ ಮಾದರಿಗಳನ್ನು ತಯಾರಿಸಿದ್ದರು. ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರೂ ಪರೀಕ್ಷಾಂಗ ಉಪಕುಲಸಚಿವರೂ ಆದ ಅಭಿಷೇಕ್ ಸುವರ್ಣ ಹಾಗೂ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪೂಜಾಶ್ರೀ ವಿ. ರೈ ತೀರ್ಪಗಾರರಾಗಿ ಭಾಗವಹಿಸಿದರು. ವಿದ್ಯಾರ್ಥಿಗಳು ತಮ್ಮ ಮಾದರಿಗಳಲ್ಲಿರುವ ನಾವೀನ್ಯತೆ ಹಾಗೂ ತಾಂತ್ರಿಕತೆ ಮತ್ತು ಅವುಗಳಿಂದ ಸಮಾಜಕ್ಕೆ ಆಗುವ ಉಪಯೋಗಗಳ ಬಗ್ಗೆ ಭೇಟಿನೀಡಿದ ಪ್ರತಿಯೋರ್ವರಿಗೂ ವಿವರಣೆ ನೀಡಿದರು.
ಅನುಷಾ ಭಾರ್ಗವಿ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಗಣಕವಿಜ್ಞಾನ ವಿಭಾಗದ ಡೀನ್, ಮುಖ್ಯಸ್ಥ ಹಾಗೂ ಪರೀಕ್ಷಾಂಗ ಕುಲಸಚಿವರಾದ ಪ್ರೊ| ವಿನಯಚಂದ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಿನ್ಯಾಕಲ್ ಐಟಿ ಕ್ಲಬ್‌ನ ಸಂಯೋಜಕಿ ಗೀತಾ ಪೂರ್ಣಿಮಾ ಕೆ. ವಂದಿಸಿದರು. ಕಾಲೇಜಿನ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಐಒಟಿ ಮಾದರಿಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು.