August 7, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತೋಡಿನಲ್ಲಿ ಕೊಚ್ಚಿಹೋದ ಜೀವನ್ ಪಿಂಟೋ ಮೃತದೇಹ ಪತ್ತೆ

ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಅವರ ಪುತ್ರ 48 ವರ್ಷ ಪ್ರಾಯದ ಜೀವನ್ ಪಿಂಟೋ ಅವರು ನಾಪತ್ತೆಯಾಗಿದ್ದ ಪ್ರಕರಣ ದುಃಖಾಂತ್ಯ ಕಂಡಿದ್ದು, ಇಂದು ಆಗಸ್ಟ್ 3ರಂದು ಸೋಮವಾರ ಬೆಳಿಗ್ಗೆ ಅರಳ ಗ್ರಾಮದ ಪಂಬದಗದ್ದೆ ಸಮೀಪ ಅವರ ಮೃತದೇಹ ಪತ್ತೆಯಾಗಿದೆ.

ಆಗಸ್ಟ್‌ 1ರ ಶನಿವಾರ ರಾತ್ರಿ ಸುಮಾರು 7.30ರ ವೇಳೆಗೆ ಜೀವನ್ ಪಿಂಟೋ ಅವರು ತಮ್ಮ ಮನೆಯಿಂದ ಸಮೀಪದ ಮಾವನ ಮನೆಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ಧಾರಾಕಾರ ಮಳೆ ಹಾಗೂ ಕತ್ತಲೆ ಇದ್ದ ಕಾರಣ ಟಾರ್ಚ್ ಹಿಡಿದು, ತೋಡಿನ ಮೇಲಿರುವ ಮಿನಿ ಸೇತುವೆ ಮೂಲಕ ಸಾಗುತ್ತಿದ್ದರೆಂದು ತಿಳಿದುಬಂದಿದೆ. ಆದರೆ ಅವರು ಗಮ್ಯಸ್ಥಾನ ತಲುಪದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದಾಗ, ತೋಡು ಸಮೀಪ ಅವರ ಚಪ್ಪಲಿ ಮತ್ತು ಟಾರ್ಚ್ ಪತ್ತೆಯಾಗಿತ್ತು.

ಅವರು ತೋಡಿನಲ್ಲಿ ಕಾಲು ಜಾರಿ ಬಿದ್ದಿರಬಹುದೆಂಬ ಶಂಕೆಯ ಮೇರೆಗೆ ತಕ್ಷಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಎಫ್ ತಂಡಕ್ಕೆ ಮಾಹಿತಿ ನೀಡಲಾಯಿತು. ಸ್ಥಳೀಯರ ಸಹಕಾರದೊಂದಿಗೆ ಶನಿವಾರ ರಾತ್ರಿಯಿಂದಲೇ ನಿರಂತರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಭಾರೀ ಮಳೆ ಹಾಗೂ ನೀರಿನ ತೀವ್ರ ಹರಿವಿನಿಂದ ಕಾರ್ಯಾಚರಣೆಗೆ ಅಡಚಣೆ ಉಂಟಾದರೂ, ತಂಡಗಳು ಹುಡುಕಾಟ ಮುಂದುವರಿಸಿದ್ದವು.

ಇಂದು ಬೆಳಿಗ್ಗೆ ಅರಳ ಗ್ರಾಮದ ಪಂಬದಗದ್ದೆ ಪ್ರದೇಶದಲ್ಲಿ ನೀರಿನಲ್ಲಿ ಜೀವನ್ ಪಿಂಟೋ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ಸೇರಿದಂತೆ ಮುಂದಿನ ಕಾನೂನು ಪ್ರಕ್ರಿಯೆಗಾಗಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಈ ದುರ್ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪಾಂಚಕೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ವಾತಾವರಣ ಆವರಿಸಿದೆ.

ಮಳೆಗಾಲದಲ್ಲಿ ನದಿ, ಹೊಳೆ ಹಾಗೂ ತೋಡುಗಳ ನೀರಿನ ಹರಿವು ಅಪಾಯಕಾರಿಯಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಅನಗತ್ಯವಾಗಿ ನೀರಿನ ಸಮೀಪ ತೆರಳದಂತೆ ಹಾಗೂ ವಿಶೇಷ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

You may also like

News

ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕಿ, ಹಿರಿಯ ಮಾಧ್ಯಮ ತಜ್ಞೆ ಡಾ. ವಹೀದಾ ಸುಲ್ತಾನ ನಿಧನ

ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (MCJ) ವಿಭಾಗದ ನಿವೃತ್ತ ಮುಖ್ಯಸ್ಥೆ ಹಾಗೂ ಹಿರಿಯ ಪ್ರಾಧ್ಯಾಪಕಿ 70 ವರ್ಷ ಪ್ರಾಯದ ಡಾ. ವಹೀದಾ ಸುಲ್ತಾನಾ ಅವರು
News

ಮೈಸೂರು ಧರ್ಮಕ್ಷೇತ್ರದ ಸಹ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಗ್ರೇಶಿಯನ್ ರೊಡ್ರಿಗಸ್ ನೇಮಕ

ಮೈಸೂರು ಧರ್ಮಕ್ಷೇತ್ರದ ಸಹ ಸಾರ್ವಜನಿಕ ಸಂಪರ್ಕಾಧಿಕಾರಿ (Associate Public Relations Officer – APRO)ಯಾಗಿ ಗ್ರೇಶಿಯನ್ ರೊಡ್ರಿಗಸ್ ಅವರನ್ನು ನೇಮಕಗೊಳಿಸಲಾಗಿದೆ. ಈ ಕುರಿತು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ

You cannot copy content of this page