March 26, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕ್ಷಣಿಕ ಆಸೆಗೆ ನೀರು ಪಾಲಾಗುವ ನಮ್ಮ ಯುವಸಮುದಾಯ – ರೋಶ್ನಿ ರೊಜಾರಿಯೊ ಬಜ್ಪೆ

ಮಕ್ಕಳಿಗೆ ಖಡ್ಡಾಯವಾಗಿ ಜೀವರಕ್ಷಕ ಈಜು ಕಲಿಸಿ

ಮೊನ್ನೆ ಮೊನ್ನೆ ವೇಣೂರಿನಲ್ಲಿ ಮೂವರು ಯುವಕರು ಈಜಲು ಹೋಗಿ ನೀರುಪಾಲಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಹರಿದಾಡಿ ನಮ್ಮ ಮನಗಳಿಂದ ಆ ಘಟನೆ ಇನ್ನೂ ಮಾಸದಿರುವಾಗ, ಪಕ್ಕದ ಕಾರ್ಕಳದಲ್ಲಿ ಇನ್ನೊಂದು ದುರ್ಘಟನೆ. ಕಾರ್ಕಳದ ದುರ್ಗಾ ಫಾಲ್ಸ್ ನಲ್ಲಿ ಈಜಲು ಹೋಗಿದ್ದ 7 ಯುವಕರಲ್ಲಿ ಒಬ್ಬಾತ ಆಯತಪ್ಪಿ ನೀರಿಗೆ ಬಿದ್ದು ಪ್ರಾಣ ಕಳಕೊಂಡ ಮನಕಲಕುವ ಘಟನೆ. ಇಂದಿನ ಯುವಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವಾಗ ವೇಣೂರಿನ ಘಟನೆ ಕಾರ್ಕಳ ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ಈ 7 ಯುವಕರಿಗೆ ತಲುಪದೇ ಇದ್ದಿತ್ತೇ? ತಿಳಿದು ತಿಳಿದೂ ಒಬ್ಬ ಯುವಕ ಕ್ಷಣದ ಅಜಾಗರೂಕತೆಯಿಂದ ನೀರು ಪಾಲಾದನಲ್ಲವೇ? ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದನಲ್ಲವೇ?  ಹುಚ್ಚು ಆಸೆ, ಮೈಮರೆವು ಬದುಕನ್ನೇ ಕಸಿದುಕೊಂಡು ಹೋಗುತ್ತದೆಂದು ಯುವಜನರು ಯಾಕೆ ತಿಳಿದುಕೊಳ್ಳುವುದಿಲ್ಲ?

ಹೆಚ್ಚಿನ ಸಂದರ್ಭಗಳಲ್ಲಿ ಈಜಲು ಹೋಗುವವರಿಗೆ ಈಜು ತಿಳಿದಿರುವುದೇ ಇಲ್ಲ. ಸ್ನೇಹಿತರ ಒತ್ತಾಯ, ಒತ್ತಡ, ನೀರಿನ ಮೇಲಿನ ಮನಸೆಳೆತ, ಏನೂ ಆಗಲಾರದೆಂಬ ಹುಚ್ಚು ಧೈರ್ಯ, ಏನೇ ಆದರೂ ಸ್ನೇಹಿತರು ಜೊತೆಗಿದ್ದಾರೆ, ರಕ್ಷಿಸುತ್ತಾರೆ ಎಂಬ ಅಗಾಧಾ ನಂಬಿಕೆ, ಭರವಸೆ ಯುವಮಕ್ಕಳ ಚಿತ್ತ ನೀರಿನತ್ತ ಎಳೆದೊಯ್ಯುತ್ತದೆ. ಆ ನೀರು ತಳಕ್ಕೆ ಸೆಳೆದೊಯ್ದು ಪರಲೋಕಕ್ಕೆ ತಲುಪಿಸುತ್ತದೆ. ನೀರು ಇಲ್ಲದಿದ್ದರೆ ಬದುಕೇ ಇಲ್ಲ. ಪ್ರಪಂಚದಲ್ಲಿ ಯಾವ ಜೀವಚರ, ಪಕ್ಷಿಸಂಕುಲ, ವೃಕ್ಷಸಮೂಹ ನೀರಿಲ್ಲದೆ ಬದುಕುವುದಿಲ್ಲ. ಸ್ಮಶಾನ ಮೌನದ ಪ್ರಪಂಚ. ಸುಡುಗಾಡು ಮರುಭೂಮಿ. ಆ ಪ್ರಪಂಚ ಊಹಿಸಲೂ ಅಸಾಧ್ಯ. ಅದೇ ಜೀವಜಲ ಬದುಕಿ ಬಾಳಬೇಕಾದ ಜೀವಗಳನ್ನೇ ಕಸಿದುಕೊಳ್ಳುತ್ತದೆ. ಈಜು ಕಲಿಯಲು ಅವಕಾಶಗಳಿದ್ದರೂ ಮಕ್ಕಳು ಹೋಗುವುದಿಲ್ಲ. ಮತ್ತೆ ಪ್ರಾಣ ಬಿಡುವುದು ಹೀಗೇ. ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳೇ ಅಧಿಕ.

ಯುವಮಕ್ಕಳೇ, ವಿಧಿಲಿಖಿತವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕೆಲವೊಂದು ಎಚ್ಚರಿಕೆಗಳಿಂದ ವಿಧಿಲಿಖಿತವನ್ನು ಮುಂದೂಡಲೂ ಸಾಧ್ಯ. ನಿಮ್ಮ ಹೆತ್ತವರನ್ನು, ಒಡಹುಟ್ಟಿದವರನ್ನು, ನಿಮ್ಮ ಸಮಸ್ತ ಕುಟುಂಬವನ್ನು ನಿಮ್ಮಗಳ ಅಕಾಲಿಕ ಸಾವಿನಿಂದ ಜೀವಮಾನಪೂರ್ತಿ ಕೊರಗದಂತೆ ಮಾಡಲೂ ಸಾಧ್ಯ. ಈಜುವಾಗ ತಿಳಿದವರಿಂದ ನೀರಿನ ಆಳ ಅರಿಯರಿ. ನೀರಿನ ಸಮೀಪ ಸುಳಿಯುವಾಗ, ಬಂಡೆಕಲ್ಲು ಏರುವಾಗ ಕನಿಷ್ಟ ಪಕ್ಷ ಜಾಗರೂಕತೆ ಮಾಡಿ. ಈಜು ಬಾರದ ನಿಮ್ಮ ಸ್ನೇಹಿತರನ್ನು ಈಜಲು ಕರೆದೊಯ್ಯಬೇಡಿ. ಕರೆದೊಯ್ದರೂ ಬಲವಂತವಾಗಿ ನೀರಿಗೆ ಇಳಿಸಬೇಡಿ. ನಿಮ್ಮಿಂದಾಗಿ ಅವರಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಜೀವನಪೂರ್ತಿ ಪರಿತಪಿಸುವ ಸರದಿ ಅದು ನಿಮ್ಮ ಪಾಲಿಗೆ.

ಹೆಚ್ಚಿನ ಸಂದರ್ಭಗಳಲ್ಲಿ ಈಜು ಬಾರದವರು ತಮ್ಮ ಸಂಗಡಿಗರ ಒತ್ತಾಯಕ್ಕೆ ಮಣಿದು ಈಜು ಬಾರದೆನ್ನಲು ಸಂಕೋಚಿತರಾಗಿ ಪ್ರಾಣ ಕಳಕೊಳ್ಳುವುದೇ ಹೆಚ್ಚು. ಪ್ರಾಣಸ್ನೇಹಿತರನ್ನು ಉಳಿಸಿಕೊಳ್ಳಲು ಈಜಿನಲ್ಲಿ ಅಷ್ಟೊಂದು ನಿಪುಣರಿಲ್ಲದ ನೀವುಗಳು ಮುಳುಗೇಳುವ ಅವರನ್ನು ಉಳಿಸಲು ಅತ್ತ ಧಾವಿಸಿ ಅವರ ಸೆರೆಯಾಗುತ್ತೀರಿ. ಕಟ್ಟಕಡೆಯ ಆಸರೆಯಾಗಿ ಸಿಕ್ಕ ನೀವು ಅವರ ಕಬಂಧಬಾಹುಗಳಲ್ಲಿ ಶಾಶ್ವತವಾಗಿ ಬಂಧಿ. ನಿಮ್ಮನ್ನುಳಿಸಲು ಇನ್ನೊಬ್ಬರು, ಮತ್ತೊಬ್ಬರು….. ಒಬ್ಬರ ಸೆರೆಯಲ್ಲೊಬ್ಬರು, ಮಗದೊಬ್ಬರು. ಬಿಡಿಸಲಾಗದ ಸೆರೆಯಲ್ಲಿ ಎಲ್ಲರೂ ನೀರಿನಲ್ಲಿ ಐಕ್ಯರಾಗಿ, ಅಲ್ಲಿಗೆ ನಿಮ್ಮೆಲ್ಲರ ಜೀವನ ಸಮಾಪ್ತಿ. ಸಾಲು ಸಾಲು ಸರಣಿ ಸಾವು ಮರುದಿನ ವಾರ್ತಾಪತ್ರಿಕೆಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ. ದಿನನಿತ್ಯ ಎಷ್ಟೊಂದು ದುರ್ಘಟನೆಗಳು ಸಂಭವಿಸುತ್ತಿರುತ್ತವೆ. ಈ ನಮ್ಮ ಯುವಸಮುದಾಯ ಬುದ್ಧಿ ಕಲಿಯಬಾರದೇ?

ಒಂದು ಅಥವಾ ಎರಡು ಮಕ್ಕಳಿರುವ ಈಗಿನ ಕುಟುಂಬಗಳು ನಮ್ಮವು. ಎಷ್ಟು ಮಕ್ಕಳು ಇದ್ದರೂ ತಮ್ಮ ಕರುಳ ಕುಡಿಗಳ ಸಾವುಗಳನ್ನು ಹೆತ್ತವರಿಂದ ಯೋಚಿಸಲು ಸಾಧ್ಯವೇ? ತಮ್ಮ ಮಕ್ಕಳಿಗೆ ಏನೂ ಸಂಭವಿಸಬಾರದು ಎಂದು ಆಶಿಸುವ, ಮಕ್ಕಳ ಬಗ್ಗೆ ಸದಾ ಭಯ ಆತಂಕದಲ್ಲಿರುವ ಮನಗಳು ಆ ತಂದೆ ತಾಯಿಯಂದಿರದ್ದು. ನೀವು ಸತ್ತರೆ ಅವರ ಕರುಳು ಕಿತ್ತು ಬರುವ ರೋಧನಾ, ಹೃದಯವಿಧ್ರಾವಕ ಆಕ್ರಂದನ ಯೋಚಿಸಿ ಮಕ್ಕಳೇ. ಹೆತ್ತವರೇ, ನೀವಾದರೂ ನಿಮ್ಮ ಮಕ್ಕಳನ್ನು ಕ್ಷಣಕ್ಷಣಕ್ಕೂ ಎಚ್ಚರಿಸುವಂಥಾಗಲಿ. ಇಲ್ಲದಿದ್ದರೆ ಮುಂದಿನ ಬದುಕು ನಿಮಗೆ ದುಃಖ ಕಟ್ಟಿಟ್ಟ ಬುತ್ತಿ. ಮರಳಿ ಬಾರದ ಲೋಕಕ್ಕೆ ಹೋದ ಆ ಮಕ್ಕಳೊಂದಿಗೆ ಬದುಕಿ ಬಾಳಿದ ಜೀವನದ ಫ್ಲ್ಯಾಶ್ ಬ್ಯಾಕ್ ಎನಿಸುತ್ತಾ ಭವಿಷ್ಯಪೂರ್ತಿ ಬದುಕಬೇಕಾದ ಪರಿಸ್ಥಿತಿ.

ಆ ದುಸ್ಥಿತಿ ನಿಮಗೆ ಬಾರದಿರಲಿ 🙏

ಮಕ್ಕಳನ್ನು ಹಿಡಿತದಲ್ಲಿಡುವುದು ಇಂದಿನ ಕಾಲದಲ್ಲಿ ಬಹು ಕಷ್ಟ. ಅದು ಅಸಾಧ್ಯ. ಮಕ್ಕಳು ಹೆತ್ತವರ ಹಾಗೂ ಹಿರಿಯರ ಮಾತು ಕೇಳದಿರುವುದೇ ಅಧಿಕ. ನಿಮಗೆ ತಿಳಿಸದೆ ಸ್ನೇಹಿತರೊಂದಿಗೆ ಈಜಲು ಹೋಗುವುದು ಇನ್ನೂ ಅತ್ಯಧಿಕ. ಎಲ್ಲಾ ಆದಾಗ ತಂದೆತಾಯಿಗಳಿಗೆ ಎಲ್ಲಿಲ್ಲದ ಆಘಾತ. ತಂದೆತಾಯಿಯಂದಿರೇ, ಹಣ ಉಳಿತಾಯ ಮಾಡಿ, ಕನಿಷ್ಟ ಪಕ್ಷ ನಿಮ್ಮ ಮಕ್ಕಳಿಗೆ ಈಜು ಕಲಿಸಿ, ಅವರ ಪ್ರಾಣ ಉಳಿಸಿ. ನೀವೂ ನೆಮ್ಮದಿಯಿಂದ ಬಾಳಿ.

ನಿಮಗೆ ಒಳಿತಾಗಲಿ ❤️

      ರೋಶ್ನಿ ರೊಜಾರಿಯೊ ಬಜ್ಪೆ ✍️

You may also like

News

ದಲಿತ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಮಹೇಶ್ ಭಟ್ ಬಂಧನಕ್ಕೆ ಡಿಎಚ್ಎಸ್ ಒತ್ತಾಯ – ಕಠಿಣ ಕ್ರಮಕ್ಕೆ ಆಗ್ರಹ

ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬವನು ನಿರಂತರ ಲೈಂಗಿಕ ಕಿರುಕುಳ ನೀಡುವ ಮೂಲಕ ಮಾನಸಿಕ
News

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕು – ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ

ಮಂಗಳೂರು : ಇನ್ನೊಬ್ಬರ ಬಾಳಿಗೆ ಬೆಳಕಾಗುವ ನೇತ್ರದಾನ ಶ್ರೇಷ್ಠ ದಾನವಾಗಿದ್ದು, ನೇತ್ರದಾನಿಗಳ ಬದ್ಧತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ ಹೇಳಿದರು. ದಕ್ಷಿಣ ಕನ್ನಡ

You cannot copy content of this page