ಡಿಸೆಂಬರ್ 25ರಂದು ಕಿನ್ನಿಗೋಳಿಯ ಸಮೀಪದ ಪದ್ಮನ್ನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಕ್ರಿಸ್ಮಸ್ ಆಚರಣೆ
ಕಿನ್ನಿಗೋಳಿ : ಇಲ್ಲಿಗೆ ಸಮೀಪದ ಪದ್ಮನ್ನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಡಿಸೆಂಬರ್ 25ರಂದು ಸಂಜೆ ಸಾರ್ವಜನಿಕ ಕ್ರಿಸ್ಮಸ್ ದಿನಾಚರಣೆ, ಸನ್ಮಾನ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮವು ಇಲ್ಲಿನ ಯಕ್ಷಗಾನ ಬಯಲಾಟ ವೇದಿಕೆಯಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ಕೊಸೆಸಮ್ಮನವರ ಧರ್ಮ ಕೇಂದ್ರದ ವಂದನೀಯ ಫಾದರ್ ಜೋಕಿಂ ಫೆರ್ನಾಂಡಿಸ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ವಿಜಯ ವಿ., ಸಾಮಾಜಿಕ ಕಾರ್ಯಕರ್ತ ಮೌಶೀರ್ ಅಹ್ಮದ್ ಸಾಮನಿಗೆ ಅತಿಥಿಗಳಾಗಿ ಭಾಗವಹಿಸುವರು. ಇದೇ ವೇಳೆ ನಿವೃತ್ತ ಪೊಲೀಸ್ ಸಹಾಯಕ ಉಪ ನಿರೀಕ್ಷಕ ಮನೋಹರ್ ಹಾಗೂ ಕಿನ್ನಿಗೋಳಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲಿನೆಟ್ ಲೋಬೊ ಅವರನ್ನು ಸನ್ಮಾನಿಸಲಾಗುವುದು ಎಂದವರು ತಿಳಿಸಿದ್ದಾರೆ.
ಸಮಿತಿ ವತಿಯಿಂದ ಹಿಂದೂ, ಮುಸ್ಲಿಂ, ಕ್ರೈಸ್ತ ಬಾಂಧವರ ಒಗ್ಗೂಡುವಿಕೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಡಿಸೆಂಬರ್ 29ರಂದು ಬೆಳಿಗ್ಗೆ ಇಲ್ಲಿನ ಅಶ್ವಥ್ಥಕಟ್ಟೆಯಲ್ಲಿ ವೇದಮೂರ್ತಿ ವಿಶ್ವೇಶ್ವರ ಭಟ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.