ಪತ್ರಕರ್ತ – ನಿರೂಪಕ ಶಂಶೀರ್ ಬುಡೋಳಿ ಇವರು ‘ಸ್ವಾಭಿಮಾನಿ ಕನ್ನಡಿಗ’ ಪ್ರಶಸ್ತಿಗೆ ಆಯ್ಕೆ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಸಾಧಕರಿಗೆ ನೀಡಲ್ಪಡುವ ‘ಸ್ವಾಭಿಮಾನಿ ಕನ್ನಡಿಗ’ ಪ್ರಶಸ್ತಿಗೆ ಪತ್ರಕರ್ತ, ನಿರೂಪಕ, ಕವಿ, ಲೇಖಕ, ಪಿ.ಎಚ್.ಡಿ. ಸ್ಕಾಲರ್ ಶಂಶೀರ್ ಬುಡೋಳಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಕೊಡಗು ಜಿಲ್ಲೆಯ ಜಿಲ್ಲಾಧ್ಯಕ್ಷ ಉನೈಸ್ ಪೆರಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಫೆಬ್ರವರಿ 16ರಂದು ಆದಿತ್ಯವಾರ ಪೆರಾಜೆಯಲ್ಲಿ ನಡೆಯಲಿರುವ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ 50ರ ಸಂಭ್ರಮ ಗಡಿನಾಡ ಕನ್ನಡಿಗರ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಶಂಶೀರ್ ಬುಡೋಳಿ ಅವರು ಮಾಧ್ಯಮ ಕ್ಷೇತ್ರದಲ್ಲಿ ಕಳೆದ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕರ್ನಾಟಕ ಯುವರತ್ನ ಪ್ರಶಸ್ತಿ, ಕಾವ್ಯಸಿರಿ ಪ್ರಶಸ್ತಿ, ಮಾಧ್ಯಮ ಸೇವಾರತ್ನ, ಜನಪ್ರಿಯ ಪುರಸ್ಕಾರ ಸೇರಿ ವಿವಿಧ ಪುರಸ್ಕಾರಗಳನ್ನು ಪಡೆದಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯರಾಗಿರುವ ಇವರು ಮಂಗಳೂರು ವಿಶ್ವವಿದ್ಯಾನಿಲಯದ 11ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಬ್ಯಾರಿ ಭಾಷೆ ಹಾಗೂ ಮಾಧ್ಯಮದ ವಿಷಯದಡಿಯಲ್ಲಿ ಪಿ.ಎಚ್.ಡಿ. ಅಧ್ಯಯನ ಮಾಡುತ್ತಿರುವ ಇವರು ‘ಮನಸ್ಸ್ ರೋ ಪಲಕ’ ಎಂಬ ಬ್ಯಾರಿ ಭಾಷೆಯಲ್ಲಿ ಬರೆದ ಚೊಚ್ಚಲ ಕವನ ಸಂಕಲನ ಬರೆದಿದ್ದಾರೆ. ಅಲ್ಲದೇ ‘ಬ್ಯಾರಿ ಕಾವ್ಯ ಸಂಪುಟ’, ‘ನೇತ್ರಾವತಿ’, ‘ವನಸುಮಗಳು’, ‘ಆಕಾಶ-ತಾಯಿ’ ಹಾಗೂ ‘ಮುಗಿಲಮಾಲೆ’ ಸಂಗ್ರಹಿತ ಕವನ ಸಂಕಲನದಲ್ಲಿ ಇವರ ಕವನಗಳು ಪ್ರಕಟಗೊಂಡಿವೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬುಡೋಳಿ ನಿವಾಸಿ ಇಬ್ರಾಹಿಂ ಫಾಝಿಲ್ ಹನೀಫಿ ಹಾಗೂ ಖೈರುನ್ನೀಸಾ ದಂಪತಿಯ ಪುತ್ರರಾಗಿದ್ದಾರೆ.