July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದಲ್ಲಿ 54ನೇ ವರ್ಷದ ಸಾಮೂಹಿಕ ವಿವಾಹ – 106 ಜೋಡಿಗಳ ದಾಂಪತ್ಯ ಆರಂಭ

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಏಪ್ರಿಲ್ 29ರಂದು ಬುಧವಾರ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 106 ಜೋಡಿ ವಧೂ-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬುಧವಾರ ಬೆಳಿಗ್ಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬದವರು ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ಮೂಗುತಿ ಮತ್ತು ರವಿಕೆ ಕಣ ವಿತರಿಸಿದರು. ಸಂಜೆ 5.00 ಗಂಟೆಗೆ ವಧೂ-ವರರನ್ನು ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನದ ಬಳಿಯಿಂದ ಅಮೃತವರ್ಷಿಣಿ ಸಭಾಭವನಕ್ಕೆ ಕರೆದುಕೊಂಡು ಹೋಗಲಾಯಿತು.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಿಸಿದರು. 6.40ರ ಗೋಧೂಳಿ ಲಗ್ನದಲ್ಲಿ ವೇದಘೋಷ, ಮಂಗಳವಾದ್ಯ, ಹಾರ ವಿನಿಮಯ, ಮಂತ್ರಾಕ್ಷತೆಯೊಂದಿಗೆ ವಧುವಿಗೆ ಮಂಗಳಸೂತ್ರ ಧಾರಣೆ ಮಾಡಲಾಯಿತು. ಸುಶ್ರಾವ್ಯ ಶೋಭಾನೆ ಹಾಡಗಳೊಂದಿಗೆ ವಧೂ-ವರರಿಗೆ ಆರತಿ ಹಾಗೂ ಮಂಗಲದ್ರವ್ಯಗಳನ್ನು ವಿತರಣೆ ಮಾಡಲಾಯಿತು.

ದಾಂಪತ್ಯ ದೀಕ್ಷೆಯ ಬಳಿಕ ನೂತನ ದಂಪತಿಗಳಿಗೆ ಧರ್ಮಸ್ಥಳದ ವತಿಯಿಂದ ಉಡುಗೊರೆ ನೀಡಿ ಶುಭ ಹಾರೈಸಲಾಯಿತು. ಬಳಿಕ ನೂತನ ದಂಪತಿಗಳು ದೇವರ ದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ಊರಿಗೆ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 13100ನೇ ದಂಪತಿಗೆ ಮಂಗಳಸೂತ್ರ ನೀಡಿ ಆಶೀರ್ವದಿಸಿದರು.

ಸಭಾ ಕಾರ್ಯಕ್ರಮ:

ಸಮಾರಂಭದ ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನೂತನ ದಂಪತಿಗಳು ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸದೊಂದಿಗೆ ಹೊಂದಾಣಿಕೆಯಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಸಲಹೆ ನೀಡಿ ಆಶೀರ್ವದಿಸಿದರು.

ಧರ್ಮಸ್ಥಳದಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಸರ್ಕಾರ ಹಾಗೂ ಇತರ ಮಠ-ಮಂದಿರಗಳು ಮಾದರಿಯಾಗಿ ಸ್ವೀಕರಿಸಿ ಅನುಸರಿಸುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಇನ್ನು ಮುಂದೆ ಬೇರೆಡೆಗಳಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹ ಸಮಾರಂಭಗಳಿಗೆ ಧರ್ಮಸ್ಥಳದಿಂದ ಮಂಗಳಸೂತ್ರ ನೀಡುವುದಿಲ್ಲ ಎಂದು ಅವರು ತಿಳಿಸಿದರು. ಇದರಿಂದ ಜನರಲ್ಲಿ ತಪ್ಪು ಕಲ್ಪನೆ ಉಂಟಾಗಿ ಧರ್ಮಸ್ಥಳಕ್ಕೆ ಬರುವ ಬದಲು ಬೇರೆಡೆ ಮದುವೆಯಾಗುವ ಪ್ರವೃತ್ತಿ ಹೆಚ್ಚಾಗಬಹುದು ಎಂದು ಹೇಳಿದರು.

ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಶುಭಾಶಯ ನೀಡಿ, ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಬದಲಾವಣೆಯ ಹಂತವಾಗಿದ್ದು, ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹವು ಅತ್ಯಂತ ಪವಿತ್ರ ಹಾಗೂ ಪುಣ್ಯದಾಯಕ ಸೇವೆಯಾಗಿದೆ ಎಂದರು.

ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಪೂಜ್ಯ ಹೆಗ್ಗಡೆ ದಂಪತಿಯ ಸಾರ್ಥಕ ಜೀವನ ಎಲ್ಲರಿಗೂ ಪ್ರೇರಣೆ ಮತ್ತು ಮಾರ್ಗದರ್ಶಕವಾಗಿದೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಶರ್ಮಿಳಾ ವೇದಿಕೆಯಲ್ಲಿ ಇದ್ದರು. ಬೆಂಗಳೂರಿನ ಕ್ಷೇಮವನದ CEO ಶ್ರದ್ಧಾಅಮಿತ್ ಸ್ವಾಗತಿಸಿದರು. ಪೂಜ್ಯ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಧನ್ಯವಾದ ಸಲ್ಲಿಸಿದರು. ಸಂಪತ್ ಕುಮಾರ್ ರೈ ಮತ್ತು ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮವನ್ನು ನಿರ್ವಹಿಸಿದರು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page