ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ನೂತನ ಕಚೇರಿ ‘ಪ್ರಜಾ ಸೌಧ’ ಲೋಕಾರ್ಪಣೆ
ದಕ್ಷಿಣ ಕನ್ನಡ ಜಿಲ್ಲಾಡಳಿತ, ಕಂದಾಯ ಇಲಾಖೆ, ಗೃಹ ಮಂಡಳಿ ಹಾಗೂ ಮಂಗಳೂರು ಸ್ಟಾರ್ಟ್ ಸಿಟಿ ವತಿಯಿಂದ ಒಟ್ಟು 75 ಕೋಟಿ ರೂಪಾಯಿ ವೆಚ್ಚದಲ್ಲಿ ಪಡೀಲ್‌ನಲ್ಲಿ ನಿರ್ಮಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ವನ್ನು ಮೇ 16ರಂದು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ನಾವೆಲ್ಲರೂ ಕನ್ನಡ ನಾಡಿನಲ್ಲಿ ಇರುವವರು. ಕನ್ನಡ ನಮ್ಮ ಅಧಿಕೃತ ಭಾಷೆ. ಕನ್ನಡಕ್ಕೆ ಮೊದಲ ಆದ್ಯತೆಯೊಂದಿಗೆ ತುಳುಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಬಗ್ಗೆ ಪರಿಶೀಲನೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.



ರಾಜ್ಯದ ಎಲ್ಲಾ ಜನರಿಗೂ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬುವ ಜತೆಗೆ ಎಲ್ಲರೂ ನೆಮ್ಮದಿಯಿಂದ ಬದುಕುವ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸಬೇಕಿದೆ. ಕರಾವಳಿ, ಮಲೆನಾಡು ಸಹಿತ ರಾಜ್ಯದ ಎಲ್ಲಾ ಪ್ರದೇಶದ ಸರ್ವತೋಮುಖ ಅಭಿವೃದ್ಧಿ ನಮ್ಮ ಸಂಕಲ್ಪವಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಶಿಕ್ಷಣದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಅಗ್ರಸ್ಥಾನದಲ್ಲಿವೆ. ಬುದ್ದಿವಂತರು, ವಿದ್ಯಾವಂತರು ಇಲ್ಲಿದ್ದಾರೆ. ಹೀಗಾಗಿ ಈ ನೆಲ ಶಾಂತಿಯ ತೋಟವಾಗಬೇಕಿದೆ. ಯಾವುದೇ ಕಾರಣಕ್ಕೂ ಕೋಮುಗಲಭೆ ನಡೆಯಬಾರದು. ಅದಕ್ಕಾಗಿ ಎಲ್ಲಾ ರಾಜಕಾರಣಿಗಳು ಶ್ರಮಿಸಬೇಕಿದೆ. ಎಲ್ಲರೂ ಭ್ರಾತೃತ್ವದಿಂದ ಸಹಿಷ್ಣುತೆ, ಸಹಬಾಳ್ವೆ ನಡೆಸುವ ಮನೋಭಾವ ಬೆಳೆಸೋಣ ಎಂದರು. ನಮ್ಮ ಸರಕಾರದ ಹಿಂದಿನ ಅವಧಿಯಲ್ಲಿ ವಿವಿಧ ಭಾಗ್ಯ ಯೋಜನೆಗಳನ್ನು ತಂದರೆ ಈ ಬಾರಿ ಗ್ಯಾರಂಟಿ ಯೋಜನೆ ತರುವ ಕೆಲಸ ಆಗಿದೆ. 3,71,000 ಕೋಟಿ ರೂಪಾಯಿಗಳಾಗಿದ್ದ ರಾಜ್ಯದ ಬಜೆಟ್ ಗಾತ್ರ 4,9,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. 38,000 ಕೋಟಿ ರೂಪಾಯಿ ಬಜೆಟ್ ಗಾತ್ರ ಜಾಸ್ತಿ ಆಗಿದೆ. ಕರ್ನಾಟಕ ಮಾದರಿ ಸರಕಾರ ಆಗಿ ರೂಪು ಗೊಳ್ಳುತ್ತಿದೆ ಎಂದು ಹೇಳಿದರು.


ನುಡಿದಂತೆ ನಡೆದಿದ್ದೇವೆ, ಹೇಳಿದ್ದನ್ನು ಮಾಡಿದ್ದೇವೆ
ನಾವು ನುಡಿದಂತೆ ನಡೆದಿದ್ದೇವೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು
ಕೊಡುವ ಭರವಸೆ ನೀಡಿದ್ದೆವು. ಬಾಗಲಕೋಟೆ, ದಕ್ಷಿಣ ಕನ್ನಡ, ಕೋಲಾರದಲ್ಲಿ ಈ ಬಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ನಿರ್ಧರಿಸಿದ್ದೇವೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಒತ್ತಡದ ಕಾರಣದಿಂದ ಪುತ್ತೂರಿಗೆ ಮೆಡಿಕಲ್ ಕಾಲೇಜು ಕೊಟ್ಟಿದ್ದೇವೆ. ಸದ್ಯ 250 ಬೆಡ್‌ಗಳ ಆಸ್ಪತ್ರೆ ಮಾಡುತ್ತೇವೆ. ಬಳಿಕ 500 ಬೆಡ್‌ಗಳ ಆಸ್ಪತ್ರೆಯಾಗಿ ವಿಸ್ತರಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, `ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲಿ ಶಿಲಾನ್ಯಾಸ ಆಗಿದ್ದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವನ್ನು ಇದೀಗ ಅವರೇ ಉದ್ಘಾಟಿಸಿದ್ದಾರೆ. ಆರಂಭದಲ್ಲಿ ವೇಗದಿಂದ ನಡೆದ ಕಾಮಗಾರಿ ಬಳಿಕ ಕೆಲವು ವರ್ಷ ಏನೂ ಆಗದೆ ಈ ಜಾಗ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ನಗರ ಕಾಡು ಎಂಬ ಸ್ವರೂಪದಲ್ಲಿತ್ತು. ನಮ್ಮ ಸರಕಾರ ಬಂದ ಮೇಲೆ ಅದಕ್ಕೆ ಹೆಚ್ಚುವರಿ ಅನುದಾನವನ್ನು ನೀಡುವಂತೆ ಸಿಎಂ ಅವರಿಗೆ ನಾನು ಹಾಗೂ ದಿನೇಶ್ ಗುಂಡೂರಾವ್ ಅವರು ಮನವಿ ಮಾಡುವ ಮೂಲಕ ಅನುದಾನ ದೊರಕಿದೆ. ಭೂ ಮಸೂದೆ ಕಾಯ್ದೆ ಮೂಲಕ 1,32,290 ಎಕರೆ ಭೂಮಿ ಮಂಜೂರಾಗಿ ಫಾರ್ಮ್ 50 ಹಾಗೂ 53 ನೀಡಲಾಗಿದ್ದರೂ ಈವರೆಗೆ ಪೋಡಿಯಾಗಿರುವ ಭೂಮಿ ಕೇವಲ 17,230 ಎಕರೆ, ಕಳೆದ ಆರು ತಿಂಗಳಲ್ಲಿ ಪೋಡಿ ಮುಕ್ತ ಅಭಿಯಾನ ಆರಂಭಿಸಿ ದಕ್ಷಿಣ ಕನ್ನಡ ಜಿಲ್ಲೆಯ 30,000 ಅರ್ಜಿಗಳಲ್ಲಿ 8,000 ಮಂದಿಗೆ ಪೋಡಿ ಮಾಡಿ ನೀಡಿದ್ದೇವೆ. ಒಂದೂವರೆ ವರ್ಷದಲ್ಲಿ ರಾಜ್ಯದ 80,000 ರೈತರಿಗೆ ಪೋಡಿ ಮಾಡಿ ನೀಡುವ ಸಂಕಲ್ಪ ಮಾಡುತ್ತಿದ್ದೇವೆ ಎಂದು ಹೇಳಿದರು.

ದಕ್ಷಿಣ ಕನ್ನಡ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ
ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ ಆಗಲಿದೆ. ಸಚಿವ ಕೃಷ್ಣಬೈರೇಗೌಡರು ವಿಶೇಷ ಕಾಳಜಿ, ಸಾಕಷ್ಟು ಶ್ರಮ ವಹಿಸಿ ಜಿಲ್ಲೆಯನ್ನು ಪೋಡಿಮುಕ್ತ ಮಾಡುವ ದಿಕ್ಕಿನಲ್ಲಿ ಕೆಲಸಗಳು ಆಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಸೌಧ ಕಾನೂನು ರಚನೆ ಮಾಡುವ ಕೇಂದ್ರವಾದರೆ, ಪ್ರಜಾಸೌಧ ತಮ್ಮ ಕೆಲಸ ಕಾರ್ಯಗಳಿಗಾಗಿ ನಿರೀಕ್ಷೆ ಇರಿಸಿ ಬರುವ ಜನರ ಸೇವೆ ಮಾಡುವ ಕೆಲಸ. ಜನರೇ ನಮ್ಮ ಮಾಲಕರು. ಅವರ ನಿರೀಕ್ಷೆ ಹುಸಿಗೊಳಿಸದ ರೀತಿಯಲ್ಲಿ ಆಡಳಿತ ವರ್ಗ ಪ್ರಜಾಸೌಧದ ಮೂಲಕ ಸೇವೆ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಿಎಂರಿಂದ ಸರಣಿ ಉದ್ಘಾಟನೆ, ಶಿಲಾನ್ಯಾಸ
ಪಡೀಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೂತನ ಕಚೇರಿ ಪ್ರಜಾ ಸೌಧ ಉದ್ಘಾಟನೆ, ಐತಿಹಾಸಿಕ ದರ್ಖಾಸ್ತು ಪೋಡಿ ಅಭಿಯಾನದ ಅಂಗವಾಗಿ 8,000 ಮಂದಿಗೆ ಆರ್‌ಟಿಸಿ ವಿತರಣೆ, ಗುರುಪುರ ನಾಡಕಚೇರಿ ಉದ್ಘಾಟನೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮರಕಡದಲ್ಲಿ 4.29ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸಣ್ಣ ನೀರಾವರಿ ಮತ್ತು ಅಂತರ್‌ಜಲ ಅಭಿವೃದ್ಧಿ ಇಲಾಖೆ ವಿಭಾಗ ಮತ್ತು ಉಪವಿಭಾಗ ಕಚೇರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಇದಾದ ಬಳಿಕ ನಾನಾ ಅಭಿವದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ, ವಿವಿಧ ಸರಕಾರಿ ಸವಲತ್ತು ಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.




