ಆವೈಜ್ಞಾನಿಕ ರಸ್ತೆ ಹಾಗೂ ನಿರ್ಲಕ್ಷತನದ ಕಾಮಗಾರಿ ಬಗ್ಗೆ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೈತ್ರ ಹಾಗೂ ಕೆ.ಆರ್.ಡಿ.ಬಿ.ಎಲ್. ಅಧಿಕಾರಿಗಳ ಮೇಲೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೂವರ ಸಾವಿಗೆ ಹಾಗೂ ಕಾಲು ಮುರಿತಕ್ಕೆ ಕಾರಣರು ಎಂದು ದೂರಲ್ಲಿ ಉಲ್ಲೇಖ

ಭಾರತೀಯ ನ್ಯಾಯ ಸಹಿತೆ ಕಲಂ 105 ಹಾಗೂ 106ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಕೋರಿಕೆ
ಮೇ 30ರಂದು ಶುಕ್ರವಾರ ಬೆಳಿಗ್ಗೆ 3.30 ಗಂಟೆಗೆ ಸುರಿದ ಮಳೆಯಿಂದ ಸೀತಾರಾಮ ಎಂಬವರ ಮನೆ ಮೇಲೆ ಗುಡ್ಡ ಕುಸಿದು, ಅವರ ತಂದೆ ಕಾಂತಪ್ಪ ಪೂಜಾರಿಯವರ ಕಾಲು ತುಂಡಾಗಿತ್ತು. ಮಕ್ಕಳದಾದ 3 ವರ್ಷ ಪ್ರಾಯದ ಆರ್ಯನ್ ಹಾಗೂ 1ವರ್ಷ 6 ತಿಂಗಳ ಮಗು ಆರುಷ್ ಹಾಗೂ ಪ್ರೇಮ ಪೂಜಾರಿಯವರು ಮನೆಯ ಅಡಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಸೀತಾರಾಮ ಅವರ ಹೆಂಡತಿ ಅಶ್ವಿನಿಯವರ ತಮ್ಮ ತೇಜು ಕುಮಾರ್ ಎಂಬವರು ಕೋಣಾಜೆ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ಸಲ್ಲಿಸಿದ್ದಾರೆ.

ಊರಿನಲ್ಲಿ ಉಲ್ಲೇಖಿಸಿದಂತೆ ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ ಉರುಮನೆ ಕೋಡಿ ಎಂಬಲ್ಲಿ ಅಕ್ಕ ಆಶ್ವಿನಿ ಎಂಬುವವರನ್ನು ಮಂಜನಾಡಿ ಗ್ರಾಮದ ಉರುಮಾನೆ ಕೋಡಿ ಮನೆಯ ಸೀತಾರಾಮ್ ಎನ್ನುವವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಅಶ್ವಿನಿಯಕ್ಕ ಮತ್ತು ಭಾವ ಅವರ ತಂದೆ ತಾಯಿ ಇಬ್ಬರು ಮಕ್ಕಳೊಂದಿಗೆ ಆ ಮನೆಯಲ್ಲಿ ವಾಸವಾಗಿದ್ದರು. ಅವರು ವಾಸಿಸುತ್ತಿದ್ದ ಮನೆಯ ಹಿಂದೆ ಗುಡ್ಡ ಇದ್ದು, ಗುಡ್ಡದ ಮೇಲೆ ರಸ್ತೆ ಕಾಮಗಾರಿ ನಡೆಸಿದ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೈತ್ರ ಹಾಗೂ ಕೆ.ಆರ್.ಡಿ.ಬಿ.ಎಲ್. ಅಧಿಕಾರಿಗಳು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಗಳು ರಚಿಸಿದ ಅವೈಜ್ಞಾನಿಕ ರಸ್ತೆ ಹಾಗೂ ನಿರ್ಲಕ್ಷದ ಕಾಮಗಾರಿಯಿಂದ ಎರಡು ಮಕ್ಕಳು ಸಹಿತ ಮೂವರ ಸಾವು ಸಂಭವಿಸಿದ್ದು, ಕಾಂತಪ್ಪ ಪೂಜಾರಿಯವರ ಎರಡು ಕಾಲೂ ಮುರಿದಿದ್ದು, ಅಕ್ಕ ಅಶ್ವಿನಿ ಗಂಭೀರವಾಗಿ ಗಾಯಗೊಂಡು ದೇರಳಕಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ.

ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕೆ.ಆರ್.ಡಿ.ಬಿ.ಎಲ್. ಅಧಿಕಾರಿಗಳು ಕೈಗೊಂಡಿರುತ್ತಾರೆ ಎಂದು ಸಾಬೀತು ಪಡಿಸಲು ಕಾಮಗಾರಿ ನಡೆಸಿದವರ ಫಲಕದ ಫೋಟೊವನ್ನೂ ತೇಜು ಕುಮಾರ್ ನೀಡಿದ್ದಾರೆ. ಆದ್ದರಿಂದ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕೆ.ಆರ್.ಡಿ.ಬಿ.ಎಲ್. ಅಧಿಕಾರಿಗಳು ಆವೈಜ್ಞಾನಿಕ ರಸ್ತೆ ಹಾಗೂ ನಿರ್ಲಕ್ಷತನದ ಕಾಮಗಾರಿ ಬಗ್ಗೆ, ಪಕ್ಕದಲ್ಲಿ ಜನರು ವಾಸಿಸುವ ಮನೆ ಇದ್ದುದು ಗೊತ್ತಿದ್ದೂ, ಅಂತೆಯೇ ಮುಂದೆ ಸಾವು ನೋವು ಸಂಭವಿಸುವ ಸಾಧ್ಯತೆ ಬಗ್ಗೆ ಚೆನ್ನಾಗಿ ತಿಳಿದಿದ್ದರೂ ರಸ್ತೆ ಕಾಮಗಾರಿಯನ್ನು ನಡೆಸಲಾಗಿದೆ.

ನಿರ್ಲಕ್ಷತನದ ಕಾಮಗಾರಿಯ ಕೃತ್ಯದಿಂದ ಮೂವರು ಮೃತಪಟ್ಟಿದ್ದು, ಹಾಗೂ ಗಂಭೀರ ಗಾಯಕ್ಕೆ ಕಾರಣವಾದ ಅಧಿಕಾರಿಗಳ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 ಮತ್ತು 106 ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ತೇಜು ಕುಮಾರ್ ವಿನಂತಿಸಿದ್ದಾರೆ. ಬದುಕಿಳಿದವರು ಮಾನಸಿಕ ಅಘಾತಕ್ಕೆ ಒಳಗಾದುದರಿಂದ ಅವರ ಬದಲಿಗೆ ತಾನು ಲಿಖಿತ ದೂರು ನೀಡುತ್ತಿದ್ದೇನೆ ಎಂದು ತೇಜು ಕುಮಾರ್ ಅವರು ಸ್ಪಷ್ಟವಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಕೊಣಾಜೆ ಪೋಲಿಸ್ ಠಾಣೆಯಲ್ಲಿ ಕ್ರ.ನಂ. 15/2025 ರ UDR ಪ್ರಕರಣವನ್ನು ಈಗಾಗಲೇ ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ. ತನಿಖೆಯ ಭಾಗವಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಸಂಗತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಅರ್ಜಿಯ ವಿಷಯಗಳಿಗೆ ಯಾವುದೇ ಪುರಾವೆಗಳು ಕಂಡುಬಂದರೆ, ಸಂಬಂಧಪಟ್ಟ ಕಾನೂನಿನ ಸೆಕ್ಷನ್‌ಗಳನ್ನು ಅನ್ವಯಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮಂಗಳೂರು ಸಿಟಿ ಪೊಲೀಸ್ ಕಮಿಷನರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




