ಮೆಸ್ಕಾಂ ಸಿಬ್ಬಂದಿ ಮನೆಗೆ ಲೋಕಾಯುಕ್ತ ದಾಳಿ – 3 ಕೋಟಿಗೂ ಅಧಿಕ ಆಸ್ತಿ ಸಂಪಾದನೆ ಬಯಲು
ಮೆಸ್ಕಾಂ ವಿಭಾಗದ ಅಧಿಕಾರಿಯ ಮನೆಗೆ ಲೋಕಾಯುಕ್ತ ತಂಡ ಮೇ 31ರಂದು ಶನಿವಾರ ನಸುಕಿನ ವೇಳೆ ದಾಳಿ ನಡೆಸಿದ್ದಾರೆ. ಕಾರ್ಕಳ ತಾಲೂಕಿನ ಮೆಸ್ಕಾಂ ವಿಭಾಗದ ಅಕೌಂಟ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರೀಶ್ ರಾವ್ ಎಂಬವರ ಮನೆಗೆ, ಅಕ್ಕ ಹಾಗೂ ತಾಯಿ ಮನೆಗೆ ಕೂಡ ದಾಳಿ ನಡೆದಿದೆ. ಬಳಿಕ ಕರ್ತವ್ಯ ನಿರ್ವಹಿಸುತ್ತಿದ್ದ ಮೆಸ್ಕಾಂ ಕಛೇರಿ ಹಾಗೂ ಅವರ ಪತ್ನಿ ಆಶಾ ಜಿ. ರಾವ್ ಮಾಲಿಕತ್ವದ ಬೈಪಾಸ್ ಪುಟ್ಟೇರಿ ಬಳಿಯ ಹೊಟೇಲ್‌ಗೂ ದಾಳಿ ನಡೆಸಿ, ಅಗತ್ಯ ಕಡತಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದಾರೆ. ಚಿನ್ನಾಭರಣ, ನಗದು, ಸೈಟ್, ವಾಹನಗಳು ಹಾಗೂ ಕಟ್ಟಡಗಳು ಸೇರಿದಂತೆ ಒಟ್ಟು 3 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಸಂಪಾದನೆ ಕಂಡು ಬಂದಿದ್ದು, ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.


ಕಟ್ಟಡದ ಮೇಲೆ ದೂರು : ಮೇ 16ರಂದು ಲೋಕಾಯುಕ್ತ ಸಾರ್ವಜನಿಕ ಭೇಟಿ ಕಾರ್ಯಕ್ರಮ ತಾಲೂಕು ಕಛೇರಿಯಲ್ಲಿ ನಡೆದಿತ್ತು. ಸಾಮಾಜಿಕ ಕಾರ್ಯಕರ್ತ ಉಮೇಶ್ ಕಲ್ಲೊಟ್ಟೆ ಅವರು ಆಶಾ ಜಿ. ರಾವ್ ಮಾಲಿಕತ್ವ ಪುರಿ ಬೈಪಾಸ್ ಬಳಿಯ ಹೊಟೇಲ್ ಅನಘಕ್ಕೆ ಸಂಬಂಧಿಸಿದ ಕಟ್ಟಡ ನಿರ್ಮಾಣದ ಮೇಲಿರುವ ಅನುಮಾನದ ಬಗ್ಗೆ ದೂರು ನೀಡಿದ್ದರು. ರಸ್ತೆಯಂಚಿನಿಂದ 6 ಮೀಟರ್ ದೂರದ ಸೆಟ್‌ಬ್ಯಾಕ್ ಹೊಂದಿರುವ ಈ ಕಟ್ಟಡಕ್ಕೆ ಅನುಮತಿ ನೀಡಿರುವುದಾಗಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಿಥುನು ಲೋಕಾಯುಕ್ತರ ಮುಂದೆ ವಾದಿಸಿದ್ದರು.


ಉಮೇಶ್ ಕಲ್ಲೊಟ್ಟೆ ಅವರು ಮಾತನಾಡಿ, ಭೂ-ಪರಿವರ್ತನೆಯ ಆದೇಶದಲ್ಲಿ ಉಡುಪಿ ಜಿಲ್ಲಾಧಿಕಾರಿಗಳು 40 ಮೀಟರ್ ಸೆಟ್‌ಬ್ಯಾಕ್ ಅಗತ್ಯ ಎಂದು ಆದೇಶಿಸಿರುವ ಬಗ್ಗೆ ವಿವರಿಸಿದರು. ಜತೆಗೆ ಸಾಣೂರು ಪಿಡಿಒ ಅವರು ಈ ಹೊಸ ಕಟ್ಟಡಕ್ಕೆ ವಿಸ್ಕೃತ ಕಟ್ಟಡದ ಪರವಾನಿಗೆ ನೀಡಿದ್ದರು. ಈ ಹಿಂದೆ ಆ ಜಾಗದಲ್ಲಿ ಕಟ್ಟಡವೇ ಇರಲಿಲ್ಲ. ಜತೆಗೆ ಭೂಮಿ ನೋಂದಾವಣೆ ಸಂದರ್ಭ ಕಡತದಲ್ಲಿ ಅಲ್ಲಿರುವ ಹಳೆ ಕಟ್ಟಡದ ಬಗ್ಗೆ ವಿವರಣೆ ಇಲ್ಲ ಎಂದು ಲೋಕಾಯುಕ್ತರ ಗಮನ ಸೆಳೆದಿದ್ದರು. ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ಈ ಬಗ್ಗೆ ತನಿಖೆ ನಡೆಸುವ ಭರವಸೆ ನೀಡಿದ್ದು, ಇಂದಿನ ದಾಳಿಗೆ ಅದೇ ಕಾರಣ ಎನ್ನಲಾಗಿದೆ.




