ಅಜಾಗರೂಕತೆ ಹಾಗೂ ಮದ್ಯಪಾನದ ಚಾಲನೆ ಸಲ್ಲದು – ಪೊಲೀಸ್ ಕಮಿಷನರ್ ಎಚ್ಚರಿಕೆ
ಮದ್ಯಪಾನ ಮಾಡಿ ವಾಹನ ಚಲಾಯಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಕೆಲವು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದಲ್ಲಿ ಭಾರತೀಯ ಮೋಟರ್ ವಾಹನ ಕಾಯ್ದೆ ಕಲಂ 185ರ ಅನ್ವಯ ಪ್ರಕರಣ ದಾಖಲಿಸಿ 10 ಸಾವಿರ ರೂಪಾಯಿವರೆಗೆ ದಂಡ ಪಾವತಿಸಬೇಕಾಗುತ್ತದೆ. ಅತೀವೇಗದಿಂದ ವಾಹನ ಚಲಾಯಿಸಿದರೆ ಭಾರತೀಯ ಮೋಟರ್ ವಾಹನ ಕಾಯ್ದೆ ಕಲಂ 183ರ ಅನ್ವಯ ಪ್ರಕರಣ ದಾಖಲಿಸಿ 2/3/ಎಲ್‌ಎಂವಿ ವಾಹನಗಳಿಗೆ 1,000 ರೂಪಾಯಿ, ಎಚ್ಎಂವಿ/ಎಚ್‌ಜಿವಿ/ಇತರ ವಾಹನಗಳಿಗೆ 2,000 ರೂಪಾಯಿವರೆಗೆ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಅಜಾಗರೂಕತೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ರಸ್ತೆ ಅಪಘಾತ ಉಂಟಾಗಿ ಚಾಲಕ, ಪ್ರಯಾಣಿಕರು ಸಾವು ನೋವುಗಳನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದರಿಂದ ಕುಟುಂಬ ಮತ್ತು ಅವಲಂಬಿತರು ದುಃಖ ಅನುಭವಿಸುತ್ತಾರೆ. ಹೆಚ್ಚಿನ ಆಜಾಗರೂಕತೆಯ ಚಾಲನೆಗಳು 30 ವರ್ಷದ ಕೆಳಗಿನ ಯುವಜನತೆಯೇ ಈ ತಪ್ಪನ್ನು ಮಾಡಿದ್ದಾರೆ. ಅಂತೆಯೇ ಹೆತ್ತವರು ತಮ್ಮ ಮಕ್ಕಳಿಗೆ ವಾಹನಗಳನ್ನು ನೀಡಿದಾಗ ಅಜಾಗರೂಕತೆ ಮಾಡಬಾರದಾಗಿ ಹಾಗೂ ಮಧ್ಯಪಾನ ಮಾಡಿ ವಾಹನ ಚಲಾಯಿಸದಂತೆ ತಮ್ಮ ಮಕ್ಕಳಿಗೆ ತಿಳಿ ಹೇಳಬೇಕು ಎಂದವರು ಎಚ್ಚರಿಸಿದ್ದಾರೆ.



