ಮೊಗರ್ನಾಡ್ ಚರ್ಚ್ ನ ಹೊಸಾನ್ನಾ ವಲಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಉತ್ಸವ – ಸಂಭ್ರಮಾಚರಣೆ
ಮೊಗರ್ನಾಡ್ ದೇವಮಾತಾ ಚರ್ಚ್ ನ 250ನೇ ವರ್ಷದ ಜುಬಿಲಿ ಸಂಭ್ರಮಾಚರಣೆಯ ಪ್ರಯುಕ್ತ ಹೊಸಾನ್ನಾ ಝೋನ್ ವಲಯದಲ್ಲಿ ಸಮುದಾಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಉತ್ಸವವನ್ನು ಕುಕ್ಕಾಜೆಯ ಮ್ಯಾಕ್ಸಿಂ ಫೆರ್ನಾಂಡಿಸ್ ರವರ ನಿವಾಸದಲ್ಲಿ ಜೂನ್ 22ರಂದು ಆದಿತ್ಯವಾರ ಹಮ್ಮಿಕೊಳ್ಳಲಾಗಿತ್ತು.






ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗರ್ನಾಡ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊರವರು ವಹಿಸಿದ್ದರು. ಅವರು ಮಾತನಾಡುತ್ತಾ “ಕ್ರಿಯಾಶೀಲಾ ಸಂಘ-ಸಂಸ್ಥೆಗಳಿಂದ ಧಾರ್ಮಿಕ ಕೇಂದ್ರಗಳ ಹಾಗೂ ಸಮಾಜದ ಅಭಿವೃದ್ಧಿಯಾಗುವುದು. ನಾವು ಮಾಡುವ ಉತ್ತಮ ಸೇವೆಗಳಿಂದ ಪರಮಾತ್ಮನನ್ನು ಒಲಿಯಲು ಸಾಧ್ಯ. ಪ್ರತಿ ಕುಟುಂಬದಿಂದ ಒರ್ವನಾದರೂ ಸಂಘ ಸಂಸ್ಥೆಗಳ ಸದಸ್ಯರಾಗಬೇಕು” ಎಂದು ಕರೆಯಿತ್ತರು.








ಹಲವು ವರ್ಷಗಳಿಂದ ಸಂಘ ಸಂಸ್ಥೆಗಳಲ್ಲಿ, ಸಮುದಾಯದಲ್ಲಿ ದುಡಿದ ಸುಮಾರು 65 ಮಂದಿ ಅಧ್ಯಕ್ಷ ಕಾರ್ಯದರ್ಶಿಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಮುಖ್ಯ ಅತಿಥಿಗಳಾಗಿ ದೇವಮಾತ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ ಹಾಗೂ ಅತಿಥಿಗಳಾಗಿ ಸಂತ ಅಂತೋನಿ ಶಾಲೆಯ ಮುಖ್ಯೋಪಾಧ್ಯಾಯನಿ ಭಗಿನಿ ಆನ್ನಿ ಡಿಸೋಜ ಮತ್ತು ಚರ್ಚ್ ನ 250ನೇ ಜುಬಿಲಿ ಕಮಿಟಿಯ ಸಂಚಾಲಕ ನವೀನ್ ಡಿಕುನ್ಹಾ ಆಗಮಿಸಿದ್ದರು.









ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಆಯೋಗಗಳ ಸಂಯೋಜಕಿ ಎಮಿಲಿಯಾನ ಡಿಕುನ್ಹಾ ಮತ್ತು ವಾಳೆಗಳ ಗುರಿಕಾರರಾದ ವಿಲಿಯಂ ಪಿರೇರಾ, ರವಿ ಮತ್ತು ರಾಜೇಶ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಝೋನ್ ಕಾರ್ಯದರ್ಶಿ ಪ್ಲೇವಿ ಲೋಬೊ ಸನ್ಮಾನ ಪತ್ರ ವಾಚಿಸಿದರು. ಝೋನ್ ನಾಯಕರಾದ ಸಂತೋಷ್ ಡಿಸೋಜ ಸರ್ವರನ್ನು ಸ್ವಾಗತಿಸಿದರು. ವಿಲ್ಮಾ ಪಾಯ್ಸ್ ವಂದನಾರ್ಪಣೆಗೈದರು. ಮೆಲ್ವಿಟಾ ಪಿರೇರಾ ಕಾರ್ಯಕ್ರಮವನ್ನು ನಿರೂಪಿಸಿದರು. ನೆರೆದ ಎಲ್ಲರಿರೂ ಭೋಜನವನ್ನು ಏರ್ಪಡಿಸಲಾಗಿತ್ತು.




