ಮುಖ್ಯೋಪಾಧ್ಯಾಯರ ಸಂಘದ ಶೈಕ್ಷಣಿಕ ಸಮ್ಮೇಳನ 2025
ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹಾಗೂ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಸಮ್ಮೇಳನವು ಜೂನ್ 26 ರಂದು ಗುರುವಾರ ಮಂಗಳೂರಿನ ರೊಸಾರಿಯೊ ಕಲ್ಚರಲ್ ಸಭಾಭವನದಲ್ಲಿ ವಿಜ್ರಂಭಣೆಯಿಂದ ಜರುಗಿತು. ಈ ಶೈಕ್ಷಣಿಕ ಸಮ್ಮೇಳನದಲ್ಲಿ 2025ರ SSLC ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, 100% ಫಲಿತಾಂಶ ಪಡೆದ ಮುಖ್ಯಸ್ಥರಿಗೆ, ನಿವೃತ್ತ ಮುಖ್ಯಸ್ಥರಿಗೆ ಸನ್ಮಾನ ಹಾಗೂ ಸ್ಟ್ಯಾನಿ ಫ್ರಾನ್ಸಿಸ್ ಬಾರೆಟ್ಟೋ ಮತ್ತು ಸುಜನ್ಯ ಸ್ಮರಣಾರ್ಥ ಸ್ಕಾಲರ್ಶಿಪ್ ವಿತರಣಾ ಕಾರ್ಯಕ್ರಮ ನಡೆಯಿತು.



ಪ್ರಾರ್ಥನೆ ಹಾಗೂ ನಾಡ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದ ವಂದನೀಯ ಫಾದರ್ ರಾಬರ್ಟ್ ಡಿಸೋಜ, ಶಿಕ್ಷಣ ತಜ್ಞರು, ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಸಮಾಜದ ರುವಾರಿಗಳು, ಮಕ್ಕಳು ಕೆಡುಕನ್ನ ಬಿಟ್ಟು ಮುಂದಿನ ಜನಾಂಗಕ್ಕೆ ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು. ಸಂಘದ ಸದಸ್ಯರಾಗಿ ನಿವೃತ್ತಿ ಹೊಂದಿದ ಮುಖ್ಯಸ್ಥರಿಗೆ ಸನ್ಮಾನಿಸಲಾಯಿತು. ಸಂಘದ ಸದಸ್ಯ ಶಾಲೆಗಳಲ್ಲಿ SSLC ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮುಖ್ಯ ಅತಿಥಿಗಳಾದ ರಾಜಲಕ್ಷ್ಮಿರವರು ಸಭೆಯನ್ನು ಉದ್ದೇಶಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಶೇಕಡಾ 100 ಫಲಿತಾಂಶ ಪಡೆದ ಶಾಲಾ ಮುಖ್ಯಸ್ಥರನ್ನು ಗೌರವಿಸಿ ಮಾತನಾಡಿದ ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಉಪನಿರ್ದೇಶಕ ಗೋವಿಂದ ಮಡಿವಾಳರವರು SSLC ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಬರಲು ಕಾರಣಕರ್ತರಾದವನ್ನು ಅಭಿನಂದಿಸಿದರು. ಆದರೆ 10% ಅನುತ್ತೀರ್ಣ ವಿದ್ಯಾರ್ಥಿಗಳ ಕಡೆ ಹೆಚ್ಚಿನ ಗಮನ ನೀಡಲು ಕರೆ ನೀಡಿದರು.



ಆಂಗ್ಲ ಮಾಧ್ಯಮದಲ್ಲಿ 624 ಅಂಕ ಪಡೆದ 2 ವಿದ್ಯಾರ್ಥಿಗಳಿಗೆ, ಕನ್ನಡ ಮಾಧ್ಯಮದಲ್ಲಿ 623 ಅಂಕ ಪಡೆದ ವಿದ್ಯಾರ್ಥಿಗಳಿಗೆ ಹೀಗೆ ಒಟ್ಟು 11 ವಿದ್ಯಾರ್ಥಿಗಳಿಗೆ ಸುಮಾರು ರೂಪಾಯಿ 50,000 ಸ್ಕಾಲರ್ಶಿಪ್ ನ್ನು ತನ್ನ ನಿಧಿಯಿಂದ ವಿತರಿಸಿ ಮಾತನಾಡಿದ ಮುಖ್ಯ ಅತಿಥಿ ಸ್ಟ್ಯಾನಿ ಫ್ರಾನ್ಸಿಸ್ ಬಾರೆಟ್ಟೋ ಅವರು ವಿದ್ಯಾರ್ಥಿಗಳು ದೇಶದ ಭವಿಷ್ಯ, ತಾನು ಮಾಡುತ್ತಿರುವ ನಿಸ್ವಾರ್ಥ ಸೇವೆ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಮುಂದುವರೆಸಲಿ ಎಂದು ಆಶಿಸಿದರು. ತನ್ನ ದಿವಂಗತ ಮಗಳಾದ ಸುಜನ್ಯಳ ಸ್ಮರಣಾರ್ಥ ಅವರ ತಾಯಿ ರೂಪಾಯಿ 10,000 ವನ್ನು ಕನ್ನಡ ಮಾಧ್ಯಮದ 621 ಅಂಕ ಪಡೆದ ವಿದ್ಯಾರ್ಥಿನಿಗೆ ವಿತರಿಸಿದರು.





ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ SSLC ನೋಡಲ್ ಲಕ್ಷ್ಮೀನಾರಾಯಣ, ದಕ್ಷಿಣ ಕನ್ನಡ ಜಿಲ್ಲೆಯ ಉಪಯೋಗ ಸಮನ್ವಯಾಧಿಕಾರಿ ಸುಮಂಗಳ ನಾಯಕ್, ಬೆಳ್ತಂಗಡಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ, ಸಂಘದ ಜಿಲ್ಲಾಧ್ಯಕ್ಷ ಜಯಶ್ರೀ, ಗೌರವಾಧ್ಯಕ್ಷ ಅಲೋಶಿಯಸ್ ಡಿಸೋಜ ಹಾಜರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಅಧ್ಯಕ್ಷೆ ಜಯವಂತಿ ಸೋನ್ಸ್ ಸ್ವಾಗತಿಸಿದರು. ಕಾರ್ಯದರ್ಶಿ ಮೆಟಿಲ್ಡ ಡಿಕೋಸ್ತಾ ವಂದಿಸಿದರು. ಕಾರ್ಯಕ್ರಮದ ತರುವಾಯ ವಾರ್ಷಿಕ ಮಹಾಸಭೆ ನಡೆಯಿತು.




