ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಜನಸಾಮಾನ್ಯರ ದಿನಾಚರಣೆ
ಪರೋಪಕಾರಿ ಯಶಸ್ವೀ ಜೀವನ ನಡೆಸಲು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಕರೆ

ಖ್ಯಾತ ಹಿರಿಯ ವಕೀಲ ಎಂ.ಪಿ. ನೊರೊನ್ಹಾರವರಿಗೆ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಜನ ಸಾಮಾನ್ಯರ ದಿನಾಚರಣೆ ಕಾರ್ಯಕ್ರಮವು ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರ ಅಧ್ಯಕ್ಞತೆಯಲ್ಲಿ ಇಂದು ಜೂನ್ 29ರಂದು ಆದಿತ್ಯವಾರ ಜೆಪ್ಪುವಿನಲ್ಲಿರುವ ಸೈಂಟ್ ಆ್ಯಂಟನಿ ಆಶ್ರಮದಲ್ಲಿರುವ ಸಂಭ್ರಮ ಸಭಾಂಗಣದಲ್ಲಿ ಜರಗಿತು. ಮಂಗಳೂರು ಧರ್ಮಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ಚರ್ಚ್‌ಗಳ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಪ್ರಸ್ತುತ ಹಾಗೂ ಮಾಜಿ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಹಾಲಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರು, ಸಹಕಾರಿ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಜನ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



ಕರ್ನಾಟಕ ಸರಕಾರವು ಖ್ಯಾತ ಹಿರಿಯ ವಕೀಲ ಎಂ.ಪಿ. ನೊರೊನ್ಹಾರವರನ್ನು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸರಕಾರಿ ವಕೀಲರನ್ನಾಗಿ ನೇಮಿಸಿರುವ ಬಗ್ಗೆ ಬಿಷಪ್ ಅವರು ಸಂತಸ ವ್ಯಕ್ತಪಡಿಸಿ ಅವರನ್ನು ಫಲ-ಪುಷ್ಪ ನೀಡಿ ಶಾಲು ಹೊದಿಸಿ ಅಭಿನಂದಿಸಿದರು. ಕಾನೂನು ವ್ಯಾಸಂಗ ಮಾಡಿದ ಓರ್ವ ವ್ಯಕ್ತಿ ಜಾಣ್ಮೆ, ಛಲ, ಶ್ರದ್ಧೆ ಮತ್ತು ಶ್ರಮದಿಂದ ಕ್ಲಿಷ್ಟಕರ ಕಾನೂನು ಪ್ರಕರಣಗಳನ್ನು ಹೇಗೆ ನಿಭಾಯಿಸಿ ಜಯಿಸ ಬಹುದು ಎಂಬುದಕ್ಕೆ ಎಂ.ಪಿ. ನೊರೊನ್ಹಾರವರು ಎಲ್ಲರಿಗೂ ಮಾದರಿ ಎಂದರು. ಮಂಗಳೂರಿನ ಹೋಟೆಲ್ ಮೋತಿ ಮಹಲ್ ಸಹಿತ ವಿವಿಧ ಪ್ರಕರಣಗಳಲ್ಲಿ ಗೆಲುವು ಸಾಧಿಸಿ ಕೊಟ್ಟಿರುವುದೇ ನಿದರ್ಶನ. ಧರ್ಮಕ್ಷೇತ್ರಕ್ಕೆ, ಸಂಸ್ಥೆಗಳಿಗೆ ಮತ್ತು ಜನ ಸಾಮಾನ್ಯರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿಕೊಡುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.







ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ತಾಲೂಕಿನಲ್ಲಿರುವ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ವಿವಿಧ ಸಹಕಾರಿ ಬ್ಯಾಂಕುಗಳ ಹಾಗೂ ಸಹಕಾರಿ ಸಂಘಗಳ ಅಧ್ಯಕ್ಷರನ್ನು ಸನ್ಮಾನಿಸಿದ ಬಿಷಪ್ ರವರು, ಪ್ರತಿಯೊಬ್ಬ ಮನುಷ್ಯ ಪರೋಪಕಾರಿಯಾಗಿ ಯಶಸ್ವೀ ಜೀವನ ನಡೆಸಿದಲ್ಲಿ ಸಮಾಜಕ್ಕೆ ಫಲಪ್ರದವಾಗುತ್ತದೆ. ಆದ್ದರಿಂದ ಜನ ಸೇವೆ ಮಾಡುವ ಜನ ಪ್ರತಿನಿಧಿಗಳಾಗಲು ನಿರಂತರ ಶ್ರಮಿಸ ಬೇಕೆಂದು ಕರೆ ನೀಡಿದರು.










ವಿಲ್ಫ್ರೆಡ್ ಡಿಸೋಜ ಅವರು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹೇಗೆ ಸಕ್ರಿಯವಾಗಿ ಭಾಗವಹಿಸ ಬಹುದು ಎಂಬುದನ್ನು ವಿವರಿಸಿ ಪಂಚಾಯತ್ ಸದಸ್ಯರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ತೆಲಿನೊರವರು ಸಂಯೋಜಕರಾಗಿ ಸಂವಾದ ನಡೆಸಿ ಕೊಟ್ಟರು.

ಜನ ಸಾಮಾನ್ಯರ ಆಯೋಗದ ಪ್ರಧಾನ ಕಾರ್ಯದರ್ಶಿ ಹಾಗೂ ಸೈಂಟ್ ಆ್ಯಂಟನಿ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ಅತೀ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ ಸ್ವಾಗತಿಸಿದರು. ಐಡಾರವರು ವಂದಿಸಿದರು. ಪ್ರಮಿಳಾ ಪೆರಿಸ್ ಕಾರ್ಯಕ್ರಮ ನಿರ್ವಹಿಸಿದರು. ಸೈಂಟ್ ಆ್ಯಂಟನಿ ಚಾರಿಟೆಬಲ್ ಸಂಸ್ಥೆಗಳ ಆಡಳಿತಾಧಿಕಾರಿ ವಂದನೀಯ ಫಾದರ್ ಪ್ರವೀಣ್ ಅಮೃತ್ ಮಾರ್ಟಿಸ್, ಧರ್ಮಕ್ಷೇತ್ರದ ಪಾಲನಾ ಪರಿಷದ್ ಕಾರ್ಯದರ್ಶಿ ಜೋನ್ ಡಿಸಿಲ್ವ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್, ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಕಥೊಲಿಕ್ ಸಭಾ ಮಾಜಿ ಅಧ್ಯಕ್ಷರಾದ ಪಾವ್ಲ್ ರೋಲ್ಫಿ ಡಿಕೋಸ್ತ ಹಾಗೂ ಸ್ಟ್ಯಾನಿ ಲೋಬೊ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.




