ಮದುವೆಯಾಗಲು ನಿರಾಕರಿಸಿ ವಂಚನೆ – ಆರೋಪಿ ಕೃಷ್ಣ ಜೆ. ರಾವ್ ಬಂಧನ
ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತದ ದೈಹಿಕ ಸಂಪರ್ಕ ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿ 21 ವರ್ಷ ಪ್ರಾಯದ ಕೃಷ್ಣ ಜೆ. ರಾವ್ ಇವನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ದ ಪ್ರಕರಣ ದಾಖಲಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ.

ಈ ಬಗ್ಗೆ ಜೂನ್ 24ರಂದು ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ:49/2025, ಕಲಂ:64(1), 69 ಬಿ.ಎನ್.ಎಸ್. 2023 ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣಾ ಪೊಲೀಸರು ಜುಲಾಯಿ 04ರಂದು ಶುಕ್ರವಾರ ರಾತ್ರಿ ಮೈಸೂರಿನ ಟಿ. ನರಸಿಪುರ ಎಂಬಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿರುತ್ತಾರೆ.

ಹೈಸ್ಕೂಲ್ ಓದುವ ಸಂದರ್ಭ ಸಹಪಾಠಿಯಾಗಿದ್ದು ಪ್ರಸ್ತುತ ಪದವಿ ವಿದ್ಯಾರ್ಥಿನಿಯಾಗಿರುವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ ಆಕೆಯನ್ನು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕರೆಸಿ ಬಲವಂತದ ದೈಹಿಕ ಸಂಪರ್ಕ ಬೆಳೆಸಿದ್ದ. ಯುವತಿ ಗರ್ಭವತಿಯಾಗಿದ್ದು ಇತ್ತೀಚೆಗಷ್ಟೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆರೋಪಿತನ ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.




