ಕಾನೂನು ಬದ್ಧವಾಗಿ ಮಾಡಬೇಕಾದ ಕೆಲಸಕ್ಕೆ ಲಂಚದ ಬೇಡಿಕೆ – ರೆಡ್ ಹ್ಯಾಂಡ್ ಆಗಿ ಹಿಡಿದ ಲೋಕಾಯುಕ್ತ ಪೊಲೀಸರು
ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ – ಪ್ರಕರಣ ದಾಖಲು

ಕಾನೂನು ಬದ್ಧವಾಗಿ ಮಾಡಬೇಕಾದ ಸರಕಾರಿ ಕೆಲಸಕ್ಕೆ ರೂಪಾಯಿ 50,000 ಲಂಚದ ಬೇಡಿಕೆ ಇಟ್ಟ ಕದ್ರಿ ಪೊಲೀಸ್ ಠಾಣೆಯ ತಸ್ಲೀಂ {ಸಿ.ಎಚ್.ಸಿ. – 322} ಅವರನ್ನು ರೂಪಾಯಿ 5,000 ಲಂಚ ಪಡೆದುಕೊಳ್ಳುವಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿದ್ದಾರೆ. ನಂತೂರು ಬಳಿ ನಡೆದ ಕಾರು ಹಾಗೂ ಸ್ಕೂಟರ್ ಅಪಘಾತಕ್ಕೆ ಸಂಬಂಧಿಸಿ, ಕದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲೀಂ ಕಾರಿನ ದಾಖಲಾತಿಗಳನ್ನು ತೆಗೆದುಕೊಂಡು, ಕಾರನ್ನು ವಾಪಸ್ಸು ಕೊಡಲು ರೂಪಾಯಿ 50,000 ಲಂಚವನ್ನು ಕೇಳಿದ್ದು, ಕಾರು ಮಾಲಕರು ತನ್ನ ವಕೀಲರ ಮೂಲಕ ಠಾಣೆಗೆ ಭೇಟಿ ನೀಡಿ ಕಾರನ್ನು ಬಿಟ್ಟುಕೊಡಲು ಕೇಳಿಕೊಂಡಾಗ ಪಿರ್ಯಾದಿದಾರರು ಕಾರನ್ನು ಸ್ವೀಕರಿಸಿರುತ್ತಾರೆ ಎಂದು ಸಹಿ ಪಡೆದುಕೊಂಡು ಕಾರನ್ನು ಪೊಲೀಸ್ ಠಾಣೆಯಿಂದ ಬಿಟ್ಟುಕೊಟ್ಟಿರುವುದಿಲ್ಲ. ಆನಂತರ ದೂರುದಾರರ ಮೊಬೈಲ್ ಅನ್ನು ಬಲವಂತದಿಂದ ಪಡೆದು ಕಾರನ್ನು ನೀಡಿದ್ದಾರೆ.

ಮೊಬೈಲನ್ನು ವಾಪಸ್ಸು ನೀಡಲು ರೂಪಾಯಿ 50,000 ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಆನಂತರ ಒರಿಜಿನಲ್ ಚಾಲನಾ ಪರವಾನಗಿ ಪತ್ರವನ್ನು ತೆಗೆದುಕೊಂಡು ಮೊಬೈಲನ್ನು ವಾಪಸು ನೀಡಿದ್ದಾರೆ. ತಸ್ಲಿಂರವರು ಠಾಣೆಯ ಮತ್ತೋರ್ವ ಸಿಬ್ಬಂದಿ ವಿನೋದ್ ಸಿಹೆಚ್‌ಸಿ 451 ರವರ ಮುಖಾಂತರ ರೂಪಾಯಿ 30,000/- ಲಂಚದ ಹಣ ಕೊಟ್ಟು ಒರಿಜಿನಲ್ ಲೈಸನ್ಸ್ ಪಡೆದುಕೊಂಡು ಹೋಗಲು ತಿಳಿಸಿದ್ದು, ಪಿರ್ಯಾದಿದಾರರು ಜುಲೈ 9ರಂದು ಬುಧವಾರ ಕದ್ರಿ ಸಂಚಾರಿ ಪೊಲೀಸ್ ಠಾಣೆಗೆ ಹೋಗಿ ತಸ್ಲಿಂರವರನ್ನು ಭೇಟಿ ಮಾಡಿ ಮಾತನಾಡಿದಾಗ ಒರಿಜಿನಲ್ ಲೈಸನ್ಸ್ ನೀಡಲು ತಸ್ಲಿಂರವರು ರೂಪಾಯಿ 10,000/- ಹಣವನ್ನು ನೀಡುವಂತೆ ತಿಳಿಸಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು ತನ್ನಲ್ಲಿ ರೂಪಾಯಿ 500 ಮಾತ್ರ ಇದೆ ಎಂದು ಹೇಳಿದಾಗ ರೂಪಾಯಿ 5000 ಇಲ್ಲದೇ ಠಾಣೆ ಕಡೆಗೆ ಬರಬೇಡ ಎಂದು ಬೈದು ಕಳುಹಿಸಿರುತ್ತಾರೆ.

ಪಿರ್ಯಾದಿದಾರರು ನೀಡಿದ ದೂರಿನಂತೆ ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕದ್ರಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ತಸ್ಲಿಂ ಮತ್ತು ವಿನೋದ್ ರವರ ವಿರುದ್ಧ ಪ್ರಕರಣ ದಾಖಲಿಸಿ, ಇಂದು ಜುಲಾಯ್ 10ರಂದು ಗುರುವಾರ ಕದ್ರಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂರವರು ಪಿರ‍್ಯಾದುದಾರರಿಂದ ರೂಪಾಯಿ 5000/- ಲಂಚದ ಹಣವನ್ನು ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸದರಿ ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಇಂದಿನ ಲೋಕಾಯುಕ್ತ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ ಇವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್.ರವರು ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.




