ಸ್ಥಿರಾಸ್ತಿ ಅಕ್ರಮ ವರ್ಗಾವಣೆ ವಂಚನೆ ಬಯಲು – ಬದುಕಿದ್ದ ಮಹಿಳೆಯನ್ನೇ ಸಾಯಿಸಿದ ನಕಲಿ ದಾಖಲೆ
ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ ಘಟನೆ

ಸ್ಥಿರಾಸ್ತಿಯ ಮಾಲೀಕರು ಮೃತಪಟ್ಟಿದ್ದಾರೆ ಎಂದು ಹಲವು ದಾಖಲೆಗಳಲ್ಲಿ ಬಿಂಬಿಸಿ ಸುರತ್ಕಲ್ ಹೋಬಳಿ ಕಾಟಿಪಳ್ಳ ಗ್ರಾಮದಲ್ಲಿದ್ದ ಸ್ಥಿರಾಸ್ತಿಯನ್ನು ಅಕ್ರಮವಾಗಿ ವರ್ಗಾಯಿಸಿದ ನಕಲಿ ವಂಚನಾ ಜಾಲವನ್ನು ಪೊಲೀಸರು ಭೇದಿಸಿದ್ದು, ಮಂಗಳೂರು ನ್ಯಾಯಾಲಯ ಕೂಡ ಸ್ಥಿರಾಸ್ತಿ ಮಾಲೀಕರಿಗೆ ಪರಿಹಾರ ಒದಗಿಸಿದೆ. ಈ ಬಗ್ಗೆ ದಾಖಲಾದ ದೂರಿನ ಆಧಾರದಲ್ಲಿ ಸುರತ್ಕಲ್ ಪೊಲೀಸರು ತನಿಖೆ ನಡೆಸಿದ್ದು, ಈ ತನಿಖೆಯಲ್ಲಿ ಆಸ್ತಿ ವರ್ಗಾವಣೆಗೆ ಸಂಬಂಧಿಸಿದಂತೆ ಹಲವು ಕಚೇರಿಗಳ ನಕಲಿ ಸೀಲ್‌ಗಳ ಸೃಷ್ಟಿಸಿ ಇರುವುದು ಬಯಲಾಗಿದೆ. ಈ ತನಿಖೆಯ ಆಧಾರದಲ್ಲಿ ಸ್ಥಿರಾಸ್ತಿ ವರ್ಗಾವಣೆಗೆ ಬಳಸಲಾದ ದಾಖಲೆಗಳು, ಅಧಿಕಾರಿಗಳ ಸಹಿ ಮತ್ತು ಹಲವು ಸರ್ಕಾರಿ ಕಚೇರಿಗಳ ಮೊಹರುಗಳು (ಸೀಲ್) ನಕಲಿ ಎಂದು ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದು, ವಿಚಾರಣೆ ಬಳಿಕ ಸ್ಥಿರಾಸ್ತಿಯನ್ನು ನೈಜ ಮಾಲೀಕರಿಗೆ ಹಿಂತಿರುಗಿಸಿ ಆದೇಶ ಹೊರಡಿಸಿದೆ.

ಮಂಗಳೂರು ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ರಾಮಲಿಂಗಪ್ಪರವರು ಈ ತೀರ್ಪು ಹೊರಡಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಉಪ ನೋಂದಾಣಧಿಕಾರಿಯವರ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟ “ಸ್ಥಿರಾಸ್ತಿಯ ಖಂಡಿತ ಕ್ರಯಪತ್ರ”ವನ್ನು ಅಸಿಂಧು ಎಂದು ಘೋಷಿಸಲಾಗಿದೆ.
ಮರಣ ಪ್ರಮಾಣ ಪತ್ರ ಮತ್ತು ಸ್ಥಿರಾಸ್ತಿ ವರ್ಗಾವಣೆಗೆ ಸೃಷ್ಟಿಸಲಾದ ದಾಖಲೆಗಳಿಗೆ ಯಾವೆಲ್ಲ ಅಧಿಕಾರಿಗಳ ನಕಲಿ ಸಹಿ-ಮೊಹರು ಬಳಕೆಯಾಗಿದೆ?
ಶಿವಮೊಗ್ಗದ ನೋಟರಿ ವಕೀಲರ ಮೊಹರು ಸಹಿತ ಸಹಿ
ಶಿವಮೊಗ್ಗ ಉಪಖಜಾನೆ ಅಧಿಕಾರಿಯ ಮೊಹರು ಸಹಿತ ಸಹಿ
ಮಂಗಳೂರು ಮಹಾನಗರ ಪಾಲಿಕೆಯ ಮೊಹರು ಸಹಿತ ಸಹಿ
ಸುರತ್ಕಲ್ ವಲಯ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಮಂಜೂರು ಮಾಡುವ ಅಧಿಕಾರಿಯ ಮೊಹರು ಸಹಿತ ಸಹಿ
ಮಂಗಳೂರಿನ ಇಬ್ಬರು ತಹಶೀಲ್ದಾರರ ಮೊಹರು ಸಹಿತ ಸಹಿ
ಮಂಗಳೂರಿನ ‘ಪದವು’ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯ ಮೊಹರು ಸಹಿತ ಸಹಿ

ಪ್ರಕರಣದ ವಿವರ
1984ರ ಫೆಬ್ರವರಿ 27ರಂದು ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದಲ್ಲಿ 12:30 ಸೆಂಟ್ಸ್ ಜಾಗವನ್ನು ಸರೋಜಿನಿ ಆರ್. ಅಂಚನ್ ರವರ ಪತಿ ರಾಘವೇಂದ್ರ ಅಂಚನ್ ಮಂಗಳೂರು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕ್ರಯ ಪತ್ರ ನೋಂದಣಿ ಮೂಲಕ ಲಕ್ಷ್ಮೀಬಾಯಿ ಮತ್ತು ಇತರರಿಂದ ಖರೀದಿಸಿದ್ದರು. 1992ರಲ್ಲಿ ಪತಿ ರಾಘವೇಂದ್ರ ಅಂಚನ್ ನಿಧನರಾಗಿದ್ದರು. ಆ ಬಳಿಕ, ಸ್ಥಿರಾಸ್ತಿಗೆ ಪತ್ನಿ ಸರೋಜಿನಿ ಆರ್. ಅಂಚನ್ ಮಕ್ಕಳಾದ ನವೀನ್ ಚಂದ್ರ, ವಾಣಿ ಪುರುಷೋತ್ತಮ್ ವಾರಿಸುದಾರರು ಸರೋಜಿನಿ ಆರ್. ಅಂಚನ್ ಹೆಸರಿಗೆ ಆಸ್ತಿ ಖಾತೆ ವರ್ಗಾಯಿಸಿದ್ದು, ಸರೋಜಿನಿ ಅವರು ತಮ್ಮ ಹೆಸರಿನಲ್ಲಿ ತೆರಿಗೆ ಪಾವತಿಸುತ್ತಿದ್ದರು. ವಯಸ್ಸಿನ ಕಾರಣಕ್ಕೆ ಸರೋಜಿನಿ ಅವರು ತಮ್ಮ ನಿವೇಶನಕ್ಕೆ ಭೇಟಿ ನೀಡುತ್ತಿರಲಿಲ್ಲ. ಸರೋಜಿನಿ ಅವರ ಮಗಳು ಮತ್ತು ಅಳಿಯ ವರ್ಷಕ್ಕೆ ಎರಡು ಬಾರಿ ಜಮೀನಿನಲ್ಲಿದ್ದ ತೆಂಗಿನ ಮರಗಳಿಂದ ಕಾಯಿ ಕೀಳಿಸುತ್ತಿದ್ದರು. ಈ ವಿಷಯ ಮಂಗಳೂರಿನ ಬೊಂದೆಲ್ ನಿವಾಸಿ ಸುನಿಲ್ ಜೋಸೆಫ್ ಡಿಸೋಜ ಎಂಬವರ ಗಮನಕ್ಕೆ ಬಂದಿದ್ದು, ಅವರು ಸ್ಥಿರಾಸ್ತಿಯನ್ನು ವಂಚನೆಯಿಂದ ಕಬಳಿಸಲು ಸಂಚು ಹೂಡಿದ್ದರು.
2005ರ ಅಕ್ಟೋಬರ್ 19ರಂದು ಸರೋಜಿನಿ ಆರ್. ಅಂಚನ್ ನಿಧನರಾಗಿದ್ದಾರೆ ಎಂದು ಕಂದಾಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದರು. ಮೃತ ಪ್ರಮಾಣ ಸಹಿತ ಅದಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿದರು. ಸರೋಜಿನಿ ಆರ್. ಅಂಚನ್ ಮತ್ತು ಅವರ ಪತಿ ಕೆ. ರಾಘವೇಂದ್ರ ಅಂಚನ್ ರವರ ಏಕೈಕ ವಾರಿಸುದಾರ ತಾನು ಎಂದು ನಂಬಿಸಿ ಸುನಿಲ್ ಆರ್. ಅಂಚನ್ ಹೆಸರಲ್ಲಿದ್ದ ಸ್ಥಿರಾಸ್ತಿಯನ್ನು ತನ್ನ ಹೆಸರಿಗೆ ಬದಲಾಯಿಸಿಕೊಂಡಿದ್ದಾರೆ.
2015ರ ಡಿಸೆಂಬರ್ 22ರಂದು ಸುನಿಲ್ ಆರ್. ಅಂಚನ್ ಹೆಸರಿನಲ್ಲಿದ್ದ ಸ್ಥಿರಾಸ್ತಿಯನ್ನು ಮಂಗಳೂರು ಕುತ್ತಾರುಪದವು ನಿವಾಸಿ ನಿತಿನ್ ಕೊಟ್ಟಾರಿ ಎಂಬವರಿಗೆ ಮಂಗಳೂರು ನೋಂದಣಾಧಿಕಾರಿ ಕಚೇರಿಯಲ್ಲಿ 12.40 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿ ಕ್ರಯಪತ್ರವನ್ನು ನೋಂದಣಿ ಮಾಡಿಸಲಾಯಿತು.

2016 ರಂದು ನಿತಿನ್ ಕೊಟ್ಟಾರಿ ಮಂಗಳೂರಿನ ಶಿವನಗರದ ನಿವಾಸಿ ಸುಜಾತಾ ಚಂದ್ರಕಾಂತ ಪಾಟೀಲ್ ಅವರಿಗೆ 16. 18 ಲಕ್ಷ ರೂಪಾಯಿಗಳಿಗೆ ಈ ಆಸ್ತಿಯನ್ನು ಕ್ರಯ ಪತ್ರದ ಮೂಲಕ ಮಾರಾಟ ಮಾಡಿದರು. 2017ರಲ್ಲಿ ಸುಜಾತ ಚಂದ್ರಕಾಂತ್ ಪಾಟೀಲ್ ಅವರು ಮಂಗಳೂರಿನ ಕೊಡಿಯಾಲ್ ಬೈಲ್ ನಿವಾಸಿ ಮರಿಯಾ ರೆಬೆಲ್ಲೊ ಅವರಿಗೆ 18 ಲಕ್ಷ ರೂಪಾಯಿಗಳಿಗೆ ನೋಂದಾಯಿತ ಕ್ರಯ ಪತ್ರದ ಮೂಲಕ ಆಸ್ತಿ ಮಾರಾಟ ಮಾಡಿದರು.
2018ರಲ್ಲಿ ತನ್ನ ಸ್ಥಿರಾಸ್ತಿಯಲ್ಲಿ ಇರುವ ಮರಗಳನ್ನು ಕಡಿಯುತ್ತಿದ್ದಾರೆ ಎನ್ನುವ ಸುದ್ದಿ ತಿಳಿದ ಸರೋಜಿನಿ ಆರ್. ಅಂಚನ್ ಸ್ಥಳಕ್ಕೆ ಬಂದು ವಿಚಾರಿಸಿದಾಗ ಸವಿತಾ ಮರಿಯಾ ರೆಬೆಲ್ಲೊ ಸ್ಥಿರಾಸ್ತಿಯನ್ನು ನೋಂದಾಯಿತ ಕ್ರಯ ಪತ್ರದ ಮೂಲಕ ಖರೀದಿ ಮಾಡಿರುವ ವಿಷಯವನ್ನು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಸರೋಜಿನಿ ಸುರತ್ಕಲ್ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆದು ಪ್ರಕರಣ ಬಯಲಿಗೆ ಬಂತು ತನಿಖೆಯಲ್ಲಿ ಆಸ್ತಿಯನ್ನು ವರ್ಗಾವಣೆ ಮಾಡಲು ಶಿವಮೊಗ್ಗದ ನೋಟರಿ ವಕೀಲರ ಸೀಲು ಮತ್ತು ಸಹಿ ಶಿವಮೊಗ್ಗ ಉಪ ಖಜಾನೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ನಕಲಿ ಸೀಲ್ ಬಳಕೆ, ಸುರತ್ಕಲ್ ವಲಯ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಮಂಜೂರು ಮಾಡುವ ಅಧಿಕಾರಿಯ ನಕಲಿ ಸೀಲು, ಮಂಗಳೂರಿನ ಇಬ್ಬರು ತಹಶೀಲ್ದಾರರ ನಕಲಿ ಸೀಲು, ಪದವು ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯ ನಕಲಿ ಸೀಲು ತಯಾರಿಸಿ ಈ ಸ್ಥಿರಾಸ್ತಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು ಎಂಬ ಮಾಹಿತಿ ಬಯಲಾಯಿತು.

ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿಗಳ ನ್ಯಾಯಾಲಯ 2018ರಲ್ಲಿ ಸ್ಥಿರಾಸ್ತಿವಾರಿ ಸುಧಾರಣೆ ಎಂದು ಹೇಳಿಕೊಂಡ ಸುನಿಲ್ ಜೋಸೆಫ್ ಡಿಸೋಜ ಹಾಗೂ ತದ ನಂತರ ಆಸ್ತಿ ಖರೀದಿ ಮಾಡಿದ ಮೂವರ ವಿರುದ್ಧ ದಾವೆ ದಾಖಲಿಸಿಕೊಂಡಿದ್ದರು.
ಪೊಲೀಸ್ ತನಿಖಾ ವರದಿಯ ಆಧಾರದಲ್ಲಿ ನ್ಯಾಯಾಲಯವು, “ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದರ ಆಧಾರದಲ್ಲಿ ಮೂಲಕ ನೋಂದಾಯಿಸಲಾದ ಕ್ರಯ ಪತ್ರಗಳನ್ನು ಅಮಾನ್ಯ” ಎಂದು ಘೋಷಣೆ ಮಾಡಿತು. ಸ್ಥಿರಾಸ್ತಿ ಹಕ್ಕನ್ನು ಮರಳಿ ಸರೋಜಿನಿ ಆರ್. ಅಂಚನ್ ಅವರಿಗೆ ನೀಡಿತು. ಅಲ್ಲದೆ, ಸ್ವಾಧೀನ-ಅನುಭವದಲ್ಲಿ ಯಾರೂ ಹಸ್ತಕ್ಷೇಪ ಮಾಡದಂತೆ ಶಾಶ್ವತ ಪ್ರತಿಬಂಧಕಾಜ್ಞೆಯನ್ನು ಹೊರಡಿಸಿದೆ.




