ಜೋಕಾಲಿ ಆಟವಾಡುತ್ತಿದ್ದಾಗ ಉಸಿರುಗಟ್ಟಿ 13 ವರ್ಷದ ಬಾಲಕಿಯ ದಾರುಣ ಅಂತ್ಯ
ಭಟ್ಕಳ ತಾಲೂಕಿನ ತೆರ್ನಮಕ್ಕಿ ಸಭಾತಿ ಗ್ರಾಮದಲ್ಲಿ ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು 13 ವರ್ಷದ ಬಾಲಕಿ ದಾರುಣವಾಗಿ ಉಸಿರುಗಟ್ಟಿ ಸಾವನ್ನಪ್ಪಿದ ದುರ್ಘಟನೆ ಜುಲಾಯ್ 17ರಂದು ಗುರುವಾರ ನಡೆದಿದೆ. ಮೃತ ಬಾಲಕಿ ಪ್ರಣೀತ ಜಗನ್ನಾಥ ನಾಯ್ಕ ಎಂದು ಗುರುತಿಸಲಾಗಿದ್ದು ಈಕೆ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಘಟನೆಯ ದಿನ ಶಾಲೆಗೆ ಮಳೆಯ ಕಾರಣದಿಂದ ರಜೆ ಇದ್ದ ಕಾರಣ, ಪ್ರಣೀತ ತನ್ನ ಸಹೋದರಿಯೊಂದಿಗೆ ಮನೆಯ ಬಳಿ ಜೋಕಾಲಿಯಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಜೋಕಾಲಿಯ ಹಗ್ಗ ತಲೆ ಮತ್ತು ಕುತ್ತಿಗೆಗೆ ಸುತ್ತಿಕೊಂಡು ತೀವ್ರ ಗಂಭೀರ ಪರಿಸ್ಥಿತಿ ಉಂಟಾಗಿದೆ. ಸಹಾಯಕ್ಕಾಗಿ ಕೂಗುವಷ್ಟರಲ್ಲಿ ಉಸಿರುಗಟ್ಟಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆಯ ಸಮಯದಲ್ಲಿ ತಾಯಿ ಕೆಲಸಕ್ಕೆ ಹೋಗಿದ್ದ ಕಾರಣ ತಕ್ಷಣ ಯಾವುದೇ ಸಹಾಯ ಲಭ್ಯವಾಗಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ. ಘಟನೆಯ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗ್ರಾಮದ ಜನರಲ್ಲಿ ಈ ದುರ್ಘಟನೆ ಆಘಾತ ಮೂಡಿಸಿದ್ದು, ಎಲ್ಲಾ ಕಡೆ ದುಃಖದ ವಾತಾವರಣ ನಿರ್ಮಾಣವಾಗಿದೆ.




