ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಇದರ ಸುವರ್ಣ ಸಂಭ್ರಮ
ವಾಸ್ತವಾಂಶಕ್ಕೆ ಮಾತ್ರ ಮಾಧ್ಯಮ ಆದ್ಯತೆ ನೀಡಲಿ – ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಆಶಯ

ಡಾ.ಎಂ. ಮೋಹನ ಆಳ್ವರಿಗೆ ಸುವರ್ಣ ಸಂಭ್ರಮ ಗೌರವ ಪ್ರಶಸ್ತಿ

ತಂತ್ರಜ್ಞಾನ ಬೆಳೆದ ಬಳಿಕ ಮಾಧ್ಯಮ ಕ್ಷೇತ್ರ ವಿಸ್ತಾರವಾಗಿದೆ. ಸಮಾಜದ ವಾಸ್ತವದ ಸತ್ಯ ಸಂಗತಿಗಳನ್ನು ಜನರ ಮುಂದಿಡುವ ಕೆಲಸ ಆಗಬೇಕು. ಮಾಧ್ಯಮ ಶಕ್ತಿಯ ಸದ್ಭಳಕೆ ಇಂದಿನ ಅಗತ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು. ಅವರು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಗಸ್ಟ್ 6ರಂದು ಬುಧವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳ ಅವ್ಯಾಹತ ಬಳಕೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಮಾಧ್ಯಮಗಳು ವಾದ, ಪ್ರತಿವಾದ, ತೀರ್ಪು ನೀಡದೆ ತೀರ್ಮಾನ ಕೈಗೊಳ್ಳಲು ಓದುಗರ, ವೀಕ್ಷಕರಿಗೆ ಅವಕಾಶ ಕಲ್ಪಿಸಬೇಕು. ವಸ್ತುನಿಷ್ಠ, ನಿಪ್ಷಕ್ಷಪಾತವಾಗಿ ಮಾಧ್ಯಮಗಳು ಕೆಲಸ ಮಾಡಿದಾಗ ಪ್ರಭಾವಶಾಲಿಯಾಗಲು ಸಾಧ್ಯ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರವರಿಗೆ ಸುವರ್ಣ ಸಂಭ್ರಮ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಅವರು, ಪ್ರಜಾಪ್ರಭುತ್ವ ಮತ್ತು ಪತ್ರಿಕೋದ್ಯಮ ಪರಸ್ಪರ ಸಂಬಂಧ ಹೊಂದಿದ್ದು, ಸಾರ್ವಜನಿಕರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು. ಪ್ರತಿಯೊಂದು ವರದಿ ನಂಬಿಕೆ, ಬದ್ಧತೆಯಿಂದ ಕೂಡಿರಬೇಕು. ನೈತಿಕ ಮೌಲ್ಯಗಳ ಪ್ರತಿಪಾದನೆಯಾಗಬೇಕು ಎಂದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರು ಸುವರ್ಣ ಸಂಭ್ರಮ ಸಾಕ್ಷ್ಯಾ ಚಿತ್ರ ಬಿಡುಗಡೆಗೊಳಿಸಿದರು. ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಹಿರಿಯ ಪತ್ರಕರ್ತ ರವಿ ಹೆಗಡೆ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ, ಮಂಗಳೂರು ಮಹಾ ನಗರ ಪಾಲಿಕೆ ಇದರ ಮಾಜಿ ಸದಸ್ಯ ನವೀನ್ ಡಿಸೋಜ, ಕಾರ್ಡೋಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಇಂಡಿಯಾದ ಜನರಲ್ ಮ್ಯಾನೇಜರ್ ಕೆ. ದಿವಾಕರ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ಝಕರಿಯಾ ಜೋಕಟ್ಟೆ, ಜಯರಾಮ ರೈ, ಕೆಸಿಸಿಐ ಅಧ್ಯಕ್ಷ ಆನಂದ ಜಿ. ಪೈ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್, ಮಾಧ್ಯಮ ಅಕಾಡೆಮಿಯ ಮಾಜಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ, ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ, ವಾಲ್ಟರ್ ನಂದಳಿಕೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಮಂಗಳೂರು ಪ್ರೆಸ್‌ಕ್ಲಬ್ ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು, ಅನೇಕ ಪತ್ರಕರ್ತರು, ವಿದ್ಯಾರ್ಥಿಗಳು ಹಾಗೂ ಹಿತೈಶಿಗಳು ಉಪಸ್ಥಿತರಿದ್ದರು.

ಸುವರ್ಣ ಸಂಭ್ರಮದ ಪ್ರದಾನ ಸಂಚಾಲಕ ಪಿ.ಬಿ. ಹರೀಶ್ ರೈ ಸ್ವಾಗತಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಆಶಯ ಭಾಷಣ ಮಾಡಿದರು. ಮಂಗಳೂರು ಪ್ರೆಸ್‌ಕ್ಲಬ್ ಸ್ಥಾಪಕ ಅಧ್ಯಕ್ಷ ಆನಂದ ಶೆಟ್ಟಿಯವರು ಪ್ರಸ್ತಾವನೆಗೈದರು. ಪ್ರದಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಪತ್ರಕರ್ತ ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.


ಈ ಸಂದರ್ಭದಲ್ಲಿ ಸುವರ್ಣ ಸಂಭ್ರಮದ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಹುಬ್ಬಳ್ಳಿಯ ಕನ್ನಡ ಪ್ರಭ ಪತ್ರಿಕೆಯ ಛಾಯಾಗ್ರಾಹಕ ಈರಪ್ಪ ನಾಯ್ಕರ್ ಪ್ರಥಮ, ಮೈಸೂರಿನ ಕನ್ನಡಪ್ರಭ ಪತ್ರಿಕೆಯ ಛಾಯಾಗ್ರಾಹಕ ಎಂ.ಎಸ್. ಬಸವಣ್ಣ ದ್ವಿತೀಯ ಹಾಗೂ ಮೈಸೂರಿನ ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರಿನ್ಸಿಪಾಲ್ ಫೋಟೋಗ್ರಾಪರ್ ಉದಯಶಂಕರ್ ರವರಿಗೆ ತೃತೀಯ ಬಹುಮಾನವನ್ನು ವಿತರಿಸಲಾಯಿತು.





