ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯ – ಸಾರ್ವಜನಿಕರ ಹಕ್ಕು – ಮಾಹಿತಿ ಆಯೋಗದ ಸ್ಪಷ್ಟ ನಿರ್ದೇಶನ
ಮಾಹಿತಿ ನೀಡಲು ಅಧಿಕಾರಿಗಳು ವಿಳಂಬ ಮಾಡಿದರೆ ದಂಡಾತ್ಮಕ ಕ್ರಮ

ಸಿಸಿಟಿವಿ ಕ್ಯಾಮರಾ ದೃಶ್ಯ ಮತ್ತು ಆಡಿಯೋ ಸಾರ್ವಜನಿಕ ದಾಖಲೆ
ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ದೃಶ್ಯ ಮತ್ತು ಆಡಿಯೋ ಸಾರ್ವಜನಿಕ ದಾಖಲೆ ಆಗಿದ್ದು, ನಾಗರಿಕರು ಮಾಹಿತಿ ಹಕ್ಕು ಕಾಯ್ದೆಯಡಿ (RTI Act 2005) ಅವುಗಳನ್ನು ಪಡೆಯಲು ಹಕ್ಕುದಾರರು ಎಂದು ಕರ್ನಾಟಕ ಮಾಹಿತಿ ಆಯೋಗವು ಮಹತ್ವದ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ಕೂಡಾ ಇತ್ತೀಚಿನ ತೀರ್ಪಿನಲ್ಲಿ – “ಪೊಲೀಸ್ ಠಾಣೆಯ ಸಿಸಿಟಿವಿ ವಿಡಿಯೋ ಮತ್ತು ಆಡಿಯೋ ಸಾರ್ವಜನಿಕ ದಾಖಲೆ”ಎಂದು ಘೋಷಣೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯವರು ಯಾವುದೇ ಕಾರಣಕ್ಕೂ ಮಾಹಿತಿ ನೀಡುವುದನ್ನು ತಪ್ಪಿಸಲು ಆಗುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನಿವಾಸಿ ಹೆಚ್.ಜಿ. ರಮೇಶ್ ರವರು 2021ರ ಡಿಸೆಂಬರ್ 6ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಕುಣಿಗಲ್ ಪೊಲೀಸ್ ಠಾಣೆಯ 2021ರ ಅಕ್ಟೋಬರ್ 25ರಿಂದ 2021ರ ನವೆಂಬರ್ 15ರವರೆಗೆ ಹಾಗೂ 2021ರ ನವೆಂಬರ್ 1ರಿಂದ ನಂತರದ ಅವಧಿಯ ಸಿಸಿಟಿವಿ ದೃಶ್ಯಗಳನ್ನು ಒದಗಿಸುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿಯನ್ನು ನೀಡದ ಹಿನ್ನೆಲೆ ಅವರು ಪ್ರಥಮ ಮೇಲ್ಮನವಿ ಸಲ್ಲಿಸಿದರೂ ಯಾವುದೇ ಫಲ ದೊರೆಯದೆ, ಅಂತಿಮವಾಗಿ ಮಾಹಿತಿ ಆಯೋಗಕ್ಕೆ ದೂರು ನೀಡಿದರು.
ಆಯೋಗದ ವಿಚಾರಣೆ:
2022ರ ಸೆಪ್ಟೆಂಬರ್ 8ರಂದು ನಡೆದ ವಿಚಾರಣೆಯಲ್ಲಿ ಆಯೋಗವು – 30 ದಿನಗಳೊಳಗಾಗಿ ಉಚಿತವಾಗಿ ದೃಢೀಕರಿಸಿದ ಸಿಸಿಟಿವಿ ದಾಖಲೆಗಳನ್ನು ಅರ್ಜಿದಾರರಿಗೆ ಒದಗಿಸಬೇಕು. ದಾಖಲೆ ನೀಡಿದ ಬಗ್ಗೆ ಅಂಚೆ ಸ್ವೀಕೃತಿಯ ಪ್ರತಿಯನ್ನು ಆಯೋಗಕ್ಕೆ ಸಲ್ಲಿಸಬೇಕು. ಆದೇಶ ಪಾಲಿಸದಿದ್ದಲ್ಲಿ ಮಾಹಿತಿ ಹಕ್ಕು ಕಾಯ್ದೆ ಕಲಂ 20(1) ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತು.
ಕುಣಿಗಲ್ ಪೊಲೀಸ್ ಠಾಣೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ವಿಚಾರಣೆ ವೇಳೆ ಭಾಗವಹಿಸಿ, ಕೆಲ ದಿನಗಳ ಸಿಸಿಟಿವಿ ದೃಶ್ಯಗಳನ್ನು ಹಾರ್ಡ್ ಡಿಸ್ಕ್‌ನಲ್ಲಿ ಒದಗಿಸಿರುವುದಾಗಿ ವರದಿ ಸಲ್ಲಿಸಿದರು. ಆದರೆ ಮೇಲ್ಮನವಿದಾರರು ಸಂಪೂರ್ಣ ಅವಧಿಯ ದೃಶ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಅಂತಿಮ ಆದೇಶ:
ಮಾಹಿತಿ ಆಯುಕ್ತರು 2022ರ ಡಿಸೆಂಬರ್ 1ರಂದು ಅಂತಿಮ ತೀರ್ಪು ನೀಡುತ್ತಾ –ಮೇಲ್ಮನವಿದಾರರು ಕೇಳಿದ ಸಂಪೂರ್ಣ ಅವಧಿಯ ಸಿಸಿಟಿವಿ ದೃಶ್ಯಗಳನ್ನು ಒದಗಿಸಬೇಕು. ದಾಖಲೆ ನೀಡಿದ ನಂತರ ಅದರ ಪ್ರತಿಯನ್ನು ಹಾಗೂ ಸ್ವೀಕೃತಿಯನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ಮತ್ತೊಮ್ಮೆ ಸ್ಪಷ್ಟ ನಿರ್ದೇಶನ ಹೊರಡಿಸಿದರು.
ಮುಖ್ಯ ಅಂಶ:
🔹 ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯವು ಸಾರ್ವಜನಿಕ ದಾಖಲೆ
🔹 ನಾಗರಿಕರು RTI ಕಾಯ್ದೆಯಡಿ ಪಡೆಯಲು ಸಂಪೂರ್ಣ ಹಕ್ಕು ಹೊಂದಿದ್ದಾರೆ
🔹 ಮಾಹಿತಿ ನೀಡಲು ಅಧಿಕಾರಿಗಳು ವಿಳಂಬ ಮಾಡಿದರೆ ದಂಡಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ.




