ವಿಟ್ಲದ ತಾಳಿತ್ತನೂಜಿಯಲ್ಲಿ ಮಹಿಳೆಯ ಮೇಲೆ ಕತ್ತಿಯಿಂದ ದಾಳಿ – ಆರೋಪಿಯ ಬಂಧನ
ಜಾಗಕ್ಕೆ ಸಂಬಂಧಿಸಿದ ಕಲಹವೊಂದು ಭೀಕರ ರೂಪ ಪಡೆದು ಮಹಿಳೆಯೊಬ್ಬರ ಮೇಲೆ ಕತ್ತಿಯಿಂದ ದಾಳಿ ನಡೆಸಿದ ಘಟನೆ ವಿಟ್ಲ ಕೊಲ್ನಾಡು ಗ್ರಾಮದ ತಾಳಿತ್ತನೂಜಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ 32 ವರ್ಷ ಪ್ರಾಯದ ಮಹಮ್ಮದ್ ಅಶ್ರಫ್ ಎಂಬಾತನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಳಿತ್ತನೂಜಿ ನಿವಾಸಿ 23 ವರ್ಷ ಪ್ರಾಯದ ಹಸೀನಾ ಗಂಭೀರ ಗಾಯಗೊಂಡವರು.

ತಾಳಿತ್ತನೂಜಿಯ ಸುಲೈಮಾನ್ ಅವರ ಪತ್ನಿಯ ಪುತ್ರಿಯಾದ ಹಸೀನಾ ಮೇಲೆ, ಸುಲೈಮಾನ್ ರವರ ಎರಡನೇ ಪತ್ನಿಯ ಪುತ್ರ ಮಹಮ್ಮದ್ ಅಶ್ರಫ್ ಕತ್ತಿಯಿಂದ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಕೊಲೆ ಯತ್ನದ ಉದ್ದೇಶದಿಂದ ಹಸೀನಾ ಅವರ ಕುತ್ತಿಗೆಗೆ ಕತ್ತಿ ಬೀಸುವಾಗ, ಅವರು ತಮ್ಮ ಕೈ ಅಡವಿಟ್ಟಿದ್ದಾರೆ. ಇದರಿಂದ ಹಸೀನಾ ಅವರ ಬೆರಳಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

ಮಾಹಿತಿ ಪಡೆದ ತಕ್ಷಣ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಮತ್ತು ಅವರ ತಂಡ ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಈ ಸಂದರ್ಭದಲ್ಲಿ ಆರೋಪಿ ಮಹಮ್ಮದ್ ಅಶ್ರಫ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ಕುರಿತು ಸುಖೋ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಅಗತ್ಯ ತನಿಖೆ ಕೈಗೊಂಡಿದೆ. ಜಾಗದ ತಕರಾರೇ ಈ ದಾಳಿಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.




