ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫಿಸ್ಸಾ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ
ಲೋಕಾಯುಕ್ತ ಪೊಲೀಸರ ಟ್ರ್ಯಾಪ್ ಕಾರ್ಯಾಚರಣೆ ಯಶಸ್ವಿ

ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ದಕ್ಷಿಣ ಕನ್ನಡ ಜಿಲ್ಲೆ ನೀಡಿರುವ ಮಾಹಿತಿಯ ಪ್ರಕಾರ, ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫಿಸ್ಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ವಿರುದ್ಧ ಲಂಚ ಸ್ವೀಕರಿಸಿದ ಪ್ರಕರಣ ದಾಖಲಾಗಿದೆ.

ಪಿರ್ಯಾದಿದಾರರ ಮಾವನವರು 1 ಎಕರೆ ಕೃಷಿ ಜಮೀನಿಗೆ ನೀರಿನ ಸೌಲಭ್ಯಕ್ಕಾಗಿ 2024ರಲ್ಲಿ ಮತ್ತು ನಂತರ 2025ರಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ಬೋರ್‌ವೆಲ್ ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಪಂಚಾಯತ್ ಕಚೇರಿಯಲ್ಲಿ ಸರಿಯಾದ ಪ್ರತಿಕ್ರಿಯೆ ದೊರಕದೆ, ಅಧ್ಯಕ್ಷೆ ನಫಿಸ್ಸಾ 10 ಸಾವಿರ ರೂಪಾಯಿ ಲಂಚ ನೀಡಿದಲ್ಲಿ ಮಾತ್ರ ಬೋರ್‌ವೆಲ್ ಮಂಜೂರು ಮಾಡಿಕೊಡುತ್ತೇನೆ ಎಂದು ಸ್ಪಷ್ಟವಾಗಿ ಬೇಡಿಕೆ ಇಟ್ಟಿದ್ದರು.

ಸೆಪ್ಟೆಂಬರ್ 06ರಂದು ಬಿಲ್ ಕಲೆಕ್ಟರ್ ವಿಲಿಯಂ ಪಿರ್ಯಾದುದಾರರಿಂದ 10 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಬಳಿಕ ಅಧ್ಯಕ್ಷೆ ನಫಿಸ್ಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಇವರೀರ್ವರನ್ನೂ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗುತ್ತಿದೆ. ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್., ರವಿ ಪವಾರ್ ಮತ್ತು ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳು ಯಶಸ್ವಿಯಾಗಿ ಕೈಗೊಂಡಿದ್ದಾರೆ.




