ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ ಮಿಂಚಿದ ‘ಯುವರಾಜ’ ನಿಗೆ ಅಭೂತಪೂರ್ವ ಸನ್ಮಾನ
ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಯುವರಾಜ್ ಕುಂದರ್ ರವರು ವಾರಣಾಸಿಯ ಸಂತ ಅತುಲನಂದ್ ಕಾನ್ವೆಂಟ್ ಶಾಲೆಯಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರಮಟ್ಟದ ಸಿಬಿಎಸ್ಇ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ 200 ಮೀಟರ್ ಓಟದಲ್ಲಿ ಚಿನ್ನದ ಪದಕ ಹಾಗೂ 400 ಮೀಟರ್ ಓಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಶಾಲೆಗೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ.





ನಾಲ್ಕೂವರೆ ವಯಸ್ಸಿನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ಯುವರಾಜ್ ರವರ ಕಠಿಣ ಅಭ್ಯಾಸದಿಂದ ಅವರಿಗೆ ಈವರೆಗೆ ಒಟ್ಟು 37 ಚಿನ್ನ, 13 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ತಂದುಕೊಟ್ಟಿದೆ. ಅಲ್ಲದೆ ಯುವರಾಜ್ ರವರು ಇದೇ ಬರುವ ಡಿಸೆಂಬರ್ ನಲ್ಲಿ ಮಧ್ಯಪ್ರದೇಶದಲ್ಲಿ ನಡೆಯಲಿರುವ SGFI ರಾಷ್ಟೀಯ ಪಂದ್ಯಾವಳಿಗೆ ಆಯ್ಕೆಯಾಗಿರುವುದು ಹೊಸ ಮೈಲಿಗಲ್ಲನ್ನು ಸೂಚಿಸುತ್ತದೆ.


ಅವರ ಈ ಸಾಧನೆಯನ್ನು ಗುರುತಿಸಿ ಅವರನ್ನು ಮತ್ತು ಅವರ ಪೋಷಕರಾದ ಧೀರಜ್ ಕೋಟ್ಯಾನ್ ಮತ್ತು ವೀಣಾ ಡಿ. ಕೋಟ್ಯಾನ್ ರವರನ್ನು ಶಾಲೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ವಂದನೀಯ ಫಾದರ್ ರೋಹನ್ ಡಿ. ಅಲ್ಮೇಡಾ ಎಸ್. ಜೆ.ರವರು, ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಲು ಅಗತ್ಯವಾದ ಪ್ರಯತ್ನಗಳನ್ನು ಮಾಡುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಉಪ ಪ್ರಾಂಶುಪಾಲರಾದ ಲಾರೆಲ್ ಡಿಸೋಜ ಹಾಗೂ ಅಪರ್ಣಾ ಸುರೇಶ್ ಉಪಸ್ಥಿತರಿದ್ದರು.




