ವೈದ್ಯಕೀಯದಲ್ಲಿ ಕಲಿಕೆಗೆ ಬಿಡುವಿಲ್ಲ – ಕಣಚೂರು ಹಾಜಿ ಡಾ. ಮೋನು
ಸ್ಥಳೀಯ ನಾಟೇಕಲ್ಲಿನ ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆ ಗಳ ಆಯುರ್ವೇದ ಸಪ್ತಾಹದ ಅಂಗವಾಗಿ ಸೆಪ್ಟೆಂಬರ್ 26ರ ಶುಕ್ರವಾರ ವೈದ್ಯರಿಗಾಗಿ ವೈದ್ಯಕೀಯ ಉಪನ್ಯಾಸವು ನಡೆಯಿತು. ಆಯುರ್ವೇದದಲ್ಲಿ ತುರ್ತು ಚಿಕಿತ್ಸೆಯ ಕುರಿತಾಗಿ ಪುತ್ತೂರಿನ ಸುಶೃತ ಆಸ್ಪತ್ರೆಯ ಡಾ. ರವಿಶಂಕರ ಪೆರುವಾಜೆಯವರು ಸುದೀರ್ಘವಾಗಿ ತುರ್ತು ನಿರ್ವಹಣೆಯ ಕುರಿತಾಗಿ ಸಚಿತ್ರ ಮಾಹಿತಿ ನೀಡಿದರು.



ಇದೇ ವೇಳೆ ಮಣಿಪಾಲ ವಾಸ್ತವ್ಯದ ಉಡುಪಿ ಆಯುರ್ವೇದ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಶಾರೀರ ರಚನಾ ಶಾಸ್ತ್ರದ ನಿಪುಣ ಡಾ. ಗಿರಿಧರ ಕಂಠಿ ಇವರನ್ನು ಹೂ ಹಾರ ಫಲ ಪುಷ್ಪ ಪೇಟ ಸಹಿತವಾಗಿ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಹಾಜಿ ಮೋನುರವರು ದೀಪ ಬೆಳಗಿ ಉದ್ಘಾಟಿಸಿ, ವೈದ್ಯಕೀಯ ಕಲಿಕೆಯ ಮಹತ್ವ ಹಾಗೂ ಭಾರತೀಯ ವೈದ್ಯಪದ್ಧತಿಯ ಉಪಯೋಗ ಸಾರ್ವತ್ರಿಕವಾಗಲು ನುರಿತವರ ಭೋದನೆಗಳು ಸಹಾಯಕ ಎಂದರು.




ಸಂಸ್ಥೆಯ ನಿರ್ದೇಶಕ ಅಬ್ದುಲ್ ರೆಹಿಮಾನ್ ರವರು ಸಂಸ್ಥೆಯ ಸದುದ್ದೇಶಗಳನ್ನು ವಿವರಿಸುತ್ತ ಎಲ್ಲಾ ರೀತಿಯ ಚಿಕಿತ್ಸೆ ನಮ್ಮಲ್ಲೂ ಲಭ್ಯವಿದ್ದು ನುರಿತ ಚಿಕಿತ್ಸಕರು ನಮ್ಮಲ್ಲಿರುವ ಕಾರಣ ಉತ್ತಮ ಬೆಳವಣಿಗೆ ಸಾಧ್ಯ ಎಂದರು.



ಪ್ರಾಚಾರ್ಯೆ ಡಾ. ವಿದ್ಯಾ ಪ್ರಭಾ ಸ್ವಾಗತಿಸಿದರು. ಸಂಸ್ಥೆಯ ನಿರ್ವಾಹಕ ಡಾ. ಸುರೇಶ ನೆಗಳಗುಳಿಯವರು ಪೆರುವಾಜೆಯವರ ಪ್ರತಿಭೆಯನ್ನು ಹಾಗೂ ಡಾ. ಕಂಠಿಯವರ ಜ್ಞಾನವನ್ನು ಕೊಂಡಾಡಿದಾರಲ್ಲದೆ ಪ್ರತಿ ತಿಂಗಳೂ ನುರಿತ ವೈದ್ಯರಿಂದ ಉಪನ್ಯಾಸ ಏರ್ಪಡಿಸುವ ಪ್ರಸ್ತಾವ ಮಾಡಿದರು. ನೆರೆಯ ಊರಿನ ವೈದ್ಯರೂ ಜಿಲ್ಲೆಯ ಕಾಲೇಜುಗಳ ವೈದ್ಯವಿದ್ಯಾರ್ಥಿಗಳೂ ಒಟ್ಟಾಗಿ ಸುಮಾರು ನಾಲ್ಕುನೂರು ಮಂದಿ ಈ ಉಪನ್ಯಾಸದ ಸದುಪಯೋಗ ಪಡೆದರು.

ಡಾ. ದೀನಮಂಜು, ಡಾ. ಅಂಜಲಿ ಶೇಖರ್ ನಿರೂಪಿಸಿದರು ಮತ್ತು ಸಮಿಯಾರವರು ಪ್ರಾರ್ಥನೆ ಮಾಡಿದರು. ಇದೇ ಕಾರ್ಯಕ್ರಮವನ್ನು ಸಾವಿರಾರು ಮಂದಿ ಜಾಲತಾಣ ಮೂಲಕವೂ ವೀಕ್ಷಿಸಿದರು.




