ವಾಲ್ಮೀಕಿಯಂತೆ ಸ್ವಾಭಿಮಾನಿ ಬದುಕು ನಮ್ಮದಾಗಬೇಕು – ಪ್ರತಾಪ್ ಸಿಂಹ ನಾಯಕ್
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರು ನಮಗೆಲ್ಲ ಆದರ್ಶ ಪ್ರಾಯರು. ಅವರಂತೆ ಸ್ವಾಭಿಮಾನಿ ಬದುಕು ನಮ್ಮದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು. ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಂಯುಕ್ತವಾಗಿ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿಯನ್ನು ನಾವು ಭಾವನಾತ್ಮಕವಾಗಿ ಕಟ್ಟಿಕೊಳ್ಳಬೇಕು. ಅವರ ರಾಮಾಯಣ ಮಹಾಕಾವ್ಯದ ಸಾಧನೆ ಇಡೀ ಜನಾಂಗಕ್ಕೆ ಪ್ರೇರಣೆ ಆಗಬೇಕು. ತಳ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಬೆಳೆದು ಬರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕು ಎಂದರು. ಮೂಲ್ಕಿ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆರವರು ಮಹರ್ಷಿ ವಾಲ್ಮೀಕಿಯವರ ಜೀವನ ಮತ್ತು ಬದುಕು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ, ಅಪರ ಜಿಲ್ಲಾಧಿಕಾರಿ ರಾಜು, ಜಿಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ಡಿ.ಸಿ.ಪಿ. ಮಿಥುನ್, ಎ.ಎಸ್.ಪಿ. ಅನಿಲ್, ಡಿ.ಡಿ.ಪಿ.ಐ. ಶಶಿಧರ್, ಕೈಗಾರಿಕೆ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಸುರೇಶ ಅಡಿಗ ಮತ್ತಿತರರು ಉಪಸ್ಥಿತರಿದ್ದರು. ಐ.ಟಿ.ಡಿ.ಪಿ. ಯೋಜನಾ ಸಮನ್ವಯಧಿಕಾರಿ ಬಸವರಾಜು ಸ್ವಾಗತಿಸಿದರು.




