ಕಥೊಲಿಕ್ ಸಭಾ ವಿಟ್ಲ ಘಟಕದ ವತಿಯಿಂದ ವಿಟ್ಲ ಶೋಕ ಮಾತಾ ಚರ್ಚ್‌ನಲ್ಲಿ ”ಸೀನಿಯರ್ ಸಿಟಿಜನ್” ದಿನ ಸಂಭ್ರಮದಿಂದ ಆಚರಣೆ
ಹಿರಿಯರು ಇಂದಿನ ಪೀಳಿಗೆಗೆ ಪ್ರೇರಣೆ – ಫಾದರ್ ಐವನ್ ಮೈಕಲ್ ರೊಡ್ರಿಗಸ್

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ವಿಟ್ಲ ಘಟಕದ ವತಿಯಿಂದ, ಮಂಗಳೂರು ಧರ್ಮಕ್ಷೇತ್ರದ ವಿಟ್ಲ ಶೋಕ ಮಾತಾ ಚರ್ಚ್ ನಲ್ಲಿ ”ಸೀನಿಯರ್ ಸಿಟಿಜನ್ ದಿನ 2025” ನ್ನು ಅಕ್ಟೋಬರ್ 5ರಂದು ಭಾನುವಾರ ವಿಟ್ಲ ಚರ್ಚ್ ನ ಕಿರಿಯ ಸಭಾಂಗಣದಲ್ಲಿ ಭಕ್ತಿ, ಕೃತಜ್ಞತೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ವಿಟ್ಲ ಚರ್ಚ್ ವ್ಯಾಪ್ತಿಗೆ ಒಳಪಟ್ಟ 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರ ಗೌರವಕ್ಕಾಗಿ ಆಯೋಜಿಸಲಾಯಿತು.






ಕಾರ್ಯಕ್ರಮಕ್ಕೆ ವಿಟ್ಲ ಧರ್ಮಕೇಂದ್ರದ ಪ್ರಧಾನ ಧರ್ಮಗುರು ಹಾಗೂ ವಿಟ್ಲ ವಲಯದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ರವರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಧರ್ಮಕ್ಷೇತ್ರದ ವಾರಪತ್ರಿಕೆ ರಾಕ್ಣೊ ಸಂಪಾದಕರಾದ ವಂದನೀಯ ಫಾದರ್ ರೂಪೇಶ್ ಮಾಡ್ತಾ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಅಮಿತ್ ಪ್ರಕಾಶ್ ರೊಡ್ರಿಗಸ್ ಹಾಗೂ ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಉಪಸ್ಥಿತರಿದ್ದರು.













“ಹಿರಿಯರು ಕುಟುಂಬದಷ್ಟೇ ಅಲ್ಲ, ಕ್ರೈಸ್ತ ಸಭೆಯೂ ಹೆಮ್ಮೆಪಡುವ ಅಮೂಲ್ಯ ಆಸ್ತಿ. ಅವರ ತ್ಯಾಗ, ಪ್ರಾರ್ಥನೆ ಮತ್ತು ಅನುಭವಗಳ ಮೂಲಕ ಇಂದಿನ ಪೀಳಿಗೆಗೆ ಮಾರ್ಗದೀಪರಾಗಿದ್ದಾರೆ. ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಿ, ಪ್ರೀತಿ ಮತ್ತು ಶಾಂತಿಯ ಜೀವನ ಕಟ್ಟಿದ ನಿಮ್ಮಂತಹ ಹಿರಿಯರು ಇಂದಿನ ಪೀಳಿಗೆಗೆ ಪ್ರೇರಣೆಯಾದವರು. ನಿಮ್ಮ ಆಶೀರ್ವಾದಗಳು ಸಮಾಜದ ಶಕ್ತಿ,” ಎಂದು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ರವರು ಹೇಳಿದರು.








ದಿವ್ಯ ಬಲಿ ಪೂಜೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಂದನೀಯ ಫಾದರ್ ರೂಪೇಶ್ ಮಾಡ್ತಾರವರು ಮಾತನಾಡಿ, “ಹಿರಿಯರು ಸಂತ ಜೋಸೆಫ್ ಮತ್ತು ಮಾತೆ ಮರಿಯಮ್ಮನವರ ಪ್ರತಿರೂಪರಾಗಿದ್ದಾರೆ. ಹಿರಿಯರನ್ನು ಗೌರವಿಸುವವರನ್ನು ದೇವರು ಸದಾ ಆಶೀರ್ವದಿಸುತ್ತಾರೆ. ಇಂದಿನ ನಮ್ಮ ಜೀವನದ ಉನ್ನತಿ ಅವರ ಕಷ್ಟ ಮತ್ತು ತ್ಯಾಗದ ಫಲ,” ಎಂದು ಹೇಳಿದರು.











ಇದೇ ಸಂದರ್ಭದಲ್ಲಿ ಮದುವೆಯಾಗಿ 50 ವರ್ಷಗಳನ್ನು ಪೂರೈಸಿದ 10 ದಂಪತಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. 70 ವರ್ಷ ಮೇಲ್ಪಟ್ಟ ಹಿರಿಯರಿಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಶನ್ ಡಿಸೋಜರವರಿಗೆ ವೈದ್ಯಕೀಯ ನೆರವಿಗಾಗಿ ರೂಪಾಯಿ 10 ಸಾವಿರ ನೀಡಲಾಯಿತು.


ಸಣ್ಣ ಮಕ್ಕಳು ನೃತ್ಯ ಪ್ರದರ್ಶನದ ಮೂಲಕ ಎಲ್ಲರಿಗೂ ಸ್ವಾಗತ ಕೋರಿದರು. ಅತಿಥಿಗಳು ಒಗ್ಗೂಡಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೆಲೆಸ್ತಿನ್ ಪಿಂಟೊ ಮನರಂಜನಾತ್ಮಕ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ವಿಟ್ಲ ಘಟಕದ ಅಧ್ಯಕ್ಷ ಲೂಯಿಸ್ ಮಸ್ಕರೇನ್ಹಸ್ ಸ್ವಾಗತಿಸಿ, ತೋಮಸ್ ಮಸ್ಕರೇನಸ್ ಧನ್ಯವಾದಗೈದರು. ಶೆರಲ್ ವಾಸ್ ಕಾರ್ಯಕ್ರಮವನ್ನು ನಿರೂಪಿಸಿದರು.




