ಮೊಗರ್ನಾಡ್ ಚರ್ಚ್ ನ 250ನೇ ವರ್ಷದ ಜುಬಿಲಿ ಆಚರಣಾ ಸಂದರ್ಭದಲ್ಲಿ ಧರ್ಮಗುರುಗಳ, ಧಾರ್ಮಿಕ ಸಹೋದರ ಸಹೋದರಿಯರ ಸಮಾವೇಶ
ಮದುವೆಯಾಗಿ ಬೇರೆ ಧರ್ಮಕೇಂದ್ರದಲ್ಲಿ ನೆಲೆಸಿದ್ದವರ ಪುನರ್‌ಸಂಗಮ

“ಪ್ರಾರ್ಥನೆಯಿಂದ ಬಲಿಷ್ಠರಾಗಿರಿ, ಸೇವೆಯಿಂದ ಶ್ರೇಷ್ಠರಾಗಿರಿ” – ಫಾದರ್ ಐವನ್ ರೊಡ್ರಿಗಸ್

ಮಂಗಳೂರು ಧರ್ಮಕ್ಷೇತ್ರದ ದೇವಮಾತಾ ಚರ್ಚ್ ಮೊಗರ್ನಾಡ್ ಇದರ 250ನೇ ವಾರ್ಷಿಕ ಜುಬಿಲಿ ಮಹೋತ್ಸವದ ಸುಸಂದರ್ಭದಲ್ಲಿ ಭಕ್ತಿಭಾವದಿಂದ ಮತ್ತು ಕೃತಜ್ಞತೆಯ ಮನೋಭಾವದಿಂದ ವಿಶಿಷ್ಟ ಕಾರ್ಯಕ್ರಮವನ್ನು ಅಕ್ಟೋಬರ್ 20ರಂದು ಸೋಮವಾರ ಆಯೋಜಿಸಲಾಗಿತ್ತು. ಧರ್ಮಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು, ಮೊಗರ್ನಾಡ್ ಚರ್ಚ್ ವ್ಯಾಪ್ತಿಯಲ್ಲಿ ಮದುವೆ ಮಾಡಿ ಕೊಟ್ಟ ಮಹಿಳೆಯರು ಮತ್ತು ಕುಟುಂಬದ ಸದಸ್ಯರು ಈ ಸಂಭ್ರಮದಲ್ಲಿ ಭಾಗವಹಿಸಿದರು.



ವಿಟ್ಲ ವಲಯದ ಧರ್ಮಗುರುಗಳು ಹಾಗೂ ಇತರ ಧರ್ಮಗುರುಗಳು ಕೃತಜ್ಞತಾ ಬಲಿಪೂಜೆಯನ್ನು ನಡೆಸಿ ನೆರೆದ ಎಲ್ಲರಿಗೂ ಆಶೀರ್ವದಿಸಿದರು. ಮೂಲತಃ ಮೊಗರ್ನಾಡ್ ಚರ್ಚ್ ನವರಾದ ಪ್ರಸ್ತುತ ಬೆಂಗಳೂರು ಪ್ರಾಂತ್ಯದ ಕಪುಚಿನ್ ಸಂಸ್ಥೆಯ ಮುಖ್ಯ ಆಡಳಿತದಾರರಾಗಿರುವ ಅತೀ ವಂದನೀಯ ಫಾದರ್ ಮ್ಯಾಕ್ಸಿಂ ಡಿಸಿಲ್ವಾ ದಿವ್ಯ ಬಲಿಪೂಜೆಯ ನೇತೃತ್ವವನ್ನು ವಹಿಸಿದ್ದರು. ವಿಟ್ಲ ವಲಯದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ರವರು ದೇವರ ವಾಕ್ಯದ ಮೇಲೆ ಪ್ರವಚನ ನೀಡಿದರು.
ಪೂಜೆಯ ಬಳಿಕ ಚರ್ಚ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊರವರು ದೇವರ ಸ್ಮರಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇವಮಾತಾ ಚರ್ಚ್‌ನ 250 ವರ್ಷದ ಆಧ್ಯಾತ್ಮಿಕ ಪ್ರಯಾಣವು ದೇವರ ಕೃಪೆಯ ನೈಜ ಸಾಕ್ಷಿಯಾಗಿದೆ. ನಮ್ಮ ಹಿರಿಯರು ಬಿತ್ತಿದ ನಂಬಿಕೆಯ ಬೀಜಗಳು ಇಂದಿನ ಪೀಳಿಗೆಯಲ್ಲಿ ಫಲ ನೀಡಿವೆ. ಅವರ ಪ್ರಾರ್ಥನೆಗಳು ನಮ್ಮ ಬೆಳಕಿನ ದೀಪವಾಗಿವೆ,” ಎಂದು ಹೇಳಿದರು. ಹಾಜರಿದ್ದ ಎಲ್ಲಾ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ದೇವರ ಆಶೀರ್ವಾದ ಎಲ್ಲರಿಗೂ ದೊರಕಲಿ ಎಂದು ಕೋರಿದರು. “ಈ ಜುಬಿಲಿ ನಮ್ಮೆಲ್ಲರ ಹೃದಯಗಳಲ್ಲಿ ನಂಬಿಕೆ, ಪ್ರೀತಿ ಮತ್ತು ಸೇವೆಯ ನವ ಚೈತನ್ಯವನ್ನು ತುಂಬಲಿ” ಎಂದು ಹಾರೈಸಿದರು.



ಮದುವೆಯಾಗಿ ಬೇರೆ ಧರ್ಮಕೇಂದ್ರದಲ್ಲಿ ನೆಲೆಸಿದ್ದವರ ಪುನರ್‌ಸಂಗಮ – ಶ್ಲಾಘನೀಯ ಯೋಚನೆ:
ಮದುವೆಯಾದ ನಂತರ ಬೇರೆ ಬೇರೆ ಧರ್ಮಕೇಂದ್ರಗಳಲ್ಲಿ ನೆಲೆಸಿದ್ದ 29 ಕುಟುಂಬಗಳನ್ನು ಈ ಮಹೋತ್ಸವಕ್ಕೆ ಆಹ್ವಾನಿಸುವ ಸ್ಫೂರ್ತಿದಾಯಕ ಯೋಚನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಮೂಲಕ ಅವರಲ್ಲಿ ಮತ್ತೆ ತಮ್ಮ ತಾಯಿನಾಡಿನ ದೇವಾಲಯದೊಂದಿಗೆ ಆಧ್ಯಾತ್ಮಿಕ ಬಾಂಧವ್ಯ ವೃದ್ಧಿಯಾಯಿತು. ಇದು ನಿಜಕ್ಕೂ ಸಮುದಾಯದ ಏಕತೆಯ ಸಂಕೇತವಾಗಿದ್ದು, “ನಮ್ಮ ಧರ್ಮಕೇಂದ್ರ ಎಂದರೆ ಒಂದು ಕುಟುಂಬ” ಎಂಬ ಸಂದೇಶವನ್ನು ನೀಡಿತು. ಈ ಪುನರ್‌ಸಂಗಮದ ಪ್ರಯತ್ನದಿಂದ ಅನೇಕರು ಹಳೆಯ ನೆನಪುಗಳನ್ನು ಹಂಚಿಕೊಂಡು ಸಂತೋಷದ ಕಣ್ಣೀರು ಸುರಿಸಿದರು. ಚರ್ಚ್ ಪಾಲನಾ ಸಮಿತಿಯ ಬೌದ್ಧಿಕ ಯೋಜನೆ ಮತ್ತು ಪ್ರೀತಿ ತುಂಬಿದ ಆತಿಥ್ಯ ಎಲ್ಲರ ಹೃದಯ ಗೆದ್ದಿತು. ಈ ಘಟನೆ “ಭಾವೈಕ್ಯದಲ್ಲಿ ನಿಜವಾದ ಜ್ಯೂಬಿಲಿಯ ಆನಂದವಿದೆ” ಎಂಬ ನಂಬಿಕೆಯನ್ನು ಪುನರುಜ್ಜೀವಗೊಳಿಸಿತು.













ಈ ಭವ್ಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಟ್ಲ ವಲಯದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ರವರು ಭಕ್ತರನ್ನು ಆಧ್ಯಾತ್ಮಿಕವಾಗಿ ಸ್ಪೂರ್ತಿಗೊಳಿಸಿ “250 ವರ್ಷಗಳ ಈ ಪ್ರಯಾಣವು ಕೇವಲ ಕಾಲದ ಅಳತೆ ಅಲ್ಲ, ಇದು ದೇವರ ನಂಬಿಕೆಯುಳ್ಳ ಜನರ ಬದುಕಿನ ಸಾಕ್ಷಿ. ಈ ದೇವಾಲಯವು ಪ್ರಾರ್ಥನೆ, ಸೇವೆ ಮತ್ತು ಒಗ್ಗಟ್ಟಿನ ತಾಣವಾಗಿ ಬೆಳಗುತ್ತಿರುವುದು ದೇವರ ಮಹಿಮೆ. ನಮ್ಮ ಹಿರಿಯರು ಕಷ್ಟಪಟ್ಟು ಕಟ್ಟಿದ ಈ ಪರಂಪರೆಯನ್ನು ನಾವು ಮುಂದಿನ ಪೀಳಿಗೆಗಳಿಗೆ ನಂಬಿಕೆಯ ಉಡುಗೊರೆಯಾಗಿ ನೀಡಬೇಕು, “ಪ್ರಾರ್ಥನೆಯಿಂದ ಬಲಿಷ್ಠರಾಗಿರಿ, ಸೇವೆಯಿಂದ ಶ್ರೇಷ್ಠರಾಗಿರಿ” ಎಂದು ಪ್ರೇರೇಪಿಸಿದರು. ದೇವಮಾತಾ ಚರ್ಚ್ ಧರ್ಮಕೇಂದ್ರದ ಜೀವಂತ ಸಾಕ್ಷಿಯಾಗಿ ಮುಂದುವರಿಯಲಿ ಎಂಬ ಆಶಯ ವ್ಯಕ್ತಪಡಿಸಿದರು. ಅಂತಿಮವಾಗಿ, “ಈ ಜ್ಯೂಬಿಲಿ ನಮ್ಮೆಲ್ಲರ ಜೀವನದಲ್ಲಿ ಹೊಸ ಕೃಪೆಯ ಬೆಳಕಾಗಲಿ” ಎಂದು ಆಶೀರ್ವಾದ ನೀಡಿದರು.


ಭಗಿನಿ ಸಾಧನಾ ಬಿ.ಎಸ್, ವಂದನೀಯ ಫಾದರ್ ಸಂತೋಷ್ ಡಿಕುನ್ಹಾರವರು ತಮ್ಮ ಅನುಭವಗಳನ್ನು ಸಹಿಯಾದ ಮಾತುಗಳಿಂದ ಹಂಚಿಕೊಂಡರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ, ಮೊಗರ್ನಾಡ್ ICYM ಸದಸ್ಯರು ನೃತ್ಯ ಮತ್ತು ಕಿರುನಾಟಕವನ್ನು ಪ್ರದರ್ಶಿಸಿದರು. ಇದು ಪ್ರೇಕ್ಷಕರ ಮನಸೂರೆಗೊಂಡಿತು.


ಈ ಕಾರ್ಯಕ್ರಮದಲ್ಲಿ ದೇವಮಾತಾ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ, ವಂದನೀಯ ಫಾದರ್ ಲಾರೆನ್ಸ್ ಪಿರೇರಾ, ಭಗಿನಿ ಕ್ರಿಸ್ಟಿನ್ ಅಂದ್ರಾದೆ, ದೇವಮಾತಾ ಕಾನ್ವೆಂಟ್ ಸುಪೀರಿಯರ್ ಭಗಿನಿ ಆ್ಯನ್ನಿ ಡಿಸೋಜ, ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯಾನಾ ಡಿಕುನ್ಹಾ, ಜುಬಿಲಿ ಸಮಿತಿಯ ಸಂಚಾಲಕ ನವೀನ್ ರಾಜೇಶ್ ಇವರೊಂದಿಗೆ ಸರ್ವ ಸದಸ್ಯರು, ಚರ್ಚ್ ಪಾಲನಾ ಸಮಿತಿಯ ಸದಸ್ಯರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು. ವಂದನೀಯ ಡೀಕನ್ ಅವಿಲ್ ಸಂತುಮಾಯರ್ ರವರು ಕಾರ್ಯಕ್ರಮದ ನಿರೂಪಿಸಿದರು. ನವೀನ್ ರಾಜೇಶ್ ಧನ್ಯವಾದ ಸಮರ್ಪಣೆ ಮಾಡುತ್ತಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಪೆರುವಾಯ್ ಚರ್ಚ್ ಧರ್ಮಗುರು ವಂದನೀಯ ಫಾದರ್ ಸೈಮನ್ ಡಿಸೋಜರವರು ಭೋಜನವನ್ನು ಆಶೀರ್ವದಿಸಿದರು. ಆಹ್ವಾನಿಸಿದ ಎಲ್ಲಾ ಧರ್ಮ ಗುರುಗಳು ಹಾಗೂ ಧರ್ಮ ಭಗಿನಿಯರಿಗೆ ಸ್ಮರಣಿಕೆಗಳನ್ನು ಕೊಟ್ಟು ಗೌರವಿಸಲಾಯಿತು.






