ಮುಕ್ಕ ಚರ್ಚ್ ನಲ್ಲಿ ಕ್ರೈಸ್ತ ಶಿಕ್ಷಣ ದಿವಸ ಆಚರಣೆ
“ನಂಬಿಕೆಯ ಬೆಳಕಿನಲ್ಲಿ ಶಿಕ್ಷಣ ಪಡೆಯುವಾಗ ಸಮಾಜಕ್ಕೆ ಬೆಳಕು ನೀಡುವ ದೀಪವಾಗುತ್ತಾರೆ” – ಫಾದರ್ ರೋಹಿತ್ ಡಿಕೋಸ್ಟ

“ಭರವಸೆಯ ಕಲಿಕೆಯಿಂದ ಭರವಸೆಯ ತುಂಬಿ” ಎಂಬ ಧ್ಯೇಯ ವಾಕ್ಯವನ್ನು ಆಧಾರವನ್ನಾಗಿ ಮಾಡಿಕೊಂಡು, ನವೆಂಬರ್ 2 ರಂದು ಭಾನುವಾರ ಪವಿತ್ರಾತ್ಮರಿಗೆ ಸಮರ್ಪಿತ ಮುಕ್ಕ ಚರ್ಚ್ ನಲ್ಲಿ ಕ್ರೈಸ್ತ ಶಿಕ್ಷಣ ದಿವಸವನ್ನು ಭಕ್ತಿ ಭಾವದಿಂದ ಆಚರಿಸಲಾಯಿತು.







ಈ ಸಂದರ್ಭದಲ್ಲಿ ಮಂಗಳೂರು ಧರ್ಮಕ್ಷೇತ್ರದ ಮಂಗಳ ಜ್ಯೋತಿಯ ನಿರ್ದೇಶಕರಾದ ವಂದನೀಯ ಫಾದರ್ ರೋಹಿತ್ ಡಿಕೋಸ್ಟರವರು ಮುಖ್ಯ ಅತಿಥಿಗಳಾಗಿ ಹಾಜರಿದ್ದು, “ಭರವಸೆಯ ಕಲಿಕೆ ಎಂದರೆ ಕೇವಲ ಪುಸ್ತಕದ ಜ್ಞಾನವಲ್ಲ; ಅದು ಜೀವನದ ಪ್ರತಿಯೊಂದು ಹಂತದಲ್ಲೂ ದೇವರ ಮೇಲೆ ನಂಬಿಕೆ ಇಟ್ಟು ಮುಂದುವರೆಯುವ ಶಕ್ತಿ. ವಿದ್ಯಾರ್ಥಿಗಳು ಮತ್ತು ಯುವಕರು ನಂಬಿಕೆಯ ಬೆಳಕಿನಲ್ಲಿ ಶಿಕ್ಷಣ ಪಡೆಯುವಾಗ ಅವರು ಸಮಾಜಕ್ಕೆ ಬೆಳಕು ನೀಡುವ ದೀಪವಾಗುತ್ತಾರೆ. ಇಂದಿನ ಯುವ ಪೀಳಿಗೆಗೆ ಬೈಬಲ್‌ನ ಮೌಲ್ಯಗಳು ಮತ್ತು ಯೇಸುವಿನ ಪ್ರೀತಿ ಮಾರ್ಗದರ್ಶಿಯಾಗಬೇಕು” ಎಂದು ಧರ್ಮಕೇಂದ್ರದ ವಿದ್ಯಾರ್ಥಿಗಳಿಗೆ ಮತ್ತು ಭಕ್ತಾಧಿಗಳಿಗೆ ಸ್ಫೂರ್ತಿ ತುಂಬುವ ಸಂದೇಶವನ್ನು ನೀಡಿದರು.

















ಧರ್ಮಕೇಂದ್ರದ ಪ್ರತಿಯೊಂದು ವಾಳೆಯಿಂದ ಬೈಬಲ್ ಆಧಾರಿತ ಕಿರು ನಾಟಕಗಳನ್ನು ಪ್ರದರ್ಶಿಸಲಾಯಿತು. ಅಬ್ರಹಾಮರ ಯಜ್ಞ, ಸೋಲೋಮನ್ ರಾಜನ ಬುದ್ಧಿವಂತಿಕೆ, ಸುಸಾನ್ನೆಯ ನಂಬಿಕೆ, ಯೇಸು ಕ್ರಿಸ್ತರ ತಂದೆ ಸಂತ ಜೋಸೆಫ್ ಮತ್ತು ಜೆರಿಕೋ ನಗರದಲ್ಲಿನ ಜಾಕ್ಕೆಯುಸ್ ಕುರಿತ ಕಿರು ನಾಟಕಗಳು ಎಲ್ಲರ ಮನಸನ್ನು ಮುಟ್ಟಿದವು.







ಕಾರ್ಯಕ್ರಮದ ನಿರ್ವಹಣೆಯಲ್ಲಿ ಮುಕ್ಕ ಚರ್ಚ್ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿ ಪಿಂಟೋ, SND ಕಾನ್ವೆಂಟ್ ನ ಸುಪೀರಿಯರ್ ಸಿಸ್ಟರ್ ಆ್ಯನ್ನಿ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸೈಮನ್ ರೊಡ್ರಿಗಸ್, ಕಾರ್ಯದರ್ಶಿ ಆಶಾ ರೊಡ್ರಿಗಸ್, 21 ಆಯೋಗಗಳ ಸಂಯೋಜಕಿ ಜೆನೆಟ್ ಸಿಕ್ವೇರಾ, ಹಾಗೂ ಕ್ರೈಸ್ತ ಶಿಕ್ಷಣ ಸಂಯೋಜಕಿ ಅನಿತಾ ಡಿಸೋಜ ಉಪಸ್ಥಿತರಿದ್ದರು. ಕ್ರೈಸ್ತ ಶಿಕ್ಷಣ ಸಂಯೋಜಕಿ ಅನಿತಾ ಡಿಸೋಜ ಸ್ವಾಗತಿಸಿದರು. ಲವೀಶಾ ಬರೆಟ್ಟೊ ಕಾರ್ಯಕ್ರಮವನ್ನು ನಿರೂಪಿಸಿದರು. ಚರ್ಚ್ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿ ಪಿಂಟೊ ನೆರೆದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.





