August 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಡಾ ಹೆಗ್ಗಡೆಯವರ ರಾಜ್ಯ ಸಭಾ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಕೋಟಿ ರೂಪಾಯಿಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಸಿರಿ ಕೆಫೆ-ಸಿರಿ ಮಳಿಗೆ ಉದ್ಘಾಟನೆ

ಜನರ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯಸಭಾ ನಿಧಿ ಬಳಕೆ – ಡಾ ಹೆಗ್ಗಡೆ 

ಗ್ರಾಮದ ಅಗತ್ಯತೆ ಮತ್ತು ಗ್ರಾಮೀಣ ಜನರ ಜೀವನ ಸ್ಥಿತಿಗತಿ ಬಗ್ಗೆ ಗ್ರಾಮಾಭಿವೃದ್ದಿ ಯೋಜನೆ ಮೂಲಕ ನಿತ್ಯ ವರದಿ ಬರುತ್ತಿದ್ದು, ಇದರಂತೆ ಇಲ್ಲಿಂದ 800 ಕಿ.ಮೀ. ದೂರದ ಬೀದರ್ ಜಿಲ್ಲೆಯ ಸ್ಥಿತಿ ಕುರಿತು ಮಾಹಿತಿ ದೊರೆತ ಕಾರಣ ಅಲ್ಲಿಯ ಜನರ ಜೀವನ ಸುಧಾರಣೆ ಅಗಬೇಕು ಎಂದು ನನ್ನ ರಾಜ್ಯಸಭಾ ಪ್ರದೇಶಾಭಿವೃದ್ಧಿ ನಿಧಿಯಿಂದ ಬೀದರ್ ಜಿಲ್ಲೆಗೆ ಹೈನುಗಾರಿಕೆಗೆ 10 ಕೋಟಿ ರೂಪಾಯಿ ಬಳಕೆ ಮಾಡಿದ್ದು ಇದರಿಂದ ನಿತ್ಯ 18  ಸಾವಿರ ಲೀಟರ್ ಉತ್ಪತ್ತಿಯಾಗುತ್ತಿದ್ದ ಹಾಲು ಪ್ರಸ್ತುತ ಒಂದು ಲಕ್ಷದ ನಲುವತ್ತು ಸಾವಿರ ಲೀಟರ್ ಉತ್ಪತ್ತಿಯಾಗುತ್ತಿದೆ. ಇದರಿಂದ ಜನರ ಜೀವನ ಮಟ್ಟ ಸುಧಾರಣೆಯಾಗಿದೆ. ಇದೇ ರೀತಿ ಜನರ ಜೀವನ ಮಟ್ಟ ಸುಧಾರಣೆ ಅಗತ್ಯತೆ ಮನಗಂಡು ಮುಂದೆಯೂ ರಾಜ್ಯಸಭಾ ನಿಧಿ ಬಳಸಲಾಗುವುದು ಎಂದು ರಾಜ್ಯಸಭಾ ಸಂಸದ, ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ನವೆಂಬರ್ 17ರಂದು ಸೋಮವಾರ ರಾಜ್ಯಸಭಾ ಸಂಸದರಾದ ಡಾ.‌ ವೀರೇಂದ್ರ ಹೆಗ್ಗಡೆಯವರ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರುಗೊಂಡಿರುವ ರೂಪಾಯಿ 2 ಕೋಟಿ ಅನುದಾನದಡಿ ಬೆಳ್ತಂಗಡಿ ನಗರದ ಕೆಇಬಿ-ರೆಂಕೆದಗುತ್ತು-ಮಲ್ಲೊಟ್ಟು ಸಂಪರ್ಕಿಸುವ ರಸ್ತೆಯ ಅಗಲೀಕರಣ-ಡಾಂಬರೀಕರಣ ಮತ್ತು ಒಳಚರಂಡಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡುತ್ತಾ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ತಾಲೂಕಿನ ಕೆಲವು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಗೆ ರಾಜ್ಯಸಭಾ ನಿಧಿಯನ್ನು ಬಳಸಲಾಗಿದೆ. ಗ್ರಾಮಾಭಿವೃದ್ದಿ ಯೋಜನೆಯಿಂದ ಸಾವಿರಾರು ಕುಟುಂಬಗಳಿಗೆ ಬೆಳಕು ಬಂದರೆ, ಸಿರಿ ಸಂಸ್ಥೆಯಿಂದ ಸಾವಿರಾರು ಮಂದಿಗೆ ಉದ್ಯೋಗ ದೊರಕಿದೆ. ಮುಂದೆಯೂ ಇನ್ನಷ್ಟು ಉತ್ಪನ್ನಗಳನ್ನು ತಯಾರಿಸಿ ಮೂರು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುವಂತೆ ಮಾಡಲಾಗುವುದು. ಇಲ್ಲಿನ ಶಾಸಕರ, ಪಟ್ಟಣ ಪಂಚಾಯಿತಿ ಅಧ್ಯಕ್ಷರ ಹಾಗೂ ಸದಸ್ಯರ ಬೇಡಿಕೆಯಂತೆ ಜನರ ಅನುಕೂಲಕ್ಕಾಗಿ ಈ ರಸ್ತೆಗೆ 2 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದರು.

ಬೆಳ್ತಂಗಡಿ ಶಾಸಕ‌ ಹರೀಶ್ ಪೂಂಜರವರು ಮಾತನಾಡಿ,  ಡಾ ಹೆಗ್ಗಡೆಯವರು ತಮ್ಮ ರಾಜ್ಯಸಭಾ ನಿಧಿಯಡಿ ಬೆಳ್ತಂಗಡಿ ಅಯ್ಯಪ್ಪ ಮಂದಿರ ಬಳಿಯಿಂದ ಹುಣ್ಸೆಕಟ್ಟೆ ವರೆಗಿನ ರಸ್ತೆ ಅಭಿವೃದ್ದಿಗೆ 2 ಕೋಟಿ ರೂಪಾಯಿ ನೀಡುವ ಮೂಲಕ ಉಪ್ಪಿನಂಗಡಿ – ಬೆಳ್ತಂಗಡಿ ರಾಜ್ಯ ಹೆದ್ದಾರಿ ಗುರುವಾಯನಕರೆಯಲ್ಲಿ ಟ್ರಾಫಿಕ್ ಸಮಸ್ಯೆ ಬಂದಾಗ  ಈ  ಸಂಪರ್ಕ ರಸ್ತೆ ಸಾವಿರಾರು ಜನರಿಗೆ ಅನುಕೂಲವಾಗಿದೆ. ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಡಾ. ಹೆಗ್ಗಡೆಯವರು ತಮ್ಮ ರಾಜ್ಯಸಭಾ ನಿಧಿಯಿಂದ 10 ಕೋಟಿ ರೂಪಾಯಿ ಅನುದಾನ ನೀಡಿ ಸಾವಿರಾರು ಕುಟುಂಬಗಳ ಆರ್ಥಿಕ ಬೆಳವಣಿಗೆ ಕಾರಣವಾಗಿದ್ದಾರೆ. ಇದರಿಂದ   ದೇಶದಲ್ಲಿ ಸಂಸದರ ನಿಧಿ ವಿನಿಯೋಗ ಹೇಗೆ ಮಾಡಬಹುದೆಂದು ಡಾ. ಹೆಗ್ಗಡೆಯವರು ಕೆಲಸ ಮಾಡಿ ತೋರಿಸಿಕೊಟ್ಟು ಮಾದರಿಯಾಗಿದ್ದಾರೆ. ಸಿರಿ ಸಂಸ್ಥೆಯಲ್ಲಿ ಒಂದು ಸಾವಿರ ಸಿಬ್ಬಂದಿಗಳು ಇದ್ದಾರೆ. ಮಹಿಳೆಯರಿಗೆ ಉದ್ಯೋಗ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಪಟ್ಟಣ ಪಂಚಾಯತ್ ಗೆ ಅನುದಾನಗಳ ಕೊರತೆ ಇದ್ದ ಸಂದರ್ಭದಲ್ಲಿ ರಸ್ತೆಗೆ ಎರಡು ಕೋಟಿ ಅನುದಾನ ನೀಡಿ ನಗರ ಪಂಚಾಯತ್ ಗೆ ಶಕ್ತಿ ತುಂಬಿದ್ದಾರೆ. ಇದಕ್ಕಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರ ಪರವಾಗಿ ಡಾ. ಹೆಗ್ಗಡೆಯವರಿಗೆ ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ   ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಧರ್ಮಸ್ಥಳ ಗ್ರಾಮೀಣ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್., ಸಿರಿ ಸಂಸ್ಥೆ ಟ್ರಸ್ಟಿ ರಾಜೇಶ್ ಪೈ ಉಜಿರೆ, ಪ.ಪಂ.‌ ಮುಖ್ಯಾಧಿಕಾರಿ ರಾಜೇಶ್, ಸಿರಿ ಸಂಸ್ಥೆ ಸಿಇಒ ಪ್ರಸನ್ನ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ಪ್ರಸ್ತಾವಿಸಿ, ಸ್ವಾಗತಿಸಿದರು. ಸಿರಿ ಗೋದಾಮು ವಿಭಾಗದ ಮ್ಯಾನೇಜರ್ ಜೀವನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಂಸದರಿಗೆ ವರ್ಷಕ್ಕೆ 5 ಕೋಟಿ ಅನುದಾನ ಬರುತ್ತದೆ. ಸಂಸದರ ನಿಧಿಯನ್ನು ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಆದ್ಯತೆ ಮೇರೆಗೆ ಬಳಕೆ.  ಅಲ್ಲಿನ ಹಾಲು ಸೊಸೈಟಿಗಳಿಗೆ 10 ಕೋಟಿ ಅನುದಾನ ನೀಡಲಾಗಿದ್ದು, ಜಿಲ್ಲೆಯಲ್ಲಿ ದಿನಕ್ಕೆ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಡಾ. ಹೆಗ್ಗಡೆಯವರ ಕಾರ್ಯಕ್ಕಾಗಿ ರಾಷ್ಟ್ರಪತಿಯವರಿಂದ ಶ್ಲಾಘನೆ ಕೂಡ ಲಭಿಸಿದೆ. ಬೆಳ್ತಂಗಡಿ-ಹುಣ್ಸೆಕಟ್ಟೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ದಿಗೆ 2 ಕೋಟಿ ರೂಪಾಯಿ ಅನುದಾನ ಬಿಡುಗಡೆ. ಧರ್ಮಸ್ಥಳದ ಅಶೋಕ ನಗರದಲ್ಲಿ ರಸ್ತೆ, ಮೂಲಭೂತ ಸೌಕರ್ಯಕ್ಕಾಗಿ 2.41 ಕೋಟಿ ಅನುದಾನ್, 140 ಕ್ಕೂ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ 1.83 ಕೋಟಿ ರೂಪಾಯಿ ಬಿಡುಗಡೆ. ಇಷ್ಟರ ವರೆಗೆ  16.74 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದೆ ಎಂದು ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಕೆ. ಎನ್. ಜನಾರ್ಧನ್  ತಿಳಿಸಿದರು.

You may also like

News

CODP Extends Education Aid to Students, Spreads Awareness on Government Welfare Schemes

The Canara Organisation for Development and Peace (CODP) organised an Education Aid Cheque Distribution Programme along with an awareness session
News

ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ – ಕೆಲವೇ ಗಂಟೆಗಳಲ್ಲಿ ಉಡುಪಿ ಪೊಲೀಸರಿಂದ ಆರೋಪಿ ರಾಜು ಬಂಧನ

ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ

You cannot copy content of this page