October 18, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದೆಹಲಿಯಲ್ಲಿ ಕ್ರೈಸ್ತ ಮುಖಂಡರ ಶಾಂತಿಯುತ ಸಾಂಕೇತಿಕ ಪ್ರತಿಭಟನೆ – AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಭಾಗವಹಿಸುವುದು ಖಚಿತ

ಪ್ರತಿಭಟನೆಯ ಬಳಿಕ ರಾಷ್ಟ್ರಪತಿ ಹಾಗೂ ಪ್ರಧಾನಿಯವರಿಗೆ ಮನವಿ ಹಸ್ತಾಂತರ

ಭಾರತದ ಸಾರ್ವಭೌಮತೆಗೆ ಧಕ್ಕೆಯಾಗುವಂತೆ ಹಾಗೂ ದೇಶದ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯದೊಂದಿಗೆ, ಫೆಬ್ರವರಿ 2ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ಜಂತರ್ ಮಂತರ್‌ನಲ್ಲಿ ಕ್ರೈಸ್ತ ಸಮುದಾಯದ ಮುಖಂಡರಿಂದ ಶಾಂತಿಯುತ ಸಾಂಕೇತಿಕ ಮೌನ ಪ್ರತಿಭಟನೆ ಆಯೋಜಿಸಲಾಗಿದೆ.

ಈ ಪ್ರತಿಭಟನೆಯಲ್ಲಿ ಅಖಿಲ ಭಾರತ ಕ್ರೈಸ್ತ ಒಕ್ಕೂಟ (AICU) ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಅವರು ಪ್ರಮುಖವಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತರು ಹುಟ್ಟುಹಬ್ಬ, ಪುಣ್ಯತಿಥಿ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭಗಳಲ್ಲಿ ಯಾವುದೇ ಆಧಾರವಿಲ್ಲದೆ “ಮತಾಂತರ” ಆರೋಪ ಹೊರಿಸಿ, ಸ್ವಯಂಘೋಷಿತ ಸಂಘಟನೆಗಳ ಹೆಸರಿನಲ್ಲಿ ಕೆಲವರು ಅತಿಕ್ರಮ ಪ್ರವೇಶ, ದೌರ್ಜನ್ಯ, ವಸ್ತುಗಳ ಧ್ವಂಸ, ದರೋಡೆ ಹಾಗೂ ಮಹಿಳೆಯರ ಮೇಲೆ ಲೈಂಗಿಕ ಹಲ್ಲೆ ನಡೆಸುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ದೌರ್ಜನ್ಯ ನಡೆಸಿದವರೇ ನಂತರ ಪೊಲೀಸರಿಗೆ ದೂರು ನೀಡಿ ಕ್ರೈಸ್ತರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ನ್ಯಾಯಾಲಯಗಳ ಮೆಟ್ಟಿಲೇರಿಸುವಂತೆ ಮಾಡುತ್ತಿರುವುದು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಭಟನೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸದೆ ಮೌನ ವಹಿಸಿರುವುದು ಕ್ರೈಸ್ತ ಸಮುದಾಯದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರತಿಭಟನೆಯ ಮೊದಲ ಹಂತವಾಗಿ ಜಂತರ್ ಮಂತರ್‌ನಲ್ಲಿ ಮೌನ ಪ್ರತಿಭಟನೆಯ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಎರಡನೇ ಹಂತದಲ್ಲಿ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಗೃಹ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆಗಳ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಮೂರನೇ ಹಂತದಲ್ಲಿ ಉತ್ತರ ಹಾಗೂ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಿಗೆ ಭೇಟಿ ನೀಡಿ ರಾಜ್ಯಪಾಲರು ಮತ್ತು ಗೃಹ ಸಚಿವರಿಗೆ ಮನವಿ ನೀಡಲಾಗುತ್ತದೆ.

ಇನ್ನೂ ಕೂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ, ಏಪ್ರಿಲ್ ಮೊದಲ ವಾರದಲ್ಲಿ ದೇಶದ ಎಲ್ಲಾ ರಾಜ್ಯಗಳಿಂದ ಕ್ರೈಸ್ತ ಸಮುದಾಯದವರನ್ನು ಒಗ್ಗೂಡಿಸಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸ್ವಾತಂತ್ರ್ಯ ಪೂರ್ವದಿಂದಲೇ ದೇಶದ ಅಭಿವೃದ್ಧಿಗೆ ಕ್ರೈಸ್ತ ಸಮುದಾಯ ನೀಡಿರುವ ಪ್ರಾಮಾಣಿಕ ಸೇವೆಯನ್ನು ದೇಶ ಗಮನಿಸಬೇಕಾಗಿದೆ. ಶಾಂತಿ, ಸಹಬಾಳ್ವೆ ಮತ್ತು ಸೇವಾ ಮನೋಭಾವದೊಂದಿಗೆ ಬದುಕುತ್ತಿರುವ ಕ್ರೈಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ವಿಶೇಷ ಕಾನೂನು ಜಾರಿಗೆ ತರಬೇಕು ಹಾಗೂ ಈ ಎಲ್ಲಾ ಪ್ರಕರಣಗಳನ್ನು ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ಮೂಲಕ ತನಿಖೆಗೊಳಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಈ ಹಿನ್ನಲೆಯಲ್ಲಿ, ದೇಶದ ಎಲ್ಲಾ ಸಮಾನ ಮನಸ್ಕ ಹಿತಚಿಂತಕರು ಈ ಶಾಂತಿಯುತ ಪ್ರತಿಭಟನೆಗೆ ಕೈಜೋಡಿಸಬೇಕೆಂದು ಪ್ರತಿಭಟನೆಯ ಅಧ್ಯಕ್ಷ ಹ್ಯಾರಿ ಡಿಸೋಜ ಮನವಿ ಮಾಡಿದ್ದಾರೆ.

ಪ್ರತಿಭಟನೆಯ ಬಳಿಕ ರಾಷ್ಟ್ರಪತಿ ಹಾಗೂ ಪ್ರಧಾನಿಯವರಿಗೆ ಮನವಿ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಲಾಗಿದೆ.

You may also like

News

ಪುತ್ತೂರು ರಸ್ತೆ ಅಪಘಾತದಲ್ಲಿ ಅಂಚೆ ಇಲಾಖೆ ಸಿಬ್ಬಂದಿ ಮಮತಾ ದುರ್ಮರಣ

ಪುತ್ತೂರು ಮುಕ್ರಂಪಾಡಿಯಲ್ಲಿ ಸ್ಕೂಟರ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪುತ್ತೂರು ಅಂಚೆ ಇಲಾಖೆಯ ಪೋಸ್ಟಲ್ ಅಸಿಸ್ಟೆಂಟ್ ಮಮತಾ ಅವರು ಚಿಕಿತ್ಸೆ
News

Inauguration of RGUHS Mangaluru Zone Throwball (M&W) Tournament 2026-27 at Father Muller Homoeopathic Medical College Deralakatte

RGUHS Mangaluru Zone Throwball (M&W) Tournament 2026-27 was hosted by Father Muller Homoeopathic Medical College, Deralakatte on 17th October 2026.

You cannot copy content of this page