October 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಾಲ್ದನೆಯಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ – ಮಾಜಿ ಮೇಯರ್ ಭಾಸ್ಕರ್ ಕೆ. ಸಕಾಲಿಕ ಸ್ಪಂದನೆ, ಅರಣ್ಯ ಇಲಾಖೆ ಕಾರ್ಯಕ್ಕೆ ಹರ್ಷ

ಪಾಲ್ದನೆ ಸಮೀಪದ ನೆಕ್ಕರೆ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಲ್ಲಿ ತೀವ್ರ ಭೀತಿ ಹುಟ್ಟಿಸಿದ್ದ ಬೃಹತ್ ಗಾತ್ರದ ಚಿರತೆಯನ್ನು ಕೊನೆಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.

ಕೆಲರಾಯ್ ಕ್ರಾಸ್‌ನಲ್ಲಿ ಕಾರ್ಯಾಚರಣೆ ಯಶಸ್ವಿ:

ನೆಕ್ಕರೆ ಪ್ರದೇಶದಲ್ಲಿ ಚಿರತೆಯ ಓಡಾಟವನ್ನು ಗಮನಿಸಿದ್ದ ಸ್ಥಳೀಯರು, ತಕ್ಷಣವೇ ಈ ಬಗ್ಗೆ ಮಾಜಿ ಮೇಯರ್ ಹಾಗೂ ಮಾಜಿ ಕಾರ್ಪೊರೇಟರ್ ಭಾಸ್ಕರ್ ಕೆ. ಅವರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರ ದೂರಿಗೆ ಸಕಾಲದಲ್ಲಿ ಸ್ಪಂದಿಸಿದ ಭಾಸ್ಕರ್ ಕೆ., ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ತ್ವರಿತ ಕಾರ್ಯಾಚರಣೆಗೆ ಒತ್ತಾಯಿಸಿದ್ದರು. ಭಾಸ್ಕರ್ ಕೆ. ಅವರ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿ, ಕೆಲರಾಯ್ ಕ್ರಾಸ್ ನೆಕ್ಕರೆ ಪದವು ಎಂಬ ಆಯಕಟ್ಟಿನ ಸ್ಥಳದಲ್ಲಿ ಚಿರತೆ ಸೆರೆಹಿಡಿಯಲು ಬೋನು ಅಳವಡಿಸಿದ್ದರು.

ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜಾಣ್ಮೆಯ ಕಾರ್ಯಾಚರಣೆಯ ಫಲವಾಗಿ, ಸಾರ್ವಜನಿಕರಿಗೆ ನಿರಂತರ ತೊಂದರೆ ಕೊಡುತ್ತಿದ್ದ ಚಿರತೆಯು ಕೊನೆಗೂ ಬೋನಿಗೆ ಬಿದ್ದಿದೆ.

ಊರವರ ಹರ್ಷ:

ಕಳೆದ ಕೆಲವು ದಿನಗಳಿಂದ ಚಿರತೆಯ ಭೀತಿಯಿಂದ ಸಂಜೆ ಮತ್ತು ಮುಂಜಾನೆ ಓಡಾಡಲು ಭಯಪಡುತ್ತಿದ್ದ ಸ್ಥಳೀಯರು, ಈಗ ಚಿರತೆ ಸೆರೆಯಾಗಿರುವುದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಸಮಯೋಚಿತವಾಗಿ ಸ್ಪಂದಿಸಿ ಅರಣ್ಯ ಇಲಾಖೆಯ ಮೂಲಕ ಯಶಸ್ವಿ ಕಾರ್ಯಾಚರಣೆ ನಡೆಸಲು ಕಾರಣರಾದ ಮಾಜಿ ಮೇಯರ್ ಭಾಸ್ಕರ್ ಕೆ. ಅವರ ಕಾರ್ಯ ವೈಖರಿಯನ್ನು ಊರಿನ ಜನರು ಪ್ರಶಂಸಿದ್ದಾರೆ. ಅರಣ್ಯ ಇಲಾಖೆಯ ತ್ವರಿತ ಮತ್ತು ಸಮರ್ಥ ಕಾರ್ಯಾಚರಣೆಗೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಸೆರೆಹಿಡಿಯಲಾದ ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

You may also like

News

ಮಂಗಳೂರು ಪ್ರೆಸ್ ಕ್ಲಬ್‌ನ ನವೀಕೃತ ‘ಅಕ್ಷರ ಸಭಾಂಗಣ’ ಉದ್ಘಾಟನೆ

ಮಾಧ್ಯಮದ ನೈತಿಕ ಮೌಲ್ಯಗಳ ರಕ್ಷಣೆ ಪತ್ರಕರ್ತರ ಹೊಣೆ – ಡಾ. ಎಂ. ಮೋಹನ್ ಆಳ್ವ ರಾಜಕೀಯ, ಶಿಕ್ಷಣ, ಆರೋಗ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮೌಲ್ಯಗಳು ಮತ್ತು ಪಾವಿತ್ರ್ಯತೆ
News

ಗಂಜಿಮಠ ಗ್ರಾಮ ಪಂಚಾಯತ್ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವುದೇ ಗ್ರಾಮ ಪಂಚಾಯತ್ ವ್ಯವಸ್ಥೆಯ ಉದ್ದೇಶ – ಡಾ. ಭರತ್ ಶೆಟ್ಟಿ ಗುರುಪುರ ಗಂಜಿಮಠ ಗ್ರಾಮ ಪಂಚಾಯತ್‌ನ ನೂತನ ಕಟ್ಟಡ ನಿರ್ಮಾಣಕ್ಕೆ

You cannot copy content of this page