October 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪ್ರೊಟೆಸ್ಟಂಟ್ ಚರ್ಚುಗಳ ಏಕತೆಗೆ DAPC ಮುಂದಾಳತ್ವ – ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಸರ್ಕಾರಕ್ಕೆ 15ಕ್ಕೂ ಹೆಚ್ಚು ಪ್ರಮುಖ ಬೇಡಿಕೆಗಳು

ಕರ್ನಾಟಕದಲ್ಲಿರುವ ಪ್ರೊಟೆಸ್ಟಂಟ್, ಪೆಂಟೆಕೋಸ್ಟಲ್ ಮತ್ತು ಸ್ವತಂತ್ರ ಚರ್ಚ್‌ಗಳನ್ನು ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್’ (DAPC) ಮಹತ್ವದ ಹೆಜ್ಜೆ ಇಟ್ಟಿದೆ. ಸಮುದಾಯದ ಹಕ್ಕುಗಳ ರಕ್ಷಣೆ ಮತ್ತು ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ರೂಪುಗೊಂಡಿರುವ ಈ ವೇದಿಕೆಯು, ರಾಜ್ಯ ಸರ್ಕಾರದ ಮುಂದೆ ಹತ್ತಾರು ಬೇಡಿಕೆಗಳನ್ನಿಟ್ಟು ಹೋರಾಟಕ್ಕೆ ಸಜ್ಜಾಗಿದೆ.

ಒಗ್ಗಟ್ಟಿನ ಮಂತ್ರ ಜಪಿಸಿದ ಆರ್ಚ್‌ಬಿಷಪ್:

DAPC ಸಂಸ್ಥೆಯ ಆರ್ಚ್‌ಬಿಷಪ್ ರೆವರೆಂಡ್ ಡಾ. ವಿನೋದ್ ಎಂ. ಚಾಕೋ ಅವರು ಈ ಸಂದರ್ಭದಲ್ಲಿ ಏಕತೆಯ ಸಂದೇಶ ನೀಡಿದ್ದಾರೆ. “ಭಾರತದ ಕ್ರೈಸ್ತ ಪರಂಪರೆಯು ವೈವಿಧ್ಯತೆಯಿಂದ ಕೂಡಿದೆ. ಆದರೆ ಇಂದಿನ ಕಠಿಣ ಸಂದರ್ಭದಲ್ಲಿ ಸಮುದಾಯಕ್ಕೆ ಸರಿಯಾದ ಪ್ರಾತಿನಿಧ್ಯ ಮತ್ತು ಹೊಣೆಗಾರಿಕೆ ಅತ್ಯಗತ್ಯ. ಪ್ರತಿಯೊಂದು ಚರ್ಚ್ ನ ಸ್ವಾಯತ್ತತೆಯನ್ನು ಗೌರವಿಸುತ್ತಲೇ, ಎಲ್ಲರನ್ನೂ ಒಂದುಗೂಡಿಸಿ ಸರ್ಕಾರದೊಂದಿಗೆ ಸಂವಹನ ನಡೆಸಲು DAPC ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ,” ಎಂದು ಅವರು ತಿಳಿಸಿದ್ದಾರೆ.

ಸಹಾಯಕ ಆರ್ಚ್‌ಬಿಷಪ್ ರೆವರೆಂಡ್ ಸುನಿಲ್ ವಿ. ಜೇಕಬ್ ಮಾತನಾಡಿ, “ನಾವು ಯಾವುದೇ ಸಭೆಗಳ ಆಂತರಿಕ ಸಿದ್ಧಾಂತಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಬದಲಿಗೆ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಮುಖ್ಯ ಗುರಿ,” ಎಂದಿದ್ದಾರೆ.

ಸರ್ಕಾರದ ಮುಂದಿರುವ ಪ್ರಮುಖ ಬೇಡಿಕೆಗಳು:

DAPC ವತಿಯಿಂದ ಮಂಡಿಸಲಾದ ಪ್ರಮುಖ ಬೇಡಿಕೆಗಳ ಪಟ್ಟಿ ಇಲ್ಲಿದೆ:

  1. ಆರ್ಥಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿ:

* KCCDCL (ಕ್ರೈಸ್ತ ಅಭಿವೃದ್ಧಿ ನಿಗಮ): ನಿಗಮಕ್ಕೆ ₹500 ಕೋಟಿ ಹೆಚ್ಚುವರಿ ಅನುದಾನ ನೀಡಬೇಕು ಮತ್ತು ಕಳೆದ ಸಾಲಿನ ಬಾಕಿ ಇರುವ ₹165 ಕೋಟಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು.

*ಕ್ರೈಸ್ತ ಅಭಿವೃದ್ಧಿ ನಿಗಮದಲ್ಲಿ ಪ್ರೊಟೆಸ್ಟಂಟ್ ಸಮುದಾಯಕ್ಕೆ ಸಮರ್ಪಕ ಪ್ರತಿನಿಧಿತ್ವ  ನೀಡಬೇಕು.

* ಕ್ರೈಸ್ತ ಭವನ: ಬೆಂಗಳೂರಿನಲ್ಲಿ ಅತ್ಯಾಧುನಿಕ ‘ಕ್ರೈಸ್ತ ಭವನ’ ಸ್ಥಾಪಿಸಬೇಕು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಬೇಕು.

* ಸ್ಮಶಾನ ಭೂಮಿ: ರಾಜ್ಯಾದ್ಯಂತ ಕ್ರೈಸ್ತರಿಗೆ ಹೊಸ ಸ್ಮಶಾನ ಭೂಮಿ ಒದಗಿಸಬೇಕು ಮತ್ತು ಈಗಿರುವ ಸ್ಮಶಾನಗಳನ್ನು ಸರ್ಕಾರದ ಸುಪರ್ದಿಗೆ ಪಡೆಯಬೇಕು.

  1. ಮೀಸಲಾತಿ ಮತ್ತು ಶಿಕ್ಷಣ:

* ಕ್ರೈಸ್ತ ಸಮುದಾಯಕ್ಕೆ ಪ್ರತ್ಯೇಕ 2C ಮೀಸಲಾತಿ ವರ್ಗವನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಆಯೋಗವು ತಕ್ಷಣ ಕ್ರಮ ಕೈಗೊಳ್ಳಬೇಕು.

  1. ಧಾರ್ಮಿಕ ಸ್ವಾತಂತ್ರ್ಯ ಮತ್ತು ಭದ್ರತೆ:

* ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಧರ್ಮಾಂತರ ವಿರೋಧಿ ಕಾನೂನನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.

* ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುವ ದಾಳಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ನೀಡಲಾಗುತ್ತಿರುವ ಅಡ್ಡಿಗಳನ್ನು ತಡೆಯಲು ಬಿಗಿಯಾದ ಕಾನೂನು ಕ್ರಮ ಕೈಗೊಳ್ಳಬೇಕು.

  1. ಕಲ್ಯಾಣ ಯೋಜನೆಗಳು:

* ಪಾಸ್ಟರ್‌ಗಳಿಗೆ (ಧರ್ಮಗುರುಗಳಿಗೆ) ಮಾಸಿಕ ಗೌರವ ಧನ ಮತ್ತು ಸರ್ಕಾರಿ ಗುರುತಿನ ಚೀಟಿ ವಿತರಿಸಬೇಕು.

* ಎಲ್ಲಾ ಪಾಸ್ಟರ್‌ಗಳಿಗೆ ‘ಯಶಸ್ವಿನಿ’ ಆರೋಗ್ಯ ವಿಮೆ ಸೌಲಭ್ಯ ಅನ್ವಯಿಸಬೇಕು.

* ಯೆರೂಸಲೇಮ್ ಯಾತ್ರೆಗೆ ಆರ್ಥಿಕ ಸಹಾಯ ಮತ್ತು ಸಮುದಾಯಕ್ಕೆ ವಾರ್ಷಿಕ ವಿಶೇಷ ಅನುದಾನ ನೀಡಬೇಕು.

ಪ್ರೊಟೆಸ್ಟಂಟ್ ಸಮುದಾಯವು ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂಬ ಆಶಯದೊಂದಿಗೆ DAPC ರಾಜ್ಯಾದ್ಯಂತ ಜಾಗೃತಿ ಮೂಡಿಸಲು ನಿರ್ಧರಿಸಿದೆ.

You may also like

News

ಮಂಗಳೂರು ಪ್ರೆಸ್ ಕ್ಲಬ್‌ನ ನವೀಕೃತ ‘ಅಕ್ಷರ ಸಭಾಂಗಣ’ ಉದ್ಘಾಟನೆ

ಮಾಧ್ಯಮದ ನೈತಿಕ ಮೌಲ್ಯಗಳ ರಕ್ಷಣೆ ಪತ್ರಕರ್ತರ ಹೊಣೆ – ಡಾ. ಎಂ. ಮೋಹನ್ ಆಳ್ವ ರಾಜಕೀಯ, ಶಿಕ್ಷಣ, ಆರೋಗ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮೌಲ್ಯಗಳು ಮತ್ತು ಪಾವಿತ್ರ್ಯತೆ
News

ಗಂಜಿಮಠ ಗ್ರಾಮ ಪಂಚಾಯತ್ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ

ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವುದೇ ಗ್ರಾಮ ಪಂಚಾಯತ್ ವ್ಯವಸ್ಥೆಯ ಉದ್ದೇಶ – ಡಾ. ಭರತ್ ಶೆಟ್ಟಿ ಗುರುಪುರ ಗಂಜಿಮಠ ಗ್ರಾಮ ಪಂಚಾಯತ್‌ನ ನೂತನ ಕಟ್ಟಡ ನಿರ್ಮಾಣಕ್ಕೆ

You cannot copy content of this page