July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಖಾಕಿ ಪಡೆಗೆ ಮರಣಶಾಸನ: ತಂದೆ-ಮಗನ ಲಾಕಪ್ ಡೆತ್ ಪ್ರಕರಣದ 9 ಪೊಲೀಸರಿಗೆ ಗಲ್ಲು ಶಿಕ್ಷೆ!

ದೇಶವನ್ನೇ ಬೆಚ್ಚಿಬೀಳಿಸಿದ್ದ ತಮಿಳುನಾಡಿನ ಸಾತನ್‌ಕುಳಂನ ತಂದೆ-ಮಗನ ಕಸ್ಟಡಿ ಸಾವು ಪ್ರಕರಣದಲ್ಲಿ ಮಧುರೈ ಜಿಲ್ಲಾ ನ್ಯಾಯಾಲಯ ಎಪ್ರಿಲ್ 6ರಂದು ಸೋಮವಾರ ಐತಿಹಾಸಿಕ ತೀರ್ಪು ನೀಡಿದೆ. ಅಮಾನವೀಯವಾಗಿ ವರ್ತಿಸಿ ಇಬ್ಬರ ಸಾವಿಗೆ ಕಾರಣರಾದ 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಜಿ. ಮುತ್ತುಕುಮಾರನ್ ಅವರು ಆದೇಶ ಹೊರಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

2020ರ ಜೂನ್‌ನಲ್ಲಿ ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೊಬೈಲ್ ಅಂಗಡಿ ತೆರೆದಿದ್ದಾರೆ ಎಂಬ ಸಣ್ಣ ಕಾರಣಕ್ಕೆ ಪೊಲೀಸರು ಮರದ ವ್ಯಾಪಾರಿ 58 ವರ್ಷ ಪ್ರಾಯದ ಜಯರಾಜ್ ಮತ್ತು ಅವರ ಮಗ 31 ವರ್ಷ ಪ್ರಾಯದ ಬೆನಿಕ್ಸ್ ಅವರನ್ನು ಬಂಧಿಸಿದ್ದರು. ಠಾಣೆಯಲ್ಲಿ ಇಡೀ ರಾತ್ರಿ ಇಬ್ಬರನ್ನೂ ಅತ್ಯಂತ ಕ್ರೂರವಾಗಿ ಥಳಿಸಲಾಗಿತ್ತು. ತೀವ್ರ ರಕ್ತಸ್ರಾವ ಹಾಗೂ ಆಂತರಿಕ ಗಾಯಗಳಿಂದಾಗಿ ಜೂನ್ 22 ಮತ್ತು 23ರಂದು ಆಸ್ಪತ್ರೆಯಲ್ಲಿ ಇಬ್ಬರೂ ಮೃತಪಟ್ಟಿದ್ದರು.

ನ್ಯಾಯಾಲಯದ ಪ್ರಮುಖ ಅಂಶಗಳು:

* ಅಪರೂಪದಲ್ಲಿ ಅಪರೂಪದ ಪ್ರಕರಣ: ರಕ್ಷಿಸಬೇಕಾದವರೇ ಭಕ್ಷಕರಾದ ಈ ಘಟನೆಯನ್ನು ನ್ಯಾಯಾಲಯವು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಪರಿಗಣಿಸಿದೆ.

* ಸಮಾನ ಅಪರಾಧಿಗಳು: “ಯಾರು ಹೆಚ್ಚು ಹೊಡೆದರು ಎಂಬುದು ಮುಖ್ಯವಲ್ಲ, ಈ ಕೃತ್ಯದಲ್ಲಿ ಎಲ್ಲರೂ ಸಮಾನವಾಗಿ ಭಾಗಿಗಳಾಗಿದ್ದಾರೆ” ಎಂದು ಕೋರ್ಟ್ ಹೇಳಿದೆ.

* ಕಠಿಣ ಸಂದೇಶ: ಭವಿಷ್ಯದಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಇಂತಹ ದುಸ್ಸಾಹಸಕ್ಕೆ ಕೈಹಾಕಬಾರದು ಎಂಬ ಎಚ್ಚರಿಕೆಯನ್ನು ಈ ತೀರ್ಪು ನೀಡಿದೆ.

* ದಂಡದ ಮೊತ್ತ: ಮರಣದಂಡನೆಯ ಜೊತೆಗೆ, ಅಪರಾಧಿಗಳಿಗೆ ಒಟ್ಟು 1.40 ಕೋಟಿ ರೂಪಾಯಿ ಭಾರಿ ದಂಡವನ್ನೂ ವಿಧಿಸಲಾಗಿದ್ದು, ಈ ಹಣವನ್ನು ಸಂತ್ರಸ್ತ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ಸೂಚಿಸಲಾಗಿದೆ.

ಶಿಕ್ಷೆಗೊಳಗಾದವರು:

  1. ಶ್ರೀಧರ್ (ಇನ್ಸ್‌ಪೆಕ್ಟರ್ – ಇವರಿಗೆ ಎರಡು ಬಾರಿ ಗಲ್ಲು ಶಿಕ್ಷೆ ಹಾಗೂ 84 ಲಕ್ಷ ರೂಪಾಯಿ ದಂಡ)
  2. ಬಾಲಕೃಷ್ಣನ್ (ಸಬ್ ಇನ್ಸ್‌ಪೆಕ್ಟರ್)
  3. ರಘು ಗಣೇಶ್ (ಸಬ್ ಇನ್ಸ್‌ಪೆಕ್ಟರ್)
  4. ಮುರುಗನ್ (ಹೆಡ್ ಕಾನ್ಸ್‌ಟೆಬಲ್)
  5. ಸಾಮಿ ದೊರೈ (ಹೆಡ್ ಕಾನ್ಸ್‌ಟೆಬಲ್)
  6. ಮುತ್ತುರಾಜ್ (ಕಾನ್ಸ್‌ಟೆಬಲ್)
  7. ಚೆಲ್ಲದೊರೈ (ಕಾನ್ಸ್‌ಟೆಬಲ್)
  8. ಥಾಮಸ್ ಫ್ರಾನ್ಸಿಸ್ (ಕಾನ್ಸ್‌ಟೆಬಲ್)
  9. ವೈಲುಮುತ್ತು (ಕಾನ್ಸ್‌ಟೆಬಲ್)

ಪ್ರಕರಣದ ಮತ್ತೊಬ್ಬ ಆರೋಪಿ ಪೌಲ್‌ದೊರೈ ವಿಚಾರಣೆ ನಡೆಯುತ್ತಿರುವಾಗಲೇ ಕೋವಿಡ್‌ನಿಂದ ಮೃತಪಟ್ಟಿದ್ದರು.

“ನ್ಯಾಯದ ಜಯ”: ಆರು ವರ್ಷಗಳ ಸುದೀರ್ಘ ಹೋರಾಟದ ನಂತರ ಜಯರಾಜ್ ಅವರ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ. ಈ ತೀರ್ಪು ಪೊಲೀಸ್ ಇಲಾಖೆಯಲ್ಲಿನ ದೌರ್ಜನ್ಯಗಳ ವಿರುದ್ಧ ಸಾಂಸ್ಥಿಕ ಬದಲಾವಣೆಗೆ ನಾಂದಿಯಾಗಲಿ ಎಂದು ಮಾನವ ಹಕ್ಕುಗಳ ಹೋರಾಟಗಾರರು ಆಶಿಸಿದ್ದಾರೆ.

You may also like

News

SJEC’s Nikhil A. Poojary to Represent India at International Yoga Championship

Saint Joseph Engineering College (SJEC) Vamanjoor has added another feather to its cap with the outstanding achievement of Nikhil A.
News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ

You cannot copy content of this page