October 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉಡುಪಿ ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರಾಗಿ ಅತೀ ಗೌರವಾನ್ವಿತ ಡಾ. ಲೆಸ್ಲಿ ಡಿಸೋಜ ಏಪ್ರಿಲ್ 20ರಂದು ಅಧಿಕಾರ ಸ್ವೀಕಾರ

ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಅದ್ಧೂರಿ ಪೀಠಾರೋಹಣ

ಪೋಪ್ ಅವರ ವ್ಯಾಟಿಕನ್ ರಾಯಭಾರಿ, ಕಾರ್ಡಿನಲ್, ಆರ್ಚ್ ಬಿಷಪ್, ವಿವಿಧ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಗಣ್ಯಾತಿಗಣ್ಯರು ಭವ್ಯ ಕಾರ್ಯಕ್ರಮದಲ್ಲಿ ಭಾಗಿ

ಉಡುಪಿ ಕ್ಯಾಥೋಲಿಕ್ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಜಗದ್ಗುರು ಪೋಪ್ ಲಿಯೋ XIV ಇವರಿಂದ ನೇಮಕಗೊಂಡಿರುವ ಅತೀ ಗೌರವಾನ್ವಿತ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭವು ಇದೇ ಏಪ್ರಿಲ್ 20ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿ ಧರ್ಮಕ್ಷೇತ್ರದ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ಜರುಗಲಿದೆ. ಈ ಕುರಿತು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ ಫಾದರ್ ಡೆನಿಸ್ ಡೆಸಾ ಅವರು ಏಪ್ರಿಲ್ 15ರಂದು ಬುಧವಾರ ಉಡುಪಿ ಶೋಕಮಾತಾ ಚರ್ಚ್ ಇಲ್ಲಿನ ಆವೆ ಮರಿಯಾ ಸಂಭಾಂಗಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಭವ್ಯ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಧಾರ್ಮಿಕ ವಿಧಿವಿಧಾನಗಳ ವಿವರ:

ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಹಾಗೂ FABC ಮತ್ತು CCBI ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಅವರ ನೇತೃತ್ವದಲ್ಲಿ ನೂತನ ಧರ್ಮಾಧ್ಯಕ್ಷರ ಅಭಿಷೇಕ ಕಾರ್ಯಕ್ರಮ ನಡೆಯಲಿದೆ. ಈ ಪವಿತ್ರ ಬಲಿಪೂಜೆಯಲ್ಲಿ ಬೆಂಗಳೂರು ಮಹಾಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಮಚಾದೊ ಮತ್ತು ನಿರ್ಗಮಿತ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಸಹ-ಅಭಿಷೇಕಕಾರರಾಗಿ ಪಾಲ್ಗೊಳ್ಳಲಿದ್ದಾರೆ.

ಗಣ್ಯರ ಉಪಸ್ಥಿತಿ:

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಭಾರತ ಮತ್ತು ನೇಪಾಳ ಆಪೊಸ್ತೊಲಿಕ್ ನುನ್ಸಿಯೋ (ಪೋಪ್ ಅವರ ವ್ಯಾಟಿಕನ್ ರಾಯಭಾರಿ) ಅತೀ ವಂದನೀಯ ಡಾ. ಲಿಯೋಪೋಲ್ಡೊ ಗಿರೆಲ್ಲಿ, ವಿವಿಧ ಮಹಾ ಧರ್ಮಾಧ್ಯಕ್ಷರು, ವಿವಿಧ ಧರ್ಮಕ್ಷೇತ್ರಗಳ  ಧರ್ಮಾಧ್ಯಕ್ಷರು, ಧರ್ಮಗುರುಗಳು, ಧಾರ್ಮಿಕ ಸಹೋದರ ಸಹೋದರಿಯರು, ರಾಜಕೀಯ ನಾಯಕರು, ವಿವಿಧ ಸಮುದಾಯಗಳ ಗಣ್ಯರು ಹಾಗೂ ಸಾವಿರಾರು ಭಕ್ತರು ಸೇರಿದಂತೆ ಸುಮಾರು 5,000ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಧಾರ್ಮಿಕ ಕಾರ್ಯಕ್ರಮದ ನಂತರ ನಡೆಯುವ ಪೌರ ಸನ್ಮಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಶಾಸಕ ಯಶಪಾಲ್ ಸುವರ್ಣ ಅವರು ಜಿಲ್ಲೆಯ ಜನತೆಯ ಪರವಾಗಿ ನೂತನ ಧರ್ಮಾಧ್ಯಕ್ಷರನ್ನು ಗೌರವಿಸಲಿದ್ದಾರೆ.

ಅತೀ ವಂದನೀಯ ಪರಮ ಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರ 13 ವರ್ಷಗಳ ಸೇವೆ:

2012ರಿಂದ ಉಡುಪಿ ಧರ್ಮಕ್ಷೇತ್ರದ ಮೊದಲ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪರಮ ಪೂಜ್ಯ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಇದೀಗ ನಿವೃತ್ತರಾಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಸರ್ವಧರ್ಮ ಸಮನ್ವಯತೆ, ಶಿಕ್ಷಣ ಮತ್ತು ಬಡವರ ಏಳಿಗೆಗಾಗಿ ಅವರು ಸಲ್ಲಿಸಿದ ಸೇವೆ ಅಪಾರವಾದುದು.

ನೂತನ ಧರ್ಮಾಧ್ಯಕ್ಷರ ಕಿರು ಪರಿಚಯ:

* ಜನನ: 1962 ಆಗಸ್ಟ್ 19, ಎರ್ಮಾಳು (ಉಡುಪಿ ಜಿಲ್ಲೆ).

* ಶಿಕ್ಷಣ: ಮೈಸೂರು ವಿವಿಯಿಂದ ಪದವಿ, ಬೆಲ್ಜಿಯಂನ ಲೂವನ್ ವಿವಿಯಿಂದ ನೈತಿಕ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್.

* ವೃತ್ತಿಜೀವನ: 1990ರಲ್ಲಿ ಧರ್ಮಗುರುಗಳಾಗಿ ದೀಕ್ಷೆ. ಮಂಗಳೂರು ಮತ್ತು ಉಡುಪಿಯ ವಿವಿಧ ಚರ್ಚ್‌ಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ.

* ನೇಮಕಾತಿ: 2026 ಜನವರಿ 31ರಂದು ಪೋಪ್ ಲಿಯೋ XIV ಅವರಿಂದ ನೇಮಕ.

ಉಡುಪಿ ಧರ್ಮಕ್ಷೇತ್ರದ ಹರವು:

2012ರಲ್ಲಿ ಸ್ಥಾಪನೆಯಾದ ಈ ಧರ್ಮಕ್ಷೇತ್ರವು ಉಡುಪಿ ಜಿಲ್ಲೆಯ ಏಳು ತಾಲೂಕುಗಳನ್ನು ಒಳಗೊಂಡಿದ್ದು, 51 ಚರ್ಚ್‌ಗಳು ಹಾಗೂ 60,000ಕ್ಕೂ ಅಧಿಕ ಭಕ್ತರನ್ನು ಹೊಂದಿದೆ. ಶಿಕ್ಷಣ ಮತ್ತು ಸಮಾಜಸೇವಾ ಕ್ಷೇತ್ರಗಳಲ್ಲಿ ಈ ಧರ್ಮಕ್ಷೇತ್ರವು ಜಿಲ್ಲೆಯಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಉಡುಪಿ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ, ಕಾರ್ಯಕ್ರಮದ ಸಂಚಾಲಕರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ಪ್ರಧಾನ ಧರ್ಮಗುರುಗಳಾದ ವಂದನೀಯ ಫರ್ಡಿನಾಂಡ್ ಗೊನ್ಸಾಲ್ವಿಸ್, ಧರ್ಮಕ್ಷೇತ್ರದ ಕುಲಪತಿಗಳಾದ ಅತೀ ವಂದನೀಯ ಫಾದರ್ ಸ್ಟೀವನ್ ಡಿಸೋಜ ಹಾಗೂ ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ಉಪಸ್ಥಿತರಿದ್ದರು.

You may also like

News

CODP Organises October Camp in Mangaluru to Promote Children’s Holistic Development

The Child Sponsorship Programme (CSP) of the Canara Organisation for Development and Peace (CODP), Mangaluru, organised its October Camp for
News

‘ಪೊಲೀಸ್–ATS’ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಬೆದರಿಕೆ – ಪುತ್ತೂರಿನ ವ್ಯಕ್ತಿಗೆ ₹1.31 ಕೋಟಿ ವಂಚನೆ

ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿಗಳು ಮುಂಬೈ ಪೊಲೀಸ್ ಹಾಗೂ ATS ಅಧಿಕಾರಿಗಳೆಂದು ಪರಿಚಯಿಸಿಕೊಂಡು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ₹1,31,50,000 ಹಣ ವಂಚಿಸಿರುವ ಘಟನೆ ನಡೆದಿದೆ. ಆರೋಪಿಗಳು

You cannot copy content of this page