July 14, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉಡುಪಿ ಧರ್ಮಕ್ಷೇತ್ರಕ್ಕೆ ನೂತನ ಸಾರಥಿಯಾಗಿ ಪರಮ ಪೂಜ್ಯ ಅತೀ ವಂದನೀಯ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅಧಿಕಾರ ಸ್ವೀಕಾರ

ಕಲ್ಯಾಣಪುರ ಮಿಲಾಗ್ರಿಸ್ ಮೈದಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವೈಭವದ ಪಟ್ಟಾಭಿಷೇಕ

ಪ್ರೀತಿ ಮತ್ತು ಸೇವೆಯ ಚರ್ಚ್ ನಿರ್ಮಾಣಕ್ಕೆ ಕರೆ ನೀಡಿದ ನೂತನ ಬಿಷಪ್

ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಪ್ರಧಾನಾಲಯದ ಆವರಣದಲ್ಲಿ ನಡೆದ ಅತ್ಯಂತ ಪವಿತ್ರ ಹಾಗೂ ಐತಿಹಾಸಿಕ ಸಮಾರಂಭದಲ್ಲಿ, ಪರಮ ಪೂಜ್ಯ ಅತೀ ವಂದನೀಯ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರು ಉಡುಪಿ ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರಾಗಿ ಇಂದು ಏಪ್ರಿಲ್ 20ರಂದು ಸೋಮವಾರ ಅಧಿಕಾರ ಸ್ವೀಕಾರ ಮಾಡಿದರು. ಈ ಮೂಲಕ ಉಡುಪಿ ಧರ್ಮಕ್ಷೇತ್ರದ ಆಧ್ಯಾತ್ಮಿಕ ಸಾರಥ್ಯವು ಹೊಸ ನಾಯಕತ್ವಕ್ಕೆ ಹಸ್ತಾಂತರಗೊಂಡಿತು.

ಧಾರ್ಮಿಕ ವಿಧಿವಿಧಾನಗಳ ವೈಭವ:

ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಹಾಗೂ FABC ಮತ್ತು CCBI ಇದರ ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಅವರು ಮುಖ್ಯ ಅಭಿಷೇಕಕರಾಗಿ ಧರ್ಮಾಧ್ಯಕ್ಷರ ಪಟ್ಟಾಭಿಷೇಕದ ವಿಧಿವಿಧಾನಗಳನ್ನು ನೆರವೇರಿಸಿದರು. ಬೆಂಗಳೂರಿನ ಮಹಾ ಧರ್ಮಪ್ರ್ಯಾಂತ್ಯದ ಮಹಾಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಮಚಾದೊ ಮತ್ತು ಪ್ರೇಷಿತ ಆಡಳಿತಾಧಿಕಾರಿ ಪರಮ ಪೂಜ್ಯ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಸಹ-ಅಭಿಷೇಕಕರಾಗಿ ಭವ್ಯ ಸಂಪ್ರದಾಯಕ್ಕೆ ಸಾಕ್ಷಿಯಾದರು. ಪವಿತ್ರ ತೈಲದ ಅಭಿಷೇಕ, ಉಂಗುರ ಧಾರಣೆ ಮತ್ತು ಅಧಿಕಾರ ದಂಡದ ಹಸ್ತಾಂತರದೊಂದಿಗೆ ನೂತನ ಧರ್ಮಾಧ್ಯಕ್ಷರನ್ನು ಅಧಿಕೃತವಾಗಿ ಪಟ್ಟಾಭಿಷೇಕಗೊಳಿಸಲಾಯಿತು.

ಗಣ್ಯರ ಸಮಾಗಮ:

ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುನ್ಸಿಯೋ ಲಿಯೋಪೋಲ್ಡೊ ಗಿರೆಲ್ಲಿ, 30ಕ್ಕೂ ಹೆಚ್ಚು ಬಿಷಪ್‌ಗಳು, 300ಕ್ಕೂ ಹೆಚ್ಚು ಧರ್ಮಗುರುಗಳು ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 6,000ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಶಾಸಕ ಯಶಪಾಲ್ ಸುವರ್ಣ, MLC ಐವನ್ ಡಿಸೋಜ, ಮಾಜಿ ಶಾಸಕರಾದ ವಿನಯ ಕುಮಾರ್ ಸೊರಕೆ, ಜೆ.ಆರ್. ಲೋಬೊ, ಅಭಯ್ ಚಂದ್ರ ಜೈನ್, ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತಣ್ಣ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, MCC ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ತೆಲಿನೊ, ಮಂಗಳೂರಿನ ಪ್ರಖ್ಯಾತ ವಕೀಲರಾದ ಎಂ.ಪಿಂ. ನೊರೊನ್ಹಾ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಉಪಸ್ಥಿತರಿದ್ದು ನೂತನ ಬಿಷಪ್ ಅವರಿಗೆ ಶುಭ ಹಾರೈಸಿದರು.

ಸವಾಲುಗಳಿಗೆ ಸ್ಪಂದಿಸುವ ನಾಯಕತ್ವ:

ಮಂಗಳೂರು ಬಿಷಪ್ ಡಾ. ಪೀಟರ್ ಪಾಲ್ ಸಲ್ಡಾನ್ಹಾ ತಮ್ಮ ಪ್ರವಚನದಲ್ಲಿ, “ಧರ್ಮಾಧ್ಯಕ್ಷರು ದೇವರ ಕುಟುಂಬದ ಪಿತೃ ಸ್ವರೂಪಿಗಳು. ಸಮಾಜದಲ್ಲಿ ಸುವಾರ್ತೆಯ ಸಾರವನ್ನು ಹರಡುವುದು ಅವರ ಮುಖ್ಯ ಕರ್ತವ್ಯ” ಎಂದರು. ಅಪೊಸ್ತೋಲಿಕ್ ನುನ್ಸಿಯೋ ಅವರು ಮಾತನಾಡುತ್ತಾ, “ಧರ್ಮಗುರುಗಳ ಸಂಖ್ಯೆ ಇಳಿಮುಖವಾಗುತ್ತಿರುವ ಮತ್ತು ಯುವಕರ ವಲಸೆಯಂತಹ ಇಂದಿನ ಸವಾಲುಗಳನ್ನು ನೂತನ ಧರ್ಮಾಧ್ಯಕ್ಷರು ಸಮರ್ಥವಾಗಿ ಎದುರಿಸಲಿ” ಎಂದು ಆಶಿಸಿದರು.

ಪ್ರೀತಿ ಮತ್ತು ಸೇವೆಯ ಚರ್ಚ್ ನಿರ್ಮಾಣಕ್ಕೆ ಕರೆ ನೀಡಿದ ನೂತನ ಬಿಷಪ್:

ತಮ್ಮ ಹೃದಯಸ್ಪರ್ಶಿ ಭಾಷಣದಲ್ಲಿ ಪರಮ ಪೂಜ್ಯ ಅತೀ ವಂದನೀಯ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರು, “ನಾನು ನನ್ನ ಸ್ವಂತ ಶಕ್ತಿಯಿಂದ ಅಲ್ಲ, ದೇವರ ಮೇಲಿನ ನಂಬಿಕೆಯಿಂದ ಈ ಜವಾಬ್ದಾರಿ ಸ್ವೀಕರಿಸುತ್ತಿದ್ದೇನೆ. ಎಲ್ಲರೂ ಸೇರಿ ಪ್ರೀತಿ ಮತ್ತು ಸೇವೆಯ ಚರ್ಚ್ ನಿರ್ಮಿಸೋಣ. ಉಡುಪಿ ಜಿಲ್ಲೆಯಲ್ಲಿ ಸರ್ವ ಧರ್ಮ ಸಮನ್ವಯತೆಯನ್ನು ಕಾಪಾಡಲು ನಾನು ಶ್ರಮಿಸುತ್ತೇನೆ” ಎಂದು ವಿನಮ್ರತೆಯಿಂದ ನುಡಿದರು.

ನೂತನ ಬಿಷಪ್ ಅವರನ್ನು ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಉಡುಪಿ ಧರ್ಮಕ್ಷೇತ್ರದ ಪರವಾಗಿ ಪ್ರೇಷಿತ ಆಡಳಿತಾಧಿಕಾರಿ ಪರಮ ಪೂಜ್ಯ ಅತೀ ವಂದನೀಯ ಡಾ. ಜೆರಾಲ್ಡ್ ಐಜಾಕ್ ಲೋಬೊ ಅವರು ಸನ್ಮಾನಿಸಿ ಗೌರವಿಸಿದರು.

ವಂದನಾರ್ಪಣೆ:

ಕಾರ್ಯಕ್ರಮದಲ್ಲಿ ಉಡುಪಿ ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಂಚಾಲಕರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಫಾದರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಧಾರ್ಮಿಕ ವಿಧಿ ವಿಧಾನಗಳ ಕಾರ್ಯಕ್ರಮದ ನಿರ್ವಹಣೆಯನ್ನು ವಂದನೀಯ ಫಾದರ್ ವಿಲ್ಸನ್ ಡಿಸೋಜ ಹಾಗೂ ಸಭಾ ಕಾರ್ಯಕ್ರಮದ ಸುಂದರ ನಿರ್ವಹಣೆಯನ್ನು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಂದನೀಯ ಫಾದರ್ ಡೆನಿಸ್ ಡೆಸಾ ಅವರು ನೆರವೇರಿಸಿದರು. ವಂದನೀಯ ಫಾದರ್ ರೋಶನ್ ಡಿಸೋಜ ವಂದನಾರ್ಪಣೆ ಗೈದರು.

You may also like

News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale
News

ರೊಜಾರಿಯೊ ಕ್ಯಾಥೆಡ್ರಲ್‌ನಲ್ಲಿ ಹೃದಯ ಆರೋಗ್ಯ ಜಾಗೃತಿ ಹಾಗೂ ಸಿಪಿಆರ್ ತರಬೇತಿ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ರೊಜಾರಿಯೊ ಕ್ಯಾಥೆಡ್ರಲ್‌ನ ಆರೋಗ್ಯ ಆಯೋಗವು ಚರ್ಚ್ ಪಾಲನಾ ಸಮಿತಿಯ 21 ಆಯೋಗಗಳ ಸಹಯೋಗದಲ್ಲಿ “A Healthy Heart for a Blessed Life”

You cannot copy content of this page