October 12, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮತಾಂತರ ವಿರೋಧಿ ಕಾಯ್ದೆ ರದ್ದತಿಗೆ ಆಗ್ರಹ: ಮೇ 30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕ್ರೈಸ್ತ ಸಂಘಟನೆಗಳ ಬೃಹತ್ ಪ್ರತಿಭಟನೆ

ಸಂಪೂರ್ಣ ಬೆಂಬಲವನ್ನು ಘೋಷಿಸಿದ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚಸ್’ (DAPC)

ಕರ್ನಾಟಕದ ಮತಾಂತರ ವಿರೋಧಿ ಕಾಯ್ದೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಹಾಗೂ ಕ್ರೈಸ್ತ ಸಮುದಾಯದ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಬರುವ ಮೇ 30ರಂದು ಬೆಳಿಗ್ಗೆ 11:00 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಕ್ರೈಸ್ತ ಪಂಗಡಗಳು ಮತ್ತು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ಆಯೋಜಿಸಲಾಗಿದೆ. ಈ ಮಹಾ ಪ್ರತಿಭಟನೆಗೆ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚಸ್’ (DAPC) ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.

ಈ ಕುರಿತು ಮಾತನಾಡಿರುವ ಆರ್ಚ್‌ಬಿಷಪ್ ಡಾ. ವಿನೋದ್ ಎಂ. ಚಾಕೊ ಅವರು, “ಪ್ರಸ್ತುತ ರಾಜ್ಯ ಸರ್ಕಾರ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವುದಕ್ಕೆ ಸಮುದಾಯ ಕೃತಜ್ಞತೆ ಸಲ್ಲಿಸುತ್ತದೆ. ಆದರೆ, ಮತಾಂತರ ವಿರೋಧಿ ಕಾಯ್ದೆಯನ್ನು ಕೆಲವು ಧಾರ್ಮಿಕ ಮೂಲಭೂತವಾದಿ ಗುಂಪುಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ರಾಜ್ಯದಾದ್ಯಂತ ಚರ್ಚುಗಳು, ಪಾಸ್ಟರ್‌ಗಳು, ಫಾದರ್‌ಗಳು, ಭಗಿನಿಯರು ಹಾಗೂ ಶೈಕ್ಷಣಿಕ ಮತ್ತು ಸೇವಾ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸ್ವೀಕಾರಾರ್ಹ“ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಎತ್ತಿಹಿಡಿಯಲು ಎಲ್ಲಾ ಪ್ರೊಟೆಸ್ಟೆಂಟ್, ಪೆಂತೆಕೋಸ್ತ್ ಮತ್ತು ಸ್ವತಂತ್ರ ಚರ್ಚುಗಳು ಒಟ್ಟಾಗಿ ಧ್ವನಿ ಎತ್ತಬೇಕೆಂದು ಅವರು ಕರೆ ನೀಡಿದ್ದಾರೆ.

ಸರ್ಕಾರದ ಭರವಸೆ ಈಡೇರಿಲ್ಲ – ರೆವರೆಂಡ್ ಸುನಿಲ್ ವಿ. ಜೇಕಬ್ ಬೇಸರ:

ಝೋನಲ್ ಬಿಷಪ್ ರೆವರೆಂಡ್ ಸುನಿಲ್ ವಿ. ಜೇಕಬ್ ಮಾತನಾಡಿ, “ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಈ ಧರ್ಮಾಂತರ ವಿರೋಧಿ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಚಾರದ ವೇಳೆ ಭರವಸೆ ನೀಡಿತ್ತು. ಆದರೆ ಹೊಸ ಸರ್ಕಾರ ರಚನೆಯಾಗಿ ಮೂರು ವರ್ಷಗಳಾಗುತ್ತಾ ಬಂದರೂ ಇಂದಿಗೂ ಕಾಯ್ದೆಯನ್ನು ರದ್ದುಪಡಿಸದಿರುವುದು ವಿಷಾದನೀಯ“ ಎಂದರು. ಈಗಲಾದರೂ ಕ್ರೈಸ್ತ ಸಮುದಾಯ ಒಗ್ಗಟ್ಟಿನಿಂದ ನಿಂತು ಧಾರ್ಮಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಿಕೊಳ್ಳಬೇಕಾದ ಸಮಯ ಬಂದಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಸಾಮೂಹಿಕ ನೇತೃತ್ವದಲ್ಲಿ ಪ್ರತಿಭಟನೆ:

ಈ ಐತಿಹಾಸಿಕ ಪ್ರತಿಭಟನೆಯು ಯಾವುದೇ ಒಂದು ಸಂಸ್ಥೆಗೆ ಸೀಮಿತವಾಗಿರದೆ, ಸಾಮೂಹಿಕ ನೇತೃತ್ವದಲ್ಲಿ ನಡೆಯುತ್ತಿದೆ. ಬೆಂಗಳೂರು ಮಹಾಧರ್ಮಪ್ರಾಂತ್ಯ, ಕ್ಯಾಥೋಲಿಕ್ ಧರ್ಮಪ್ರಾಂತ್ಯಗಳು, ಪೆಂತೆಕೋಸ್ತ್ ಮತ್ತು ಸ್ವತಂತ್ರ ಚರ್ಚುಗಳು, ಇಂಡಿಯನ್ ಕ್ರಿಸ್ತಿಯನ್ ಯುನಿಟಿ ಫೊರಮ್, ಕರ್ನಾಟಕ ಕ್ರೈಸ್ತ ಸಂಘಟನೆ, ಅಹಿಂದ ಕ್ರಿಸ್ಟಿಯನ್ ವಿಭಾಗ, ಸಿ.ಎಸ್.ಐ (CSI), ಏಂಜೆಲಿಕನ್, ಸೆವೆಂತ್ ಡೇ ಅಡ್ವೆಂಟಿಸ್ಟ್ ಸೇರಿದಂತೆ ರಾಜ್ಯದ ಪ್ರಮುಖ ಕ್ರೈಸ್ತ ಸೇವಾ ಟ್ರಸ್ಟ್‌ಗಳು ಮತ್ತು ಪಾಸ್ಟರ್ಸ್ ಫೆಲೋಶಿಪ್‌ಗಳು ಈ ಹೋರಾಟಕ್ಕೆ ಕೈಜೋಡಿಸಿವೆ.

ರಾಜ್ಯದ ಎಲ್ಲಾ ಚರ್ಚ್ ನಾಯಕರು, ವಿಶ್ವಾಸಿಗಳು ಮತ್ತು ಪಾಸ್ಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಾಂತಿಯುತ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು DAPC ಮನವಿ ಮಾಡಿದೆ.

You may also like

News

ಕಾಜೂರು ಮಖಾಂ ಉರೂಸ್‌ಗೆ ದಿನಾಂಕ ನಿಗದಿ – 2027ರ ಮಾರ್ಚ್ 19ರಿಂದ 28ರವರೆಗೆ

ಸಯ್ಯಿದ್ ಕುಂಬೋಳ್ ತಂಙಳ್ ಅವರಿಂದ ದಿನಾಂಕ ಘೋಷಣೆ – ಉರೂಸ್ ಪೋಸ್ಟರ್ ಬಿಡುಗಡೆ ಬೆಳ್ತಂಗಡಿ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಇತಿಹಾಸ ಪ್ರಸಿದ್ಧ ಆಧ್ಯಾತ್ಮಿಕ
News

ಮಂಡ್ಯ ASP ತಿಮ್ಮಯ್ಯ ಇನ್ನಿಲ್ಲ – ಪೊಲೀಸ್ ಇಲಾಖೆಯಲ್ಲಿ ಶೋಕ

ಉಡುಪಿ, ಮಣಿಪಾಲ, ಕೋಟದಲ್ಲೂ ಸೇವೆ ಸಲ್ಲಿಸಿದ್ದ ಅಧಿಕಾರಿ ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ (ASP) ತಿಮ್ಮಯ್ಯ ಅವರು ಅನಾರೋಗ್ಯದಿಂದ ಇಂದು ಅಕ್ಟೋಬರ್ 10ರಂದು ಶನಿವಾರ ನಿಧನರಾಗಿದ್ದಾರೆ.

You cannot copy content of this page