July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬೋಳಾ ಚರ್ಚ್‌ನಲ್ಲಿ ಹೊಸ ಕೊಂಕಣಿ ಚಿತ್ರಕ್ಕೆ ಅದ್ಧೂರಿ ಚಾಲನೆ

ಪ್ರಾರ್ಥನೆ ಹಾಗೂ ಆಶೀರ್ವಚನ ಸಲ್ಲಿಸಿದ ಚರ್ಚ್ ಪ್ರಧಾನ ಧರ್ಮಗುರು ಫಾದರ್ ರೆಜಿನಾಲ್ಡ್ ಡಿಸೋಜ

ನಾಯಕ ನಟನಾಗಿ ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ಅಧ್ಯಕ್ಷ ವಿಜಯ್ ಅಶ್ವಿನ್ ಕಾರ್ಡೋಜ

ಬೋಳಾದ ಸೈಂಟ್ ಲಾರೆನ್ಸ್ ಚರ್ಚ್ ನಲ್ಲಿ ಮೇ 22ರಂದು ಶುಕ್ರವಾರ ಹೊಸ ಕೊಂಕಣಿ ಚಲನಚಿತ್ರದ ಮುಹೂರ್ತ ಹಾಗೂ ಆಶೀರ್ವಾದ ಸಮಾರಂಭವು ಅತ್ಯಂತ ಶ್ರದ್ಧಾಭಕ್ತಿ, ಸಂಭ್ರಮ ಮತ್ತು ಸಡಗರದ ವಾತಾವರಣದಲ್ಲಿ ನೆರವೇರಿತು. ಧಾರ್ಮಿಕ ಭಾವನೆಗಳೊಂದಿಗೆ ಆರಂಭವಾದ ಈ ಕಾರ್ಯಕ್ರಮ ಚಿತ್ರರಂಗ ಮತ್ತು ಯುವಜನರ ವಲಯದಲ್ಲಿ ವಿಶೇಷ ಕುತೂಹಲ ಮೂಡಿಸಿತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಬೋಳಾ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ರೆಜಿನಾಲ್ಡ್ ಡಿಸೋಜ ಅವರು ಚಿತ್ರದ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಶೀರ್ವಚನ ನೀಡಿದರು. ಬಳಿಕ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ಬೋರ್ಡ್ ಹೊಡೆಯುವ ಮೂಲಕ ಅಧಿಕೃತವಾಗಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ಜೋಯ್ ಸೆಬಾಸ್ಟಿಯನ್ ಅವರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.

‘ಫುಡಾರ್ ಫಿಲ್ಮ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಸಂಸ್ಥಾಪಕ ಹಾಗೂ ನಿರ್ಮಾಪಕರಾದ ವಿಜಯ್ ಅಶ್ವಿನ್ ಕಾರ್ಡೋಜ ಅವರು ಈ ಚಲನ ಚಿತ್ರದ ಮೂಲಕ ನಾಯಕ ನಟನಾಗಿಯೂ ಬೆಳ್ಳಿಪರದೆಗೆ ಭರ್ಜರಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮತ್ತೊಬ್ಬ ನಿರ್ಮಾಪಕರಾದ ಡೆರಿಕ್ ಕುವೆಲ್ಲೊ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದರು.

ಯುವಜನ ಸೇವೆ, ಸಂಘಟನೆ ಮತ್ತು ನಾಯಕತ್ವ:

ಯುವಜನ ಸೇವೆ, ಸಂಘಟನೆ ಮತ್ತು ನಾಯಕತ್ವದಲ್ಲಿ ಈಗಾಗಲೇ ತನ್ನದೇ ಆದ ಗುರುತು ಮೂಡಿಸಿರುವ ವಿಜಯ್ ಅಶ್ವಿನ್ ಕಾರ್ಡೋಜ ಅವರು ಮಂಗಳೂರು ಧರ್ಮಕ್ಷೇತ್ರದಲ್ಲಿ ICYM ಘಟಕದ ಅಧ್ಯಕ್ಷ, ವಲಯ ಅಧ್ಯಕ್ಷ ಸೇರಿದಂತೆ ಹಲವು ಹುದ್ದೆಗಳಲ್ಲಿ ನಿಷ್ಠಾವಂತ ಸೇವೆ ಸಲ್ಲಿಸಿ ಪ್ರಸ್ತುತ ಐಸಿವೈಎಂ ಕೇಂದ್ರೀಯ ಅಧ್ಯಕ್ಷರಾಗಿ ಯುವಜನರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಸಮಾಜಮುಖಿ ಚಿಂತನೆ, ಧಾರ್ಮಿಕ ಬದ್ಧತೆ ಹಾಗೂ ಯುವಕರನ್ನು ಒಗ್ಗೂಡಿಸುವ ನಾಯಕತ್ವದ ಮೂಲಕ ಅವರು ಅನೇಕ ಯುವಕರಿಗೆ ಮಾದರಿಯಾಗಿದ್ದಾರೆ. ಇದೀಗ ಕೊಂಕಣಿ ಚಲನಚಿತ್ರ ಕ್ಷೇತ್ರಕ್ಕೂ ಕಾಲಿಟ್ಟು ನಿರ್ಮಾಪಕ ಹಾಗೂ ನಾಯಕ ನಟನಾಗಿ ಹೊರಹೊಮ್ಮಿರುವುದು ಯುವ ಪ್ರತಿಭೆಗಳಿಗೆ ಹೊಸ ಪ್ರೇರಣೆಯಾಗಿ ಪರಿಣಮಿಸಿದೆ.

ಚಿತ್ರದ ಕಥೆಗಾರ ಹಾಗೂ ನಿರ್ದೇಶಕರಾದ ರೋಲ್ವಿನ್ ಡಿಸೋಜ ಅವರು ಸಹ-ನಿರ್ದೇಶಕರಾದ ಸ್ಟ್ಯಾನಿ ಅಪೋಸ್ ಮತ್ತು ಸುಜಿತ್ ಅವರೊಂದಿಗೆ ಸಂಪೂರ್ಣ ಚಿತ್ರತಂಡವನ್ನು ವೇದಿಕೆಗೆ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಚಿತ್ರದ ತಾಂತ್ರಿಕ ತಂಡ, ಕಲಾ ವಿಭಾಗ, ಪೋಷಕ ನಟರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಅತಿಥಿಗಳಾಗಿ ಆಗಮಿಸಿದ್ದ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಡಿಸೋಜ ಹಾಗೂ ಕಥೊಲಿಕ್ ಸಭಾ ಬೋಳ ಘಟಕದ ಅಧ್ಯಕ್ಷ ಜೋಸೆಫ್ ಕುಟಿನ್ಹಾ ಅವರು ಚಿತ್ರತಂಡಕ್ಕೆ ಶುಭ ಹಾರೈಸಿ, ಕೊಂಕಣಿ ಸಂಸ್ಕೃತಿ ಮತ್ತು ಭಾಷೆಯನ್ನು ಬೆಳೆಸುವ ಇಂತಹ ಪ್ರಯತ್ನಗಳಿಗೆ ಸಮಾಜದ ಬೆಂಬಲ ಅಗತ್ಯವೆಂದು ಅಭಿಪ್ರಾಯಪಟ್ಟರು.

ಸಮಾರಂಭದ ಕೊನೆಯಲ್ಲಿ ನೆರೆದಿದ್ದ ಎಲ್ಲಾ ಅಭಿಮಾನಿಗಳು, ಅತಿಥಿಗಳು ಹಾಗೂ ಚಿತ್ರಪ್ರೇಮಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಹೊಸ ಕನಸು, ಹೊಸ ಪ್ರತಿಭೆಗಳು ಮತ್ತು ಯುವಶಕ್ತಿಯ ಸಂಯೋಜನೆಯಾಗಿ ಆರಂಭವಾದ ಈ ಕೊಂಕಣಿ ಚಿತ್ರವು ಯಶಸ್ಸಿನ ಹೊಸ ಅಧ್ಯಾಯ ಬರೆಯಲಿ ಎಂಬ ಹಾರೈಕೆಗಳು ಎಲ್ಲೆಡೆಯಿಂದ ವ್ಯಕ್ತವಾದವು.

You may also like

News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ
News

Former CSST General Councillor Sr Josephette Passes Away

The Congregation of the Carmelite Sisters of Saint Teresa (CSST) is mourning the passing of Sr Josephette, former General Councillor

You cannot copy content of this page