October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

‘ಟ್ಯಾಬ್ಲೆಟ್ ಆರೀಫ್’ ಕೊಲೆ ಪ್ರಕರಣ – ಸಿಸಿಬಿ ಬಲೆಯಲ್ಲಿ ಮತ್ತೊಬ್ಬ ಆರೋಪಿ

‘ಟೊಪ್ಪಿ ನೌಫಾಲ್‘ ಸಹೋದರನ ಬಂಧನ

ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಉಚ್ಚಿಲ್ ಮುಳ್ಳುಗುಡ್ಡೆಯ ‘ಟ್ಯಾಬ್ಲೆಟ್ ಆರೀಫ್’ ಅಲಿಯಾಸ್ ಆರೀಫ್ ಹುಸೈನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮತ್ತೊಬ್ಬ ಪ್ರಮುಖ ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ. ಮೃತ ರೌಡಿಶೀಟರ್ ‘ಟೊಪ್ಪಿ ನೌಫಾಲ್’ ಸಹೋದರನಾಗಿರುವ ಪಡೀಲ್ ನಿವಾಸಿ 21 ವರ್ಷ ಪ್ರಾಯದ ಮೊಹಮ್ಮದ್ ಇಬ್ರಾಹಿಂ ಸಿನಾನ್ ಅಲಿಯಾಸ್ ಚಿನ್ನು ಬಂಧಿತ ಆರೋಪಿ. ಮೇ 25 ರಂದು ಸಿಸಿಬಿ ಪೊಲೀಸರು ಈತನನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ಲಾನ್ ಮಾಡಿದ್ದು ಫೆಬ್ರವರಿಯಲ್ಲಿ, ಹಣ ಕೊಟ್ಟಿದ್ದು ಈತನೇ!

ಕಳೆದ ಮಾರ್ಚ್ 27 ರಂದು ಬೆಳಗಿನ ಜಾವ ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೈಕ್‌ನಲ್ಲಿ ಹೋಗುತ್ತಿದ್ದ ಆರೀಫ್ ಹುಸೈನ್‌ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ, ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿತ್ತು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು. ಸದ್ಯ ಸಿಸಿಬಿ ನಡೆಸಿರುವ ಆಳವಾದ ತನಿಖೆಯಿಂದ, ಬಂಧಿತ ಆರೋಪಿ ಇಬ್ರಾಹಿಂ ಸಿನಾನ್ ಕಳೆದ ಫೆಬ್ರವರಿಯಲ್ಲೇ ಆರೀಫ್ ಕೊಲೆಗೆ ನಡೆದಿದ್ದ ಸಂಚಿನ ಸಭೆಯಲ್ಲಿ ಭಾಗಿಯಾಗಿದ್ದ ಹಾಗೂ ಕೊಲೆಗಡುಕರಿಗೆ ಹಣಕಾಸಿನ ನೆರವು ನೀಡಿದ್ದ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.

ಹಳೇ ಕ್ರಿಮಿನಲ್ ರೆಕಾರ್ಡ್ಸ್:

ಬಂಧಿತ ಚಿನ್ನು ಕೇವಲ 21 ವರ್ಷದವನಾಗಿದ್ದರೂ ಈಗಾಗಲೇ ದೊಡ್ಡ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಈತನ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ (2025) ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಹಲ್ಲೆ (2024) ಪ್ರಕರಣಗಳು ದಾಖಲಾಗಿವೆ.

‘ಕೋಕಾ‘ ಕಾಯಿದೆಯಡಿ ತನಿಖೆ ತೀವ್ರ:

ಈ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈಗಾಗಲೇ ಮೊಹಮ್ಮದ್ ರಿಫಾತ್ ಆಲಿ, ಇಬ್ರಾಹಿಂ ಖಲೀಲ್, ಅಶ್ಫಕ್ ಅಲಿಯಾಸ್ ಜುಟ್ಟು ಅಶ್ಫಕ್ ಸೇರಿದಂತೆ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಸ್ತುತ ಈ ಎಲ್ಲಾ ಆರೋಪಿಗಳ ವಿರುದ್ಧ ಅತ್ಯಂತ ಕಠಿಣವಾದ “ಕೋಕಾ ಕಾಯಿದೆ” (KOCA – Karnataka Control of Organised Crimes Act) ಅಡಿಯಲ್ಲಿ ತನಿಖೆ ಮುಂದುವರಿದಿದೆ.

You may also like

News

ಮಂಡ್ಯ ASP ತಿಮ್ಮಯ್ಯ ಇನ್ನಿಲ್ಲ – ಪೊಲೀಸ್ ಇಲಾಖೆಯಲ್ಲಿ ಶೋಕ

ಉಡುಪಿ, ಮಣಿಪಾಲ, ಕೋಟದಲ್ಲೂ ಸೇವೆ ಸಲ್ಲಿಸಿದ್ದ ಅಧಿಕಾರಿ ಮಂಡ್ಯ ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕ (ASP) ತಿಮ್ಮಯ್ಯ ಅವರು ಅನಾರೋಗ್ಯದಿಂದ ಇಂದು ಅಕ್ಟೋಬರ್ 10ರಂದು ಶನಿವಾರ ನಿಧನರಾಗಿದ್ದಾರೆ.
News

ಬೆಳ್ತಂಗಡಿಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು–2026

ಯುವ ಸಮುದಾಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು–2026 ಕಾರ್ಯಕ್ರಮ ಅಕ್ಟೋಬರ್ 8ರಂದು

You cannot copy content of this page