September 5, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನ ಉದ್ಯಮಿ ಡೆನಿಸ್ ಡಿಸಿಲ್ವಾ ‘ಗ್ಲೋಬಲ್ ಬಿಸಿನೆಸ್ ಫೆಲೋಶಿಪ್ ಇಂಡಿಯಾ’ದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ

ಮಂಗಳೂರು ಮೂಲದ ಯುವ ನಾಯಕ ಹಾಗೂ ಉದ್ಯಮಿ ಡೆನಿಸ್ ಡಿಸಿಲ್ವಾ ಅವರು ‘ಗ್ಲೋಬಲ್ ಬಿಸಿನೆಸ್ ಫೆಲೋಶಿಪ್ ಇಂಡಿಯಾ’ (GBF) ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನವದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯ ‘ದಿ ಸೂರ್ಯ’ ಹೋಟೆಲ್‌ನಲ್ಲಿ ಮೇ 23ರಂದು ಶನಿವಾರ ನಡೆದ ಜಿಬಿಎಫ್ ವಾರ್ಷಿಕ ಜಾಗತಿಕ ಸಮ್ಮೇಳನದಲ್ಲಿ ಈ ಆಯ್ಕೆ ನಡೆದಿದೆ.

ದೇಶದ ವಿವಿಧ ಭಾಗಗಳ ನೂರಾರು ಕ್ರಿಶ್ಚಿಯನ್ ಉದ್ಯಮಿಗಳು, ವೃತ್ತಿಪರರು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದ ಪೂರ್ಣಾವಧಿ ಸಮ್ಮೇಳನದಲ್ಲಿ ಉದ್ಯಮಶೀಲತೆ, ನಾಯಕತ್ವ, ಪರಸ್ಪರ ಸಹಭಾಗಿತ್ವ ಮತ್ತು ಸಮುದಾಯ ಸಬಲೀಕರಣದ ಕುರಿತು ಚರ್ಚಿಸಲಾಯಿತು.

ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (CBCI) ಪ್ರಧಾನ ಕಾರ್ಯದರ್ಶಿ ಹಾಗೂ ಜಿಬಿಎಫ್ ಮುಖ್ಯ ಪೋಷಕರಾದ ಆರ್ಚ್‌ಬಿಷಪ್ ಪರಮಪೂಜ್ಯ ಅತೀ ವಂದನೀಯ ಡಾ. ಅನಿಲ್ ಜೆ.ಟಿ. ಕೌಟೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ವೈಎಂಸಿಎ ರಾಷ್ಟ್ರೀಯ ಅಧ್ಯಕ್ಷರಾದ ಜಸ್ಟಿಸ್ ಕುರಿಯನ್ ಜೋಸೆಫ್ ಮುಖ್ಯ ಅತಿಥಿಯಾಗಿದ್ದರು. ಎನ್‌ಸಿಸಿಐ ಪ್ರಧಾನ ಕಾರ್ಯದರ್ಶಿ ರೆವರೆಂಡ್ ಆಸಿರ್ ಎಬಿನೆಜರ್ ಸೇರಿದಂತೆ ಹಲವು ಪ್ರಮುಖ ಉದ್ಯಮಿಗಳು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ವಿವರ:

* ಉಪಾಧ್ಯಕ್ಷರು – ಬರ್ನಬಾಸ್ ನೋಂಗ್ಬಾ (ಶಿಲ್ಲಾಂಗ್)

* ಪ್ರಧಾನ ಕಾರ್ಯದರ್ಶಿ – ಜೋಸ್ ಕುರಿಯನ್ ಯೋಹಾನನ್ (ದೆಹಲಿ)

* ಕಾರ್ಯದರ್ಶಿ – ಅಡ್ವೊಕೇಟ್ ಪಿ.ಐ. ಜೋಸ್ (ದೆಹಲಿ)

* ಕೋಶಾಧಿಕಾರಿ – ಮ್ಯಾಥ್ಯೂ ಈಪನ್ (ಬೆಂಗಳೂರು)

* ಜಂಟಿ ಕೋಶಾಧಿಕಾರಿ – ರಾಹುಲ್ ಜಾರ್ಜ್ (ಬೆಂಗಳೂರು)

* ಕಾರ್ಯಕಾರಿ ಸಮಿತಿ ಸದಸ್ಯರು – ಫಾದರ್ ಟೋಮಿ ಜೋಸ್ (ದೆಹಲಿ) ಮತ್ತು ಆಸಿರ್ವಥಂ ಡಿ. (ದೆಹಲಿ)

ಮೌಲ್ಯಾಧಾರಿತ ಉದ್ಯಮಶೀಲತೆಗೆ ಕರೆ:

ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ಚ್‌ಬಿಷಪ್ ಪರಮಪೂಜ್ಯ ಅತೀ ವಂದನೀಯ ಡಾ. ಅನಿಲ್ ಜೆ. ಟಿ. ಕೌಟೊ ಅವರು, ಕ್ರಿಶ್ಚಿಯನ್ ಯುವಜನರು ಮತ್ತು ಮಹಿಳೆಯರು ಉದ್ಯಮಶೀಲತೆ ಹಾಗೂ ನಾಯಕತ್ವದ ಪಾತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದರು. ಉದ್ಯಮಶೀಲತೆಯು ಕೇವಲ ಲಾಭ ಗಳಿಕೆಗೆ ಸೀಮಿತವಾಗದೆ, ನೈತಿಕ ಮೌಲ್ಯಗಳು ಮತ್ತು ಸಮುದಾಯದ ಏಳಿಗೆಯನ್ನು ಒಳಗೊಂಡ ‘ಮೌಲ್ಯಾಧಾರಿತ ಉದ್ಯಮಶೀಲತೆ’ಯಾಗಿ ಹೊರಹೊಮ್ಮಬೇಕು ಎಂದು ಅವರು ಆಶಿಸಿದರು.

ಮುಖ್ಯ ಅತಿಥಿ ಜಸ್ಟಿಸ್ ಕುರಿಯನ್ ಜೋಸೆಫ್ ಮಾತನಾಡಿ, ಇಂದಿನ ಸಮಾಜಕ್ಕೆ ನೈತಿಕ ಉದ್ಯಮ ನಾಯಕತ್ವದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಯುವಜನರ ಕೌಶಲ್ಯಾಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಜಿಬಿಎಫ್ ಮತ್ತು ಭಾರತೀಯ ವೈಎಂಸಿಎ ಜೊತೆಯಾಗಿ ಕೆಲಸ ಮಾಡುವ ಆಶಯವನ್ನು ಅವರು ವ್ಯಕ್ತಪಡಿಸಿದರು.

‘ಸ್ಪರ್ಧೆಯ ಬದಲು ಸಹಭಾಗಿತ್ವ’ ಎಂಬ ವಿಷಯದಡಿ ನಡೆದ ಈ ಸಮ್ಮೇಳನದಲ್ಲಿ ಹೂಡಿಕೆ, ಸ್ಟಾರ್ಟ್‌ಅಪ್ ಪ್ರಸ್ತುತಿಗಳು ಮತ್ತು ಉದ್ಯಮ ರಂಗದ ವಿವಿಧ ಆಯಾಮಗಳ ಕುರಿತು ಸಂವಾದಗಳು ನಡೆದವು.

ಡೆನಿಸ್ ಡಿಸಿಲ್ವಾ ಅವರ ಪರಿಚಯ:

ಜಿಬಿಎಫ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೆನಿಸ್ ಡಿಸಿಲ್ವಾ ಅವರು ಕರ್ನಾಟಕ ವಲಯದ ಐಸಿವೈಎಂ (ICYM) ಮಾಜಿ ಪ್ರಾದೇಶಿಕ ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕರಾವಳಿ ಕರ್ನಾಟಕದ ಪ್ರಸಿದ್ಧ ಬ್ರಾಸ್ ಬ್ಯಾಂಡ್ ಉತ್ಸವ ‘ಪೆಪೆರೆ ಪೆಪೆ ಡುಮ್’ ಆಯೋಜಿಸುವ ‘ಆಮಿ ಆನಿ ಆಮ್ಚಿಂ’ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ಯಮ, ರಾಜಕೀಯ ಹಾಗೂ ಕೊಂಕಣಿ ಸಾಂಸ್ಕೃತಿಕ ರಂಗದಲ್ಲಿ ಅವರು ಸಕ್ರಿಯರಾಗಿದ್ದಾರೆ.

You may also like

News

ಹನೂರು ಅರಣ್ಯ ಗುಂಡಿನ ದಾಳಿ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಕ್ರೈಸ್ತ ಸಂಘಟನೆ ಒತ್ತಾಯ

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಡಿಜಿಪಿಗೆ ಸ್ಟ್ಯಾನಿ ಪಿಂಟೋ ಬೆಂಗಳೂರು ಮನವಿ ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ
News

ಸಮಾಜಸೇವೆಯ ಹಾದಿಗೆ ರಾಷ್ಟ್ರೀಯ ಕಿರೀಟ – ಕೋತ್ವಾಲ್ ಪದ್ಮನಾಭ ಶೇರುಗಾರ್‌ ಅವರಿಗೆ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ’

ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುವುದರ ಜೊತೆಗೆ ಸಮಾಜಮುಖಿ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರು ಪ್ರತಿಷ್ಠಿತ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ–2026’ ಗೆ ಆಯ್ಕೆಯಾಗಿದ್ದಾರೆ.

You cannot copy content of this page