September 5, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಿಲಾಗ್ರಿಸ್ ಚರ್ಚ್ ನ ಪ್ರದಾನ ಧರ್ಮಗುರು ಫಾದರ್ ಐವನ್ ಮೈಕಲ್ ರೊಡ್ರಿಗಸ್ ಕಥೊಲಿಕ್ ಸಭಾ ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಕ – ಬಿಷಪ್ ಆದೇಶ

ಜೂನ್ 1ರಂದು ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಅವರಿಂದ ಅಧಿಕಾರ ಸ್ವೀಕಾರ

ಭೇಟಿ ಮಾಡಿ ಹೂ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ನೇತೃತ್ವದ ತಂಡ

ಮಂಗಳೂರು ಧರ್ಮಕ್ಷೇತ್ರದ ಪ್ರತಿಷ್ಠಿತ ಸಂಘಟನೆಯಾದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ನೂತನ ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕರಾಗಿ ಮಿಲಾಗ್ರಿಸ್ ಚರ್ಚ್‌ನ ಪ್ರದಾನ ಧರ್ಮಗುರುಗಳಾದ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರು ನೇಮಕಗೊಂಡಿರುವ ಹಿನ್ನೆಲೆಯಲ್ಲಿ, ಮೇ 29ರಂದು ಶುಕ್ರವಾರ ಸಂಜೆ ಕಥೊಲಿಕ್ ಸಭಾ ಕೇಂದ್ರೀಯ ಸಮಿತಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿತು.

ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಆದೇಶದಂತೆ ನಡೆದಿರುವ ಈ ನೇಮಕಾತಿಯು ಇದೇ ಜೂನ್ 1ರಿಂದ ಸೋಮವಾರದಿಂದ ಜಾರಿಗೆ ಬಂದು, ಮೂರು ವರ್ಷಗಳ ಅವಧಿಗೆ ಇರಲಿದೆ. ಪ್ರಸ್ತುತ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ ಮಿಲಾಗ್ರಿಸ್ ಇಲ್ಲಿ ಪ್ರದಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರು, ಇತ್ತೀಚೆಗೆ ಬಿಜೈ ಚರ್ಚ್ ನಿಂದ ಪುತ್ತೂರಿನ ಮಾಯ್ ದೆ ದೇವುಸ್ ಚರ್ಚ್ ಗೆ ವರ್ಗಾವಣೆಯಾದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಅವರ ನೇತೃತ್ವದಲ್ಲಿ ನಡೆದ ಈ ಅಭಿನಂದನಾ ಭೇಟಿಯಲ್ಲಿ ಪ್ರದಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೆರೆಬೈಲ್, ಎರಡನೇ ಉಪಾಧ್ಯಕ್ಷ ಆಲ್ಬರ್ಟ್ ಸುನೀಲ್ ಮೊನಿಸ್ ಬೆಳ್ತಂಗಡಿ, ಖಜಾಂಚಿ ಫ್ರಾನ್ಸಿಸ್ ಮೊಂತೇರೊ ಮರಿಯಾಶ್ರಮ್, ಸಹ ಕಾರ್ಯದರ್ಶಿ ಸ್ಟ್ಯಾನಿ ಮಿರಾಂದ ನೀರುಡೆ ಹಾಗೂ ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಉಪಸ್ಥಿತರಿದ್ದು, ಹೂಗುಚ್ಛ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಅವರು, “ಕಳೆದ 47 ವರ್ಷಗಳಿಂದ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಕಥೊಲಿಕ್ ಸಭಾ ಸಂಘಟನೆಗೆ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರಂತಹ ಅನುಭವೀ, ಸರಳ ಹಾಗೂ ಸೇವಾ ಮನೋಭಾವದ ಧರ್ಮಗುರುಗಳ ನಾಯಕತ್ವ ದೊರೆತಿರುವುದು ನಮ್ಮೆಲ್ಲರ ಹೆಮ್ಮೆ. ಅವರ ಮಾರ್ಗದರ್ಶನದಲ್ಲಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಮಾತನಾಡಿ, “ಜೂನ್ 1ರಂದು ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಅವರಿಂದ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿರುವ ಫಾದರ್ ಐವನ್ ಅವರ ನಾಯಕತ್ವದಲ್ಲಿ ಕಥೊಲಿಕ್ ಸಭಾ ಹೊಸ ಚೈತನ್ಯ ಪಡೆದುಕೊಳ್ಳಲಿದೆ. ಅವರಿಗೆ ಉತ್ತಮ ಆರೋಗ್ಯ, ಶಕ್ತಿ ಮತ್ತು ದೈವ ಆಶೀರ್ವಾದ ಸದಾ ಜೊತೆಯಾಗಿರಲಿ” ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಂಗಳೂರು ಧರ್ಮಕ್ಷೇತ್ರ ಹಾಗೂ ಕಥೊಲಿಕ್ ಸಭಾ ಸಂಘಟನೆಯು ನಿರ್ಗಮಿತ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಅವರ ಸಮರ್ಪಿತ ಸೇವೆ, ದೂರದೃಷ್ಟಿಯ ನಾಯಕತ್ವ ಮತ್ತು ಸಮುದಾಯದ ಸಬಲೀಕರಣಕ್ಕಾಗಿ ನೀಡಿದ ಅಪಾರ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಿತು.

ನೂತನ ಆಧ್ಯಾತ್ಮಿಕ ನಿರ್ದೇಶಕರಾಗಿ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರು ಕಥೊಲಿಕ್ ಸಭಾದ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಆಧ್ಯಾತ್ಮಿಕ ಮಾರ್ಗದರ್ಶನ, ಪ್ರೇರಣೆ ಹಾಗೂ ಧೈರ್ಯ ತುಂಬಲಿದ್ದಾರೆ. ಸಂಘಟನೆಯು ತನ್ನ ನಾಗರಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಜವಾಬ್ದಾರಿಗಳನ್ನು ಸ್ಪಷ್ಟತೆ ಮತ್ತು ದೃಢತೆಯೊಂದಿಗೆ ನಿರ್ವಹಿಸಲು ಅವರು ಸಹಕಾರಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

‘ಸೇವೆ, ತ್ಯಾಗ ಮತ್ತು ಐಕ್ಯತೆ’ ಎಂಬ ಧ್ಯೇಯ ವಾಕ್ಯದಡಿ ಕಾರ್ಯನಿರ್ವಹಿಸುತ್ತಿರುವ ಕಥೊಲಿಕ್ ಸಭಾ, ಮಂಗಳೂರು ಧರ್ಮಕ್ಷೇತ್ರದ ಅಧಿಕೃತ ಮಾನ್ಯತೆ ಪಡೆದ ಸಂಘಟನೆಯಾಗಿದ್ದು, ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ, ರಾಜಕೀಯ ಜಾಗೃತಿ ಹಾಗೂ ಸೌಹಾರ್ದತೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರ ಆಧ್ಯಾತ್ಮಿಕ ನಾಯಕತ್ವದಲ್ಲಿ ಕಥೊಲಿಕ್ ಸಭಾ ಸಂಘಟನೆಯು ಐಕ್ಯತೆ, ಭಾಗವಹಿಸುವಿಕೆ ಮತ್ತು ಮೌಲ್ಯಾಧಾರಿತ ನಾಯಕತ್ವದ ಆದರ್ಶ ಮಾದರಿಯಾಗಿ ಮತ್ತಷ್ಟು ಬೆಳವಣಿಗೆ ಸಾಧಿಸಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

You may also like

News

ಶ್ರೀ ಕೃಷ್ಣನ ಆದರ್ಶ ಪಾಲಿಸಿದಾಗ ಧಾರ್ಮಿಕ ಆಚರಣೆಗೆ ಸಾರ್ಥಕತೆ – ಮಾಜಿ ಸಚಿವ ಬಿ. ರಮಾನಾಥ ರೈ

ಸೌಹಾರ್ದತೆಗೆ ಮಾದರಿಯಾದ ಮಾಣಿ ಯುವಕ ಮಂಡಲದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಭಾವೈಕ್ಯತೆ ಸಾರಿದ ವಿಶಿಷ್ಟ ಕಾರ್ಯಕ್ರಮ ಮಾಣಿ: ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಮಾತ್ರ ನಾವು
News

ಹನೂರು ಅರಣ್ಯ ಗುಂಡಿನ ದಾಳಿ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸಿಬಿಐ ತನಿಖೆಗೆ ಕ್ರೈಸ್ತ ಸಂಘಟನೆ ಒತ್ತಾಯ

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಡಿಜಿಪಿಗೆ ಸ್ಟ್ಯಾನಿ ಪಿಂಟೋ ಬೆಂಗಳೂರು ಮನವಿ ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ

You cannot copy content of this page