August 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದಲ್ಲಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭ

“ದೃಢಸಂಕಲ್ಪದಿಂದ ಸಾರ್ಥಕ ಜೀವನ ನಡೆಸಿ” – ಡಾ. ಡಿ. ವೀರೇಂದ್ರ ಹೆಗ್ಗಡೆ ಕರೆ

ಚತುರ್ವಿಧ ದಾನ ಪರಂಪರೆಯ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆಯವರು ಮಾಡುತ್ತಿರುವ ಸಾಮಾಜಿಕ ಸೇವೆಗಳು ಇಡೀ ಮಾನವಕುಲಕ್ಕೆ ಮಾದರಿಯಾಗಿವೆ ಎಂದು ಕೊಡಗು ವಿರಾಜಪೇಟೆಯ ಪೂಜ್ಯ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘಿಸಿದ್ದಾರೆ.

ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಧರ್ಮಸ್ಥಳದ ಯೋಜನೆಗಳು ಫಲಾನುಭವಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿವೆ. ವ್ಯಸನಮುಕ್ತರ ಮುಖದಲ್ಲಿನ ತೃಪ್ತಿಯೇ ಈ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ ಎಂದು ಅವರು ನುಡಿದರು.

ದೃಢಸಂಕಲ್ಪವೇ ಬದುಕಿನ ದಾರಿ: ಡಾ. ವೀರೇಂದ್ರ ಹೆಗ್ಗಡೆ :

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, “ವ್ಯಸನಮುಕ್ತರು ಒಮ್ಮೆ ತಳೆದ ದೃಢಸಂಕಲ್ಪಕ್ಕೆ ಬದ್ಧರಾಗಿರಬೇಕು. ಯಾವುದೇ ಆಮಿಷ ಅಥವಾ ಒತ್ತಡಗಳಿಗೆ ಮಣಿದು ಮತ್ತೆ ದುಶ್ಚಟಗಳ ದಾಸರಾಗಬಾರದು. ತಾವು ನೆಮ್ಮದಿಯ ಜೀವನ ನಡೆಸುವುದರ ಜೊತೆಗೆ, ಸಮಾಜದಲ್ಲಿರುವ ಇತರ ವ್ಯಸನಿಗಳೂ ಮುಕ್ತರಾಗಲು ಪ್ರೇರಣೆಯಾಗಬೇಕು” ಎಂದು ಕಿವಿಮಾತು ಹೇಳಿದರು.

ಮಹಿಳೆಯರ ನರಕಯಾತನೆಗೆ ಮುಕ್ತಿ – ಹೇಮಾವತಿ ವಿ. ಹೆಗ್ಗಡೆ

ಕಾರ್ಯಕ್ರಮದಲ್ಲಿ ವಾರ್ಷಿಕ ವರದಿ ಬಿಡುಗಡೆ ಮಾಡಿ ಮಾತನಾಡಿದ ಹೇಮಾವತಿ ವಿ. ಹೆಗ್ಗಡೆಯವರು, ಮದ್ಯಪಾನದಂತಹ ದುಶ್ಚಟಗಳು ಕೇವಲ ವ್ಯಕ್ತಿಯನ್ನಷ್ಟೇ ಅಲ್ಲ, ಇಡೀ ಕುಟುಂಬವನ್ನು ನಾಶ ಮಾಡುತ್ತವೆ. ಇದರಿಂದ ಮಹಿಳೆಯರು ನರಕಯಾತನೆ ಅನುಭವಿಸುವಂತಾಗುತ್ತದೆ. ದೇವರು ಕೊಟ್ಟ ಶ್ರೇಷ್ಠ ಮಾನವ ಜನ್ಮವನ್ನು ಬುದ್ಧಿ, ವಿವೇಕದಿಂದ ನೆಮ್ಮದಿಯ ಸಂಸಾರ ನಡೆಸಲು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ವ್ಯಸನಮುಕ್ತರು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಗೌರವಯುತ ಜೀವನ ನಡೆಸಲು ಕರೆ ನೀಡಿದರು.

 

ಸಾಧನೆಯ ಮೈಲಿಗಲ್ಲು: ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಸ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಇದುವರೆಗೆ 2,063 ಮದ್ಯವರ್ಜನ ಶಿಬಿರಗಳನ್ನು ನಡೆಸಿ, 1,38,000 ಜನರನ್ನು ವ್ಯಸನಮುಕ್ತರನ್ನಾಗಿ ಮಾಡಲಾಗಿದೆ. ಇದಕ್ಕಾಗಿ 75 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ ಎಂಬ ಪ್ರಮುಖ ಮಾಹಿತಿ ನೀಡಿದರು.

‘ಜಾಗೃತಿ ಅಣ್ಣ’ ಮತ್ತು ‘ಜಾಗೃತಿ ಮಿತ್ರ’ ಪ್ರಶಸ್ತಿ ಪ್ರದಾನ :

ದುಶ್ಚಟಗಳಿಂದ ಮುಕ್ತರಾಗಿ ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದ ಒಂಭತ್ತು ಮಂದಿ ನವಜೀವನ ಸದಸ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು:

* ಜಾಗೃತಿ ಅಣ್ಣ ಪ್ರಶಸ್ತಿ: ಮಂಜುನಾಯ್ಕ (ಹೊನ್ನಾವರ), ಮಣಿಕಂಠ (ನಂಜನಗೂಡು), ಜಗದೀಶ ಮಲ್ಲಪ್ಪ ಬ್ಯಾಳಿ (ಗದಗ ಜಿಲ್ಲೆಯ ನವಲಗುಂದ).

* ಜಾಗೃತಿ ಮಿತ್ರ ಪ್ರಶಸ್ತಿ: ಸಿದ್ದಪ್ಪ ಕಲ್ಲಪ್ಪ ನೀಲರಗಿ (ಹುಬ್ಬಳ್ಳಿ), ಅಂದಾನಿ ದುರದುಂಡೆಪ್ಪ (ಅಥಣಿ), ರಮೇಶ್ (ಶಿವಮೊಗ್ಗ), ಶಿವಾನಂದ ಕುರಿ (ಎಸ್.ಎಲ್. ಗದಗ), ರವಿಕುಮಾರ್ (ತುಮಕೂರು), ಸುಭಾಶ್ (ವಿಜಯಪುರದ ಬಬಲೇಶ್ವರ).

ಕಾರ್ಯಕ್ರಮದಲ್ಲಿ ಪಾನಮುಕ್ತರ ಪರವಾಗಿ ಕೂಡ್ಲಿಗಿಯ ಸತೀಶ್ ಮತ್ತು ತುಮಕೂರಿನ ಮಂಜುಳಾ ಅನಿಸಿಕೆ ಹಂಚಿಕೊಂಡರು. ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಸ್ವಾಗತಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ ಬಾದಾಮಿ ಧನ್ಯವಾದ ಸಲ್ಲಿಸಿದರು. ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

You may also like

News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ
News

ಸಂಚಾರ ನಿಯಮ ಉಲ್ಲಂಘನೆ – ಪುತ್ತೂರಿನಲ್ಲಿ ಗ್ಲಾಸ್ ಸ್ಟಿಕ್ಕರ್ ಅಳವಡಿಸಿದ ಹಾಗೂ ನಂಬರ್ ಪ್ಲೇಟ್ ಮರೆಮಾಚಿದ ವಾಹನಗಳಿಗೆ ಪೊಲೀಸರ ದಂಡ!

ಪುತ್ತೂರು: ವಾಹನಗಳ ಗ್ಲಾಸ್‌ಗಳಿಗೆ ದಟ್ಟವಾದ ಸ್ಟಿಕ್ಕರ್ ಅಳವಡಿಸಿ ಚಾಲನೆಗೆ ಅಡ್ಡಿಪಡಿಸುತ್ತಿದ್ದ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ಹಾಕಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ

You cannot copy content of this page