July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

114 ವರ್ಷದ ವಿಶ್ವಾಸದ ಪಯಣಕ್ಕೆ ಹೊಸ ಮೈಲಿಗಲ್ಲು – ದೇರಳಕಟ್ಟೆಯಲ್ಲಿ MCC ಬ್ಯಾಂಕ್‌ನ 22ನೇ ಶಾಖೆ ಉದ್ಘಾಟನೆ

114 ವರ್ಷಗಳ ಸುದೀರ್ಘ ಸೇವಾ ಪರಂಪರೆ, ಗ್ರಾಹಕರ ಅಚಲ ವಿಶ್ವಾಸ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ರಾಜ್ಯದ ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ MCC ಬ್ಯಾಂಕ್ ಲಿಮಿಟೆಡ್ ತನ್ನ 22ನೇ ಶಾಖೆ ಹಾಗೂ ಅತ್ಯಾಧುನಿಕ ATM ಅನ್ನು ಜೂನ್ 28ರಂದು ಭಾನುವಾರ ದೇರಳಕಟ್ಟೆಯ ಫಾದರ್ ಮುಲ್ಲರ್ ಕಾಂಪ್ಲೆಕ್ಸ್‌ನ ನೆಲ ಮಹಡಿಯಲ್ಲಿ ಲೋಕಾರ್ಪಣೆ ಮಾಡುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿತು.

ಕಾರ್ಯಕ್ರಮದಲ್ಲಿ MCC ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅವರು ನೂತನ ಶಾಖೆಯನ್ನು ಉದ್ಘಾಟಿಸಿದರು. ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ವಂದನೀಯ ಫಾದರ್ ನಿಲೇಶ್ ಕ್ರಾಸ್ತಾ ATM ಸೇವೆಗೆ ಚಾಲನೆ ನೀಡಿದರು. ಉರ್ಸುಲಿನ್ ಫ್ರಾನ್ಸಿಸ್ಕನ್ ಸಿಸ್ಟರ್ಸ್‌ನ ಸುಪೀರಿಯರ್ ಜನರಲ್ ವಂದನೀಯ ಸಿಸ್ಟರ್ ಮಿಲ್ಲಿ ಫೆರ್ನಾಂಡಿಸ್ ಸೇಫ್ ರೂಂ ಅನ್ನು ಉದ್ಘಾಟಿಸಿದರೆ, ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ವಿಭಾಗದ ಆಡಳಿತಾಧಿಕಾರಿ ವಂದನೀಯ ಫಾದರ್ ನೆಲ್ಸನ್ ದೀರಜ್ ಪಾಯ್ಸ್ ಬ್ಯಾಂಕಿನ ಇ-ಸ್ಟಾಂಪ್ ಸೇವೆಗೆ ಚಾಲನೆ ನೀಡಿದರು. ಅವರ್ ಲೇಡಿ ಆಫ್ ಮರ್ಸಿ ಚರ್ಚ್‌ ಪಾನೀರ್ ಇದರ ಧರ್ಮಗುರು ವಂದನೀಯ ಫಾದರ್ ವಿಕ್ಟರ್ ಡಿಮೆಲ್ಲೊ ನೂತನ ಶಾಖೆಗೆ ಆಶೀರ್ವಚನ ನೀಡಿದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅನಿಲ್ ಲೋಬೊ ಅವರು ಮಾತನಾಡಿ, 1912ರಲ್ಲಿ ಆರಂಭವಾದ ಎಂಸಿಸಿ ಬ್ಯಾಂಕ್ ಇಂದು 114 ವರ್ಷಗಳ ವಿಶ್ವಾಸವನ್ನು ಸಂಪಾದಿಸಿರುವುದು ಗ್ರಾಹಕರ ಬೆಂಬಲ ಹಾಗೂ ಸಿಬ್ಬಂದಿಯ ನಿಷ್ಠಾವಂತ ಸೇವೆಯ ಫಲ ಎಂದರು. RBI ಮಾರ್ಗಸೂಚಿಗಳ ಅನುಸಾರ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಗ್ರಾಹಕ ಸ್ನೇಹಿ ಸೇವೆ ಹಾಗೂ ಪಾರದರ್ಶಕ ಆಡಳಿತದಿಂದ ಉತ್ತಮ ಹೆಸರು ಗಳಿಸಿದೆ. ಡಿಐಸಿಜಿಸಿ (DICGC) ವಿಮಾ ರಕ್ಷಣೆಯ ಕಾರಣದಿಂದ ಗ್ರಾಹಕರ ಠೇವಣಿಗಳು ಸುರಕ್ಷಿತವಾಗಿದ್ದು, ಯಾವುದೇ ಆತಂಕವಿಲ್ಲದೆ ಬ್ಯಾಂಕಿನಲ್ಲಿ ವ್ಯವಹರಿಸಬಹುದು ಎಂದು ತಿಳಿಸಿದರು.

ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ ಆರಂಭಿಸಲಾದ ಐದು ಹೊಸ ಶಾಖೆಗಳು ಮೊದಲ ವರ್ಷದಲ್ಲೇ ತಲಾ ₹10 ಕೋಟಿಗೂ ಅಧಿಕ ವ್ಯವಹಾರ ದಾಖಲಿಸಿರುವುದು ಬ್ಯಾಂಕ್ ಮೇಲಿನ ಜನರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ದೇರಳಕಟ್ಟೆಯಲ್ಲಿರುವ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಐಟಿ ಸಂಸ್ಥೆಗಳು ಈ ಪ್ರದೇಶವನ್ನು ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಕೇಂದ್ರವನ್ನಾಗಿ ರೂಪಿಸುತ್ತಿದ್ದು, ಈ ಭಾಗದ ಅಭಿವೃದ್ಧಿಯಲ್ಲಿ ಎಂಸಿಸಿ ಬ್ಯಾಂಕ್ ಪ್ರಮುಖ ಪಾಲುದಾರನಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಂದನೀಯ ಫಾದರ್ ವಿಕ್ಟರ್ ಡಿಮೆಲ್ಲೊ ಮಾತನಾಡಿ, “ಜನಸೇವೆ ಎಂದರೆ ದೇವರ ಸೇವೆ” ಎಂಬ ತತ್ವದೊಂದಿಗೆ ಬ್ಯಾಂಕ್ ಸಿಬ್ಬಂದಿ ಪ್ರತಿಯೊಬ್ಬ ಗ್ರಾಹಕರನ್ನು ಸಮಾನ ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು. ಯಾವುದೇ ವ್ಯಕ್ತಿಯನ್ನು ಅವರ ಉಡುಪು, ಸಾಮಾಜಿಕ ಹಿನ್ನೆಲೆ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಅಳೆಯಬಾರದು ಎಂದು ಅವರು ಕಿವಿಮಾತು ಹೇಳಿದರು.

ವಂದನೀಯ ಸಿಸ್ಟರ್ ಮಿಲ್ಲಿ ಫೆರ್ನಾಂಡಿಸ್ ಮಾತನಾಡಿ, MCC ಬ್ಯಾಂಕ್ ಕೇವಲ ಹಣಕಾಸು ಸಂಸ್ಥೆಯಲ್ಲ, ಸಮಾಜದ ಆರ್ಥಿಕ ಬೆಳವಣಿಗೆಗೆ ಬೆನ್ನೆಲುಬಾಗಿರುವ ಸಂಸ್ಥೆಯಾಗಿದೆ ಎಂದರು. ಉಳಿತಾಯ ಸಂಸ್ಕೃತಿ ಬೆಳೆಸುವ ಜೊತೆಗೆ ಅಗತ್ಯವಿರುವವರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಬ್ಯಾಂಕ್ ಸಾವಿರಾರು ಕುಟುಂಬಗಳ ಆರ್ಥಿಕ ಭದ್ರತೆಯನ್ನು ಬಲಪಡಿಸಿದೆ ಎಂದು ಶ್ಲಾಘಿಸಿದರು.

ವಂದನೀಯ ಫಾದರ್ ನಿಲೇಶ್ ಕ್ರಾಸ್ತಾ ಮಾತನಾಡಿ, 146 ವರ್ಷಗಳ ಇತಿಹಾಸ ಹೊಂದಿರುವ ಫಾದರ್ ಮುಲ್ಲರ್ ಸಂಸ್ಥೆ ಹಾಗೂ 114 ವರ್ಷಗಳ ಪರಂಪರೆ ಹೊಂದಿರುವ ಎಂಸಿಸಿ ಬ್ಯಾಂಕ್ ಎರಡೂ ಸೇವೆ, ವಿಶ್ವಾಸ ಮತ್ತು ಮಾನವೀಯ ಮೌಲ್ಯಗಳ ಪ್ರತೀಕಗಳಾಗಿವೆ ಎಂದರು. ಬ್ಯಾಂಕಿಂಗ್ ಕೇವಲ ಹಣಕಾಸಿನ ವ್ಯವಹಾರವಲ್ಲ; ವ್ಯಕ್ತಿ ಹಾಗೂ ಸಮಾಜದ ಅಭಿವೃದ್ಧಿಗೆ ಮಾರ್ಗದರ್ಶಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಕೋಟೆಕಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಅವರು ಬ್ಯಾಂಕ್‌ನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿ, ದೇರಳಕಟ್ಟೆ ಸೇರಿದಂತೆ ಮಂಗಳೂರು ಭಾಗದಲ್ಲಿ ಇನ್ನಷ್ಟು ಶಾಖೆಗಳನ್ನು ಆರಂಭಿಸಿ ಜನರಿಗೆ ಗುಣಮಟ್ಟದ ಸೇವೆ ನೀಡುವಂತೆ ಹಾರೈಸಿದರು.

ಸಾಧಕರಿಗೆ ಸನ್ಮಾನ – ಸಮಾಜಮುಖಿ ಸೇವೆಗೆ ಧನಸಹಾಯ:

ಸಮಾಜ ಸೇವೆಯ ಭಾಗವಾಗಿ ಬ್ಯಾಂಕ್ ವತಿಯಿಂದ ದೇರಳಕಟ್ಟೆ ಭಾಗದ ವಿವಿಧ ಕ್ಷೇತ್ರಗಳ ಸಾಧಕರಾದ ಫ್ರ್ಯಾಂಕಿ ಫ್ರಾನ್ಸಿಸ್ ಕುಟಿನ್ಹಾ, ಆಲ್ವಿನ್ ಜೆರೊಮ್ ಡಿಸೋಜ, ಫಯಾಝ್ ಮಡೂರು, ಸಿಎ ಮ್ಯಾಕ್ಸಿಮ್ ಫೆರ್ನಾಂಡಿಸ್, ಉಗ್ಗಪ್ಪ ಪೂಜಾರಿ ಹಾಗೂ ಶಫಿ ಬಬ್ಬುಕಟ್ಟೆ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಬ್ಯಾಂಕ್ ವತಿಯಿಂದ ಸಮಾಜಮುಖಿ ಕಾರ್ಯಗಳಿಗೆ ಧನಸಹಾಯ ವಿತರಿಸಲಾಯಿತು. ಉರ್ಸುಲಿನ್ ಸಿಸ್ಟರ್ಸ್ ವಿಶೇಷ ಚೇತನ ಮಕ್ಕಳ ಶಾಲೆಗೆ ₹1 ಲಕ್ಷ, ವಿದ್ಯಾರ್ಥಿನಿ ಪ್ರಿನ್ಸಿತಾ ಡಿಸೋಜ ಅವರ ವಿದ್ಯಾಭ್ಯಾಸಕ್ಕೆ ₹25 ಸಾವಿರ, ಮರ್ಸಿ ಕೇರ್ ಚಾರಿಟೇಬಲ್ ಟ್ರಸ್ಟ್‌ಗೆ ₹50 ಸಾವಿರ ಹಾಗೂ ಓಲವಿನಹಳ್ಳಿ ಆಶ್ರಮಕ್ಕೆ ₹1 ಲಕ್ಷ ನೆರವು ನೀಡಲಾಯಿತು.

ನೂತನ ಶಾಖೆಯ ಒಳಾಂಗಣ ವಿನ್ಯಾಸಕ್ಕೆ ಕೊಡುಗೆ ನೀಡಿದ ಎಂಜಿನಿಯರ್ ಕಾರ್ತಿಕ್ ಕಿರಣ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳು ಹಾಗೂ ಗಣ್ಯರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕ ಆಂಡ್ರ್ಯೂ ಡಿಸೋಜ, ಡೇವಿಡ್ ಡಿಸೋಜ, ಮೆಲ್ವಿನ್ ವಾಸ್, ಜೆ.ಪಿ. ರೊಡ್ರಿಗಸ್, ಅನಿಲ್ ಪತ್ರಾವೊ, ಎಲ್ರಾಯ್ ಕಿರಣ್ ಕ್ರಾಸ್ತಾ, ಐರಿನ್ ರೆಬೆಲ್ಲೊ, ವಿನ್ಸೆಂಟ್ ಲಸ್ರಾದೊ, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಅಲ್ವಿನ್ ಪಿ. ಮೊಂತೇರೊ, ಮಹಾಪ್ರಬಂಧಕ ಸುನಿಲ್ ಮೆನೇಜಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ನಿರ್ದೇಶಕ ರೋಶನ್ ಡಿಸೋಜ ಸ್ವಾಗತಿಸಿದರು. ಶೈನಿ ವೀಭಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್ ಸಿಬ್ಬಂದಿ ಪ್ರಾರ್ಥನಾ ಗೀತೆ ಹಾಗೂ ಬ್ಯಾಂಕ್ ಗೀತೆಯನ್ನು ಹಾಡಿದರು. ಬಳಿಕ MCC ಬ್ಯಾಂಕ್‌ನ 114 ವರ್ಷಗಳ ಇತಿಹಾಸ ಹಾಗೂ ಸಾಧನೆಗಳನ್ನು ಪರಿಚಯಿಸುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ನೂತನ ದೇರಳಕಟ್ಟೆ ಶಾಖೆಯ ವ್ಯವಸ್ಥಾಪಕಿ ಜೂಲಿಯೆಟ್ ಡಿಸೋಜ ವಂದನಾರ್ಪಣೆ ಸಲ್ಲಿಸಿದರು.

114 ವರ್ಷಗಳ ವಿಶ್ವಾಸದ ಪಯಣವನ್ನು ಮುಂದುವರಿಸುತ್ತಿರುವ MCC ಬ್ಯಾಂಕ್, ದೇರಳಕಟ್ಟೆಯಲ್ಲಿ ಆರಂಭಿಸಿರುವ 22ನೇ ಶಾಖೆಯ ಮೂಲಕ ಗ್ರಾಹಕ ಸೇವೆ, ಸಮಾಜಮುಖಿ ಚಟುವಟಿಕೆ ಮತ್ತು ಆರ್ಥಿಕ ಅಭಿವೃದ್ಧಿಯತ್ತ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page