August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಡ್ಡ ಮತದಾನ ಆರೋಪಕ್ಕೆ ಧರ್ಮಸ್ಥಳದಲ್ಲಿ ತೆರೆ

ನೂರಾರು ಕಾರುಗಳ ಭರ್ಜರಿ ಮೆರವಣಿಗೆಯಲ್ಲಿ ಬಂದು ಮಂಜುನಾಥನ ಸನ್ನಿಧಿಯಲ್ಲಿ ಆಣೆ ಮಾಡಿದ ಬೇಲೂರು ಶಾಸಕ ಎಚ್.ಕೆ. ಸುರೇಶ್!

ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನದ ವಿವಾದ ಕರ್ನಾಟಕ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಇದರ ಬೆನ್ನಲ್ಲೇ ಬೇಲೂರು ಶಾಸಕ ಎಚ್.ಕೆ. ಸುರೇಶ್ ಅವರು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವ ಮೂಲಕ ತಮ್ಮ ಮೇಲಿನ ಆರೋಪಗಳಿಗೆ ಧಾರ್ಮಿಕವಾಗಿ ಉತ್ತರ ನೀಡಿದ್ದಾರೆ. ನೂರಕ್ಕೂ ಹೆಚ್ಚು ಕಾರುಗಳಲ್ಲಿ, ಮುನ್ನೂರಕ್ಕೂ ಅಧಿಕ ಬೆಂಬಲಿಗರ ದಂಡಿನೊಂದಿಗೆ ಧರ್ಮಸ್ಥಳಕ್ಕೆ ಆಗಮಿಸಿದ ಶಾಸಕರು ತಮ್ಮ ನಿಷ್ಠೆಯನ್ನು ಸಾಬೀತುಪಡಿಸಿದರು.

ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಶಾಸಕ ಸುರೇಶ್ ಅವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ಪವಿತ್ರ ನೇತ್ರಾವತಿ ನದಿಯಲ್ಲಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡು ಭಕ್ತಿಯಿಂದ ನಮಿಸಿದರು.

ಅಣ್ಣಪ್ಪಸ್ವಾಮಿ ಬೆಟ್ಟದಲ್ಲಿ ತೆಂಗಿನಕಾಯಿ ಸೇವೆ:

ದೇವಸ್ಥಾನಕ್ಕೆ ತೆರಳುವ ಮುನ್ನ ಅಣ್ಣಪ್ಪಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ ಶಾಸಕರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. “ನಾನು ಯಾವುದೇ ದ್ರೋಹ ಮಾಡಿಲ್ಲ. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ಆ ದೇವರೇ ಒಳ್ಳೆಯ ಬುದ್ಧಿ ನೀಡಲಿ” ಎಂದು ಪ್ರಾರ್ಥಿಸಿ, ಬೆಟ್ಟದಲ್ಲಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.

ಮಂಜುನಾಥನ ಸನ್ನಿಧಿಯಲ್ಲಿ ಆಣೆ ಪ್ರಮಾಣ:

ನಂತರ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಶಾಸಕರು ಹುಂಡಿಗೆ ಕಾಣಿಕೆ ಸಮರ್ಪಿಸಿದರು. ದೇವರ ಸನ್ನಿಧಿಯಲ್ಲಿ ನಿಂತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಬಿಜೆಪಿಯ ಶಿಸ್ತಿನ ಹಾಗೂ ನಿಷ್ಠಾವಂತ ಕಾರ್ಯಕರ್ತ. ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸವನ್ನು ನಾನು ಎಂದಿಗೂ ಮಾಡಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಗೇ ನನ್ನ ಮತ ಚಲಾಯಿಸಿದ್ದೇನೆ ಎಂದು ಮಂಜುನಾಥ ಸ್ವಾಮಿಯ ಸಾಕ್ಷಿಯಾಗಿ ಪ್ರಮಾಣ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದರು.

ತಮ್ಮ ರಾಜಕೀಯ ಬೆಳವಣಿಗೆಯನ್ನು ಸಹಿಸದ ವಿರೋಧಿಗಳು ಯಾವುದೇ ಆಧಾರವಿಲ್ಲದೆ ಇಂತಹ ಸುಳ್ಳು ಆರೋಪಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಶಾಸಕರು, ತಮ್ಮ ಬೆಂಬಲಿಗರ ಸಮ್ಮುಖದಲ್ಲಿ ಈ ಧಾರ್ಮಿಕ ಆಣೆ ಪ್ರಮಾಣ ಮಾಡುವ ಮೂಲಕ ವಿವಾದಕ್ಕೆ ಪೂರ್ಣವಿರಾಮ ಇಡಲು ಯತ್ನಿಸಿದ್ದಾರೆ.

You may also like

News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ
News

ಸಂಚಾರ ನಿಯಮ ಉಲ್ಲಂಘನೆ – ಪುತ್ತೂರಿನಲ್ಲಿ ಗ್ಲಾಸ್ ಸ್ಟಿಕ್ಕರ್ ಅಳವಡಿಸಿದ ಹಾಗೂ ನಂಬರ್ ಪ್ಲೇಟ್ ಮರೆಮಾಚಿದ ವಾಹನಗಳಿಗೆ ಪೊಲೀಸರ ದಂಡ!

ಪುತ್ತೂರು: ವಾಹನಗಳ ಗ್ಲಾಸ್‌ಗಳಿಗೆ ದಟ್ಟವಾದ ಸ್ಟಿಕ್ಕರ್ ಅಳವಡಿಸಿ ಚಾಲನೆಗೆ ಅಡ್ಡಿಪಡಿಸುತ್ತಿದ್ದ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ಹಾಕಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ

You cannot copy content of this page