August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ದೇಲಂತಬೆಟ್ಟು ಚರ್ಚ್ ಮಾದರಿ – ಕಥೊಲಿಕ್ ಸಭಾ ದೇಲಂತಬೆಟ್ಟು ಘಟಕ ಮುಂದಾಳತ್ವ

300 ಕೆ.ಜಿ. ತ್ಯಾಜ್ಯ ಬಳಸಿ ನಿರ್ಮಿಸಿದ ಪರಿಸರ ಸ್ನೇಹಿ ಆಸನಗಳ ಲೋಕಾರ್ಪಣೆ!

ಸರ್ವರಿಗೂ ಮಾದರಿಯಾದ ಪರಿಸರ ಪ್ರೇಮಿ ಧರ್ಮಗುರು ಫಾದರ್ ರಿಚರ್ಡ್ ಡಿಸೋಜ

ಪ್ಲಾಸ್ಟಿಕ್ ತ್ಯಾಜ್ಯದ ಸದ್ಬಳಕೆ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಂಗಳೂರು ಧರ್ಮಕ್ಷೇತ್ರದ ದೇಲಂತಬೆಟ್ಟು ಸಂತ ಪೌಲರ ದೇವಾಲಯದ ಧರ್ಮಕೇಂದ್ರದ ಜನರು ಒಂದು ಅಪರೂಪದ ಹಾಗೂ ಮಾದರಿ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ. ಕಥೊಲಿಕ್ ಸಭಾ ದೇಲಂತಬೆಟ್ಟು ಘಟಕದ ಮುಂದಾಳತ್ವ ಹಾಗೂ ಚರ್ಚ್‌ನ ಪರಿಸರ ಪ್ರೇಮಿ ಧರ್ಮಗುರುಗಳಾದ ವಂದನೀಯ ಫಾದರ್ ಫಾದರ್ ರಿಚರ್ಡ್ ಡಿಸೋಜ ಅವರ ಪ್ರೇರಣೆಯಿಂದ ಸುಮಾರು ಎಂಟು ತಿಂಗಳ ನಿರಂತರ ಪರಿಶ್ರಮದಿಂದ ಸಿದ್ಧಗೊಂಡ ಎರಡು ವಿಶಿಷ್ಟ ‘ಪರಿಸರ ಸ್ನೇಹಿ ಆಸನಗಳನ್ನು’ (Eco-benches) ಜೂನ್ 29ರಂದು ಸೋಮವಾರದಂದು ಉದ್ಘಾಟಿಸಲಾಯಿತು.

ಪೆರುವಾಯಿ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ಸೈಮನ್ ಡಿಸೋಜ ಅವರು ಈ ನೂತನ ಆಸನಗಳನ್ನು ಉದ್ಘಾಟಿಸಿ ಚರ್ಚ್ ಆವರಣದಲ್ಲಿ ಲೋಕಾರ್ಪಣೆಗೊಳಿಸಿದರು.

ನಾವೆಲ್ಲರೂ ಭೂಮಿಯ ಸಂರಕ್ಷಕರು:

ಉದ್ಘಾಟನಾ ಭಾಷಣ ಮಾಡಿದ ಫಾದರ್ ಸೈಮನ್ ಡಿಸೋಜ ಅವರು, “ಪ್ಲಾಸ್ಟಿಕ್ ತ್ಯಾಜ್ಯವು ಇಂದಿನ ದಿನಗಳಲ್ಲಿ ಮಣ್ಣು, ನೀರು ಹಾಗೂ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದು, ಇಡೀ ಪ್ರಕೃತಿಯನ್ನು ನಾಶಮಾಡುತ್ತಿದೆ. ಕ್ರಿಶ್ಚಿಯನ್ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ‘ಲಾವ್ದಾತೋ ಸಿ’ (Laudato si’) ವಿಶ್ವಪತ್ರದಲ್ಲಿ ತಿಳಿಸಿರುವಂತೆ, ನಾವೆಲ್ಲರೂ ನಮ್ಮ ಸಾರ್ವತ್ರಿಕ ಮನೆಯಾದ ಈ ಭೂಮಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದೇಲಂತಬೆಟ್ಟು ಧರ್ಮಕೇಂದ್ರದ ಜನರು ಇಂತಹ ಪ್ಲಾಸ್ಟಿಕ್ ಮುಕ್ತ ಪರಿಸರ ರೂಪಿಸಲು ಕೈಗೊಂಡ ಈ ನವೀನ ಪ್ರಯತ್ನ ಇಡೀ ಸಮಾಜಕ್ಕೇ ಒಂದು ದೊಡ್ಡ ಮಾದರಿ” ಎಂದು ಶ್ಲಾಘಿಸಿದರು.

320 ಬಾಟಲಿ, 300 ಕಿಲೋ ಪ್ಲಾಸ್ಟಿಕ್ ತ್ಯಾಜ್ಯದ ಸದ್ಬಳಕೆ:

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಫಾದರ್ ರಿಚರ್ಡ್ ಡಿಸೋಜ ಅವರು, “ಈ ಪರಿಸರ ಸ್ನೇಹಿ ಬೆಂಚುಗಳ ನಿರ್ಮಾಣದ ಹಿಂದೆ ಜನರ ಎಂಟು ತಿಂಗಳ ಕಠಿಣ ಪರಿಶ್ರಮವಿದೆ. ಸಾರ್ವಜನಿಕ ಪರಿಸರದಿಂದ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಬಾಟಲಿಗಳನ್ನು ಅತ್ಯಂತ ಜಾಗರೂಕತೆಯಿಂದ ಒಟ್ಟುಗೂಡಿಸಲಾಗಿದೆ. ಈ ಎರಡು ಆಸನಗಳ ನಿರ್ಮಾಣಕ್ಕಾಗಿ ಸುಮಾರು 320 ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಒಟ್ಟು 300 ಕಿಲೋಗ್ರಾಂನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗಿದೆ” ಎಂದು ಯೋಜನೆಯ ಸಂಪೂರ್ಣ ವಿವರಣೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಕಥೊಲಿಕ್ ಸಭಾ ದೇಲಂತಬೆಟ್ಟು ಘಟಕದ ಅಧ್ಯಕ್ಷ ರಾಜೇಶ್ ಕೊಪ್ಪಳ ಅವರು ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಬೋನಾ ಡಿಸೋಜ ಅವರು ಧನ್ಯವಾದ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ವೀಣಾ ಡಿಸೋಜ, ಮತ್ತು ಸದಸ್ಯರು ಹಾಗೂ ಧರ್ಮಕೇಂದ್ರದ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದು, ಈ ಪರಿಸರ ಪೂರಕ ಕಾರ್ಯಕ್ರಮ ಯಶಸ್ವಿಯಾಗಲು ಸಾಕ್ಷಿಯಾದರು.

You may also like

News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ
News

ಸಂಚಾರ ನಿಯಮ ಉಲ್ಲಂಘನೆ – ಪುತ್ತೂರಿನಲ್ಲಿ ಗ್ಲಾಸ್ ಸ್ಟಿಕ್ಕರ್ ಅಳವಡಿಸಿದ ಹಾಗೂ ನಂಬರ್ ಪ್ಲೇಟ್ ಮರೆಮಾಚಿದ ವಾಹನಗಳಿಗೆ ಪೊಲೀಸರ ದಂಡ!

ಪುತ್ತೂರು: ವಾಹನಗಳ ಗ್ಲಾಸ್‌ಗಳಿಗೆ ದಟ್ಟವಾದ ಸ್ಟಿಕ್ಕರ್ ಅಳವಡಿಸಿ ಚಾಲನೆಗೆ ಅಡ್ಡಿಪಡಿಸುತ್ತಿದ್ದ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ಹಾಕಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ

You cannot copy content of this page