August 7, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪತ್ರಕರ್ತ ಗಿರೀಶ್ ಪಿ.ಎಂ. ಚಿತ್ತಾರಿ ಅವರಿಗೆ ‘ಕನ್ನಡ ಪಯಸ್ವಿನಿ ಮಾಧ್ಯಮ ರತ್ನ’ ಪ್ರಶಸ್ತಿ

ಕಾಸರಗೋಡಿನ ಯುವ ಪ್ರತಿಭೆಗೆ ಒಲಿದ ಗೌರವ

ಗಡಿನಾಡಿನಲ್ಲಿ ಕನ್ನಡ ಡಿಂಡಿಮವನ್ನು ಮೊಳಗಿಸುತ್ತಿರುವ ಕಾಸರಗೋಡಿನ ಪ್ರತಿಷ್ಠಿತ ಸಂಸ್ಥೆಗಳಾದ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಇದೇ ಜುಲೈ 26ರಂದು ಹಮ್ಮಿಕೊಳ್ಳಲಾಗಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ“ದಲ್ಲಿ ಜಿಲ್ಲೆಯ ಹೆಮ್ಮೆಯ ಯುವ ಪತ್ರಕರ್ತ ಗಿರೀಶ್ ಪಿ.ಎಂ. ಚಿತ್ತಾರಿ ಅವರಿಗೆ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಮಾಧ್ಯಮ ರತ್ನ – ಅಚೀವ್ಮೆಂಟ್ ಪ್ರಶಸ್ತಿ 2026” ಅನ್ನು ಪ್ರದಾನ ಮಾಡಿ ಗೌರವಿಸಲಾಗುತ್ತಿದೆ.

ಮಾಧ್ಯಮ ಕ್ಷೇತ್ರ ಹಾಗೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಏಳಿಗೆಗಾಗಿ ಗಿರೀಶ್ ಅವರು ನೀಡುತ್ತಿರುವ ನಿರಂತರ ಕೊಡುಗೆ ಹಾಗೂ ಸಾರ್ಥಕ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಮತ್ತು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರ ಡಾ. ಕೆ. ವಾಮನ್ ರಾವ್ ಬೇಕಲ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಹುಮುಖ ಪ್ರತಿಭೆಯ ಸಾಧಕ:

ಕಾಸರಗೋಡು ಜಿಲ್ಲೆಯ ಚಿತ್ತಾರಿ ನಿವಾಸಿಯಾದ ಗಿರೀಶ್ ಪಿ.ಎಂ. ಅವರು ಮಲ್ಲಿಕಾರ್ಜುನ ಪಿ. ಮತ್ತು ರಾಜಲಕ್ಷ್ಮಿ ಕೆ.ಜೆ. ದಂಪತಿಯ ಸುಪುತ್ರ. ಕೇವಲ ಮಾಧ್ಯಮ ರಂಗ ಅಷ್ಟೇ ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲೂ ಅಪ್ರತಿಮ ಸಾಧನೆ ಮಾಡಿರುವ ಗಿರೀಶ್, ಮಂಗಳೂರು ವಿಶ್ವವಿದ್ಯಾಲಯದ 2022–24ನೇ ಸಾಲಿನ ಎಂ.ಎ. ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡಿರುವ ಅಪರೂಪದ ಪ್ರತಿಭೆಯಾಗಿದ್ದಾರೆ.

ಮುನ್ನಡೆಸಿದ ಸಮಾಜಮುಖಿ ಪತ್ರಿಕೋದ್ಯಮ:

ಪ್ರಸ್ತುತ ಅವರು ಕರಾವಳಿ ಭಾಗದ ಜನಪ್ರಿಯ ವಾಹಿನಿಯಾದ ‘ಅಭಿಮತ’ ದಲ್ಲಿ ಮಂಗಳೂರು ನಗರದ ಸುದ್ದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ವೃತ್ತಿಪರ ಹಾಗೂ ಜನಪರ ವರದಿಗಳ ಮೂಲಕ ಸಮಾಜಮುಖಿ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ.

ಪ್ರಶಸ್ತಿಗಳ ಸರಮಾಲೆ:

ಯುವ ವಯಸ್ಸಿನಲ್ಲೇ ಗಿರೀಶ್ ಅವರ ಸಾಧನೆಯ ಹೆಜ್ಜೆಗುರುತುಗಳು ದೊಡ್ಡದಾಗಿವೆ. ಅವರ ಸಾಧನೆಯನ್ನು ಮೆಚ್ಚಿ ಈಗಾಗಲೇ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ:

* ಕಾಸರಗೋಡು ಕನ್ನಡ ಭವನದ “ಭರವಸೆಯ ಬೆಳಕು” ಪ್ರಶಸ್ತಿ

* ಬೇಕಲ್ ರಾಮನಾಯಕರ ಪ್ರಶಸ್ತಿ

* ಚುಟುಕು ಸಿರಿ ರತ್ನ ಪ್ರಶಸ್ತಿ

* ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕೇರಳ–ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಇವುಗಳ ಜೊತೆಗೆ ವಿವಿಧ ರಾಮಕ್ಷತ್ರಿಯ ಸಮುದಾಯ ಸಂಘಟನೆಗಳಿಂದಲೂ ಗೌರವ ಸನ್ಮಾನಗಳಿಗೆ ಅವರು ಭಾಜನರಾಗಿದ್ದಾರೆ. ಇದೀಗ ಅವರ ಸಾಧನೆಯ ಮುಕುಟಕ್ಕೆ ‘ಕನ್ನಡ ಪಯಸ್ವಿನಿ ಮಾಧ್ಯಮ ರತ್ನ ರತ್ನ – ಅಚೀವ್ಮೆಂಟ್ ಪ್ರಶಸ್ತಿ 2026’ ಪ್ರಶಸ್ತಿಯ ಮತ್ತೊಂದು ಗರಿ ಸೇರ್ಪಡೆಯಾಗುತ್ತಿರುವುದು ಗಡಿನಾಡ ಕನ್ನಡಿಗರಲ್ಲಿ ಸಂತಸ ತಂದಿದೆ.

You may also like

News

ಮುದರಂಗಡಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜ ಗುಂಡಿಗೆ ಬಲಿ

ಮುದರಂಗಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರು ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾಗಿರುವ ಘಟನೆ ಇಂದು ಆಗಸ್ಟ್ 7ರಂದು
News

ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕಿ, ಹಿರಿಯ ಮಾಧ್ಯಮ ತಜ್ಞೆ ಡಾ. ವಹೀದಾ ಸುಲ್ತಾನ ನಿಧನ

ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (MCJ) ವಿಭಾಗದ ನಿವೃತ್ತ ಮುಖ್ಯಸ್ಥೆ ಹಾಗೂ ಹಿರಿಯ ಪ್ರಾಧ್ಯಾಪಕಿ 70 ವರ್ಷ ಪ್ರಾಯದ ಡಾ. ವಹೀದಾ ಸುಲ್ತಾನಾ ಅವರು

You cannot copy content of this page