August 7, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿ – ₹4.48 ಕೋಟಿಗೂ ಅಧಿಕ ಮೊತ್ತದ ರಾಜಿ

ವಿಚ್ಛೇದನದ ಹಾದಿಯಲ್ಲಿದ್ದ ದಂಪತಿ ಮತ್ತೆ ಒಂದಾದರು

ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಜುಲಾಯ್ 11ರಂದು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸಾವಿರಾರು ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡು ₹4.48 ಕೋಟಿಗೂ ಅಧಿಕ ಮೊತ್ತದ ರಾಜಿ ಮತ್ತು ವಸೂಲಾತಿ ದಾಖಲಾಗಿದೆ. ಇದೇ ವೇಳೆ ವಿಚ್ಛೇದನದ ಹಾದಿಯಲ್ಲಿದ್ದ ದಂಪತಿಯೊಂದು ಮತ್ತೆ ಒಂದಾಗಿ ದಾಂಪತ್ಯ ಜೀವನ ಮುಂದುವರಿಸಲು ನಿರ್ಧರಿಸಿದ ಹೃದಯಸ್ಪರ್ಶಿ ಘಟನೆ ಎಲ್ಲರ ಗಮನ ಸೆಳೆಯಿತು. ನ್ಯಾಯಾಲಯದ ವತಿಯಿಂದ ಆಯೋಜಿಸಲಾದ ಲೋಕ ಅದಾಲತ್‌ನಲ್ಲಿ ಸಿವಿಲ್, ಕ್ರಿಮಿನಲ್ ಹಾಗೂ ರಾಜಿಯಾಗಬಹುದಾದ ವಿವಿಧ ಪ್ರಕರಣಗಳನ್ನು ಪರಸ್ಪರ ಒಪ್ಪಂದದ ಮೂಲಕ ಇತ್ಯರ್ಥಪಡಿಸಲಾಯಿತು. ಒಟ್ಟು 19 ಸಿವಿಲ್ ಪ್ರಕರಣಗಳು ಇತ್ಯರ್ಥಗೊಂಡು ₹49,48,941, 257 ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಗೊಂಡು ₹13,00,124 ದಂಡ ಹಾಗೂ ಇತರೆ ಪಾವತಿಗಳು ವಸೂಲಿಯಾದವು. ಅಲ್ಲದೆ, 42,322 ದಾವಾಪೂರ್ವ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡು ₹3,86,26,969 ಮೊತ್ತದ ರಾಜಿ ಹಾಗೂ ವಸೂಲಾತಿ ದಾಖಲಾಗಿದೆ.

ಈ ಲೋಕ ಅದಾಲತ್‌ನ ಮತ್ತೊಂದು ವಿಶೇಷವೆಂದರೆ, 2025ರಲ್ಲಿ ಭಿನ್ನಾಭಿಪ್ರಾಯಗಳಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದ ದಂಪತಿಯೊಬ್ಬರು ಸಂಧಾನದ ಮೂಲಕ ತಮ್ಮ ಮನಸ್ತಾಪಗಳನ್ನು ಮರೆತು ಮತ್ತೆ ಒಂದಾಗಿ ಜೀವನ ಸಾಗಿಸಲು ಒಪ್ಪಿಗೆ ಸೂಚಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ.ಪಿ. ಅವರ ನೇತೃತ್ವದಲ್ಲಿ ನಡೆದ ಸಂಧಾನದಲ್ಲಿ ದಾಂಪತ್ಯ ಜೀವನದ ಮಹತ್ವ, ಕುಟುಂಬದ ಮೌಲ್ಯಗಳು ಹಾಗೂ ಪರಸ್ಪರ ಹೊಂದಾಣಿಕೆಯ ಅಗತ್ಯವನ್ನು ಮನವರಿಕೆ ಮಾಡಿಕೊಡಲಾಯಿತು. ನ್ಯಾಯಾಧೀಶರು, ಸಂಧಾನಕಾರರು ಹಾಗೂ ಉಭಯ ಪಕ್ಷಗಳ ವಕೀಲರ ಮನವೊಲಿಕೆಯ ಫಲವಾಗಿ ದಂಪತಿ ವಿಚ್ಛೇದನದ ನಿರ್ಧಾರ ಕೈಬಿಟ್ಟು ಹೊಸ ಬದುಕಿಗೆ ಕಾಲಿಡಲು ಸಮ್ಮತಿಸಿದರು. ಸಂಧಾನ ಯಶಸ್ವಿಯಾದ ಬಳಿಕ ನ್ಯಾಯಾಲಯದ ಆವರಣದಲ್ಲೇ ದಂಪತಿ ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡು ಹೊಸ ಜೀವನ ಆರಂಭಿಸುವ ಸಂಕಲ್ಪ ವ್ಯಕ್ತಪಡಿಸಿದರು. ಈ ಭಾವನಾತ್ಮಕ ಕ್ಷಣಕ್ಕೆ ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಗೂ ಸಾರ್ವಜನಿಕರು ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನಿಲ್ ಪ್ರಕಾಶ್ ಎಂ.ಪಿ., ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರಾಜೇಂದ್ರ ಕೆ.ಎಸ್., ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅವರಾದ ಕು. ಸೌಂದರ್ಯ ಎಂ., ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೊಸ್ತ ಎಂ., ಸಹಾಯಕ ಸರ್ಕಾರಿ ಅಭಿಯೋಜಕರಾದ ಹರಿಣಿ ಕುಮಾರಿ ಡಿ. ಹಾಗೂ ಸರಸ್ವತಿ, ಅಪರ ಸರ್ಕಾರಿ ವಕೀಲ ಬಿ. ವೆಂಕಟರಮಣ ಶೆಣೈ, ವಕೀಲರು, ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ರಾಷ್ಟ್ರೀಯ ಲೋಕ ಅದಾಲತ್ ಕೇವಲ ಪ್ರಕರಣಗಳ ಇತ್ಯರ್ಥಕ್ಕೆ ಸೀಮಿತವಾಗದೆ, ಕುಟುಂಬಗಳನ್ನು ಮತ್ತೆ ಒಂದುಗೂಡಿಸುವ ಮಾನವೀಯ ವೇದಿಕೆಯಾಗಿಯೂ ತನ್ನ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

You may also like

News

ನೀರುಮಾರ್ಗದ ಚರ್ಚ್ ನ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಸಾಂಪ್ರದಾಯಿಕ ಆಹಾರ ಹಬ್ಬದ ಸಂಭ್ರಮ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ನೀರುಮಾರ್ಗದ ಸಂತ ಜೋಸೆಫ್ ಕಾರ್ಮಿಕರ ದೇವಾಲಯದ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ‘ಸಾಂಪ್ರದಾಯಿಕ ಆಹಾರ ಹಬ್ಬ’
News

Father Muller College of Nursing Strengthens Academic Collaborations Through Two more Strategic MoUs on Palliative Care and Counselling

Reinforcing its commitment to holistic nursing education, interdisciplinary learning, and community-oriented healthcare, Father Muller School & College of Nursing (FMCON)

You cannot copy content of this page